ಶ್ರೀರಂಗಪಟ್ಟಣ: ಕೇರಳ ರಾಜ್ಯದಲ್ಲಿ ನಿಷೇದಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸೇರಿದಂತೆ ಸಂಗ್ರಹಣೆ ಘಟಕದ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ ಕೇರಳ ರಾಜ್ಯಕ್ಕೆ ಸೇರಿದ ಲಾರಿಗಳನ್ನು ಮಂಗಳ ವಾರ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಪಾಲಹಳ್ಳಿ ಬಳಿಯ ಮಹದೇವು ಅವರ ಜಮೀನು ಮತ್ತು ಲೋಕೇಶ್ ಆಲೆಮನೆಯಲ್ಲಿ ರಾಶಿಗಟ್ಟಲೆ ತುಂಬಿರುವ ತ್ಯಾಜ್ಯ ಘಟಕವನ್ನು ತಹಶಿಲ್ದಾರ್ ಎಂ.ವಿ.ರೂಪಾ ಮತ್ತು ತಂಡ ಪತ್ತೆ ಮಾಡಿದ್ದಾರೆ. ಗ್ರಾಮದ ವೆಂಕಟೇಶ್ ಜಮೀನಿನಲ್ಲಿ ಮತ್ತು ಲೋಕೇಶ್ ಆಲೆಮನೆಯಲ್ಲಿ ಮೈಸೂರಿನ ರಿಜ್ವಾನ್, ಸಲೀಂಖಾನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಈ ಇಬ್ಬರೂ ಕೇರಳದಿಂದ ಲಾರಿಗಳಲ್ಲಿ ತ್ಯಾಜ್ಯ ಸರಿಸಿ ವಿಂಗಡಿಸಿ ಬೇರೆಡೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕೇರಳದಿಂದ ತರಿಸಿದ ತ್ಯಾಜ್ಯವನ್ನು ಬೇರ್ಡ್ಪಿಸಿ ರಬ್ಬರ್ ವಸ್ತುಗಳನ್ನು ಸ್ಥಳೀಯ ಆಲೆಮನೆಗಳಿಗೆ ಮಾರಾಟ ಮಾಡುತ್ತಿದ್ದೇವೆ ಎಂದು ಸಲೀಂಖಾನ್ ಪತ್ನಿ ಶಹೀನ್ ತಾಜ್ ತಿಳಿಸಿದ್ದಾರೆ. ಕೇರಳಕ್ಕೆ ಸೇರಿದ ಕಸ ತುಂಬಿದ ಲಾರಿ ಪಾಲಹಳ್ಳಿ ಕಡೆ ಹೋಗುತ್ತಿದ್ದುದನ್ನು ಕಂಡ ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ತ್ಯಾಜ್ಯ ಸಂಗ್ರಹ ಘಟಕಗಳನ್ನು ಪತ್ತೆ ಹಚ್ಚಿದ್ದಾರೆ. ಕೇರಳ ರಾಜ್ಯ ನಿಷೇಧ ಮಾಡಿರುವ ಪ್ಲಾಸ್ಟಿಕ್ ಚಪ್ಪಲಿ, ಕವರ್, ಮದ್ಯದ ಬಾಟಲ್, ನೀರಿನ ಬಾಟಲ್, ಬಟ್ಟೆ ಚೂರು ಸೇರಿದಂತೆ ಅನುಪಯುಕ್ತ ತ್ಯಾಜ್ಯವನ್ನು ಕರ್ನಾಟಕ್ಕೆ ತಂದು ರಸ್ತೆ ಬದಿಗಳಲ್ಲಿ ಬಿಸಾಡಿ, ಆಲೆ ಮನೆಗಳಿಗೆ ಸಾಗಣೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದು ಕೇರಳದಿಂದ ತ್ಯಾಜ್ಯ ತಂದು ಸಂಗ್ರಹಿಸಿಡುತ್ತಿದ್ದ ಎರಡು ಘಟಕಗಳನ್ನು ಪತ್ತೆ ಮಾಡಿದ್ದೇವೆ. ತ್ಯಾಜ್ಯ ಸಂಗ್ರಹಿಸಿದವರು ಮತ್ತು ಜಮೀನು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಪರಿಸರ ಇಲಾಖೆಗೂ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಎಂ.ವಿ.ರೂಪಾ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಉಮೇಶ್, ಎಲ್.ಪ್ರಭು, ದಫೇದಾರ್ ಸಿದ್ದೇಗೌಡ ಪಾಲ್ಗೊಂಡಿದ್ದರು.
ನಿತ್ಯ ಲಾರಿಗಳಲ್ಲಿ ಕರ್ನಾಟಕಕ್ಕೆ ರವಾನೆ: ಪ್ರತಿನಿತ್ಯ ಹತ್ತಾರು ಲಾರಿಗಳ ಮೂಲಕ ಕೇರಳದ ಕಾರ್ಖಾನೆಗಳಲ್ಲಿ ಬಳಸಿ ಬಿಸಾಡುವ ಅನುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವ ದಂಧೆಯಲ್ಲಿ ಮಧ್ಯವರ್ತಿಗಳು ತೊಡಗಿದ್ದಾರೆ. ಮಧ್ಯವರ್ತಿಗಳು ತಮ್ಮ ರಾಜ್ಯದಲ್ಲಿ ನಿಷೇಧವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕರ್ನಾಟಕಕ್ಕೆ ಸಾಗಿಸಲು ಲಾರಿಗಳಿಗೆ ದುಪ್ಪಟ್ಟು ಬಾಡಿಗೆ ನೀಡಿ ಕಳುಹಿಸುತ್ತಿದ್ದಾರೆ. ಲಾರಿ ಮಾಲೀಕರು ಹಾಗೂ ಚಾಲಕರು, ಇಲ್ಲಿನ ಹೆದ್ದಾರಿ, ರಸ್ತೆ ಬದಿ, ಆಲೆ ಮನೆಗಳಿಗೆ ಸಾಗಣೆ ಮಾಡಿ ಪರಿಸರ ಹಾಳು ಮಾಡುತ್ತಿರುವುದು ಬೆಳಕಿಗೆ ಬಂದಿದೆ.