Advertisement

ನಿಮ್ಮನ್ನು ವೇಸ್ಟ್‌ ಆಗಿಸ್ತಿದೆ ವಾಟ್ಸ್ಯಾಪ್‌!

11:08 AM Dec 12, 2017 | |

“ಇಲ್ಲ, ನಾನು ವಾಟ್ಸ್ಯಾಪ್‌ ಯೂಸ್‌ ಮಾಡ್ತಿಲ್ಲ…’ ಹಾಗಂತ ಯಾರಾದ್ರೂ ಹೇಳಿದರೆ, ಇವನ್ಯಾವ ಸೀಮೆ ಗುಗ್ಗು ಅಂತ ನೋಡೋ ಕಾಲ ಇದು. ಯಾಕಂದ್ರೆ, ಹಳ್ಳಿಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್‌ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್‌ ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್‌ ಅನ್ನೋದು ಕೇವಲ ಆ್ಯಪ್‌ ಆಗಿ ಉಳಿಯದೆ, ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ. ಒಂದೆರಡು ಗಂಟೆ ಇಂಟರ್ನೆಟ್‌ ಆಫ್ ಮಾಡಿ ಸುಮ್ಮನೆ ಕುಳಿತುಕೊಳ್ಳಿ. ವಾಟ್ಸ್ಯಾಪ್‌ ಕಡೆಗೆ ನಿಮ್ಮ ಗಮನ ಎಳೆಯದಿದ್ದರೆ, ನೀವು ಈ ಗೀಳಿನಿಂದ ಸೇಫ್ ಅಂತ ಅರ್ಥ. ಹಾಗಾದ್ರೆ, ಅತಿಯಾದ ವಾಟ್ಸ್ಯಾಪ್‌ ಬಳಕೆಯಿಂದ ನಿಮಗೆ ಏನೇನು ನಷ್ಟ ಆಗ್ತಿದೆ ಗೊತ್ತಾ?

Advertisement

1. ಸಮಯ ಹಾಳು 
ನೋಡೋಣ, ಯಾರಾದ್ರೂ ಆನ್‌ಲೈನ್‌ ಇದ್ದಾರ ಅಂತ ಚೆಕ್‌ ಮಾಡುವುದರಲ್ಲೇ ದಿನಕ್ಕೆ ಕನಿಷ್ಠ 30 ನಿಮಿಷ ವ್ಯರ್ಥವಾಗುತ್ತದೆ. ದಿನಕ್ಕೆ ಅರ್ಧ ಗಂಟೆ ಅಂತಾದ್ರೆ, ವಾರಕ್ಕೆ, ತಿಂಗಳಿಗೆ ಎಷ್ಟಾಗುತ್ತೆ ಲೆಕ್ಕ ಹಾಕಿ? ಪ್ರತಿಸಲ ಆನ್‌ಲೈನ್‌ ಬಂದಾಗಲೂ, ಯಾರಾದ್ರೂ ಚಾಟ್‌ಗೆ ಸಿಗ್ತಾರಾ ಅಂತ ಹುಡುಕೋದು ಕೂಡ ಕೆಲವರಿಗೆ ಚಟವಾಗಿಬಿಟ್ಟಿದೆ. ಹೀಗೆ ಮಾಡೋದಿಂದ್ರ ಆಗೋ ಪ್ರಯೋಜನವಾದ್ರೂ ಏನು? ಅಂತಿಮವಾಗಿ ನಿಮಗೆ ಸಿಕ್ಕಿದ್ದಾದರೂ ಏನು? ಸೊನ್ನೆ! 

2. ಡಿಪಿ: ಫೋಟೋ ಅಷ್ಟೇ ಅಲ್ಲ!
ವಾಟ್ಸಾéಪ್‌ ಡಿಪಿ ಅಥವಾ ಡಿಸ್‌ಪ್ಲೇ ಪಿಕ್ಚರ್‌ ಈಗ ಕೇವಲ ಫೋಟೊ ಮಾತ್ರ ಆಗಿ ಉಳಿದಿಲ್ಲ. ನಿಮ್ಮ ಬದುಕನ್ನು ಎಲ್ಲರೆದುರು ಬಿಂಬಿಸುವ ಸಾಧನವಾಗಿ ಬದಲಾಗಿದೆ. ಎಲ್ಲರೂ ಮೆಚ್ಚುವಂಥ ಫೋಟೊವನ್ನು ಸೆಲೆಕ್ಟ್ ಮಾಡುವುದೇ ದೊಡ್ಡ ಸವಾಲು. ಈಗಂತೂ ನಿಮ್ಮ ಡಿಪಿಯನ್ನು ಯಾರ್ಯಾರು ನೋಡಿದ್ದಾರೆ, ನೋಡಿಲ್ಲ ಅಂತಲೂ ಗೊತ್ತಾಗುತ್ತೆ. “ಅಯ್ಯೋ ಅವನು/ಳು ನನ್ನ ಡಿಪಿ ಚೆಕ್‌ ಮಾಡಿಲ್ಲ. ಇನ್ನೂ ಚೆಂದದ ಫೋಟೊ ಹಾಕ್ತೀನಿ’ ಅಂತ ಅರ್ಧ ಗಂಟೆಗೊಮ್ಮೆ ಡಿಪಿ ಬದಲಿಸುತ್ತಾರೆ. ಜಗ ಮೆಚ್ಚುವ ಡಿಪಿಗಾಗಿ ಹಂಬಲಿಸುತ್ತಾ, ಅದಕ್ಕಾಗಿಯೇ ಫೋಟೊ ಕ್ಲಿಕ್ಕಿಸಿಕೊಳ್ಳುವವರೂ ಇದ್ದಾರೆ. ಇದರಿಂದ ನಿಮ್ಮೊಳಗೆ ಆತ್ಮರತಿ ಬೆಳೆಯುತ್ತಿದೆ. ಹೊರಜಗತ್ತಿಗೆ ನಿಮ್ಮ ಮೇಲಿನ ಗಂಭೀರತೆ ಹೊರಟುಹೋಗುತ್ತಿದೆ.

3. ಫೋನೇ ಇಲ್ಲ, ಮೆಸೇಜೆ ಎಲ್ಲಾ…
ವಾಟ್ಸ್ಯಾಪ್‌ ಬರುವುದಕ್ಕಿಂತಲೂ ಮುಂಚೆ, ಪ್ರೀತಿಪಾತ್ರರಿಗೆ ಆಗೊಮ್ಮೆ, ಈಗೊಮ್ಮೆಯಾದರೂ ಫೋನ್‌ ಮಾಡುತ್ತಿದ್ದೆವು. ಆದರೆ, ಈಗ ವಾಟ್ಸ್ಯಾಪ್‌ನಲ್ಲಿ ಮೆಸೇಜ್‌ ಕಳಿಸಿದರೆ ಮುಗಿಯಿತು. ಇನ್ನೂ ದುರಂತವೆಂದರೆ, ಮದುವೆ ಕರೆಯೋಲೆಗಳೂ ವಾಟ್ಸ್ಯಾಪ್‌ನಲ್ಲೇ ತಲುಪುತ್ತಿವೆ. ಸಂಬಂಧವನ್ನು ಗಟ್ಟಿಯಾಗಿಸಬೇಕಿದ್ದ ವಾಟ್ಸ್ಯಾಪ್‌ನಿಂದಲೇ ಮನುಷ್ಯ- ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ವ್ಯಕ್ತಿ ತನಗೆ ಗೊತ್ತಿಲ್ಲದಂತೆ, ಆತ್ಮೀಯನೊಂದಿಗೆ ದೂರವಾಗುತ್ತಿದ್ದಾನೆ. 

4. ಟಿಕ್‌ ಟಿಕ್‌ ಬ್ಲೂ ಟಿಕ್‌
ನಾನು ಮೆಸೇಜ್‌ ಕಳಿಸಿ ಆಗಲೇ ಅರ್ಧ ಗಂಟೆಯಾಯ್ತು. ಇನ್ನೂ ಸಿಂಗಲ್‌ ಟಿಕ್‌ ಇದೆ, ಬ್ಲೂ ಟಿಕ್‌ ಬಂದಿದೆ, ಆದ್ರೂ ರಿಪ್ಲೆ„ ಮಾಡಿಲ್ಲ, ಆನ್‌ಲೈನ್‌ ಇದ್ದಾನೆ, ಆದ್ರೂ ನನ್ನ ಮೆಸೇಜ್‌ ನೋಡದೆ ನಿರ್ಲಕ್ಷಿಸುತ್ತಿದ್ದಾನೆ, ಸಿಂಗಲ್‌ ಟಿಕ್‌ ಅಷ್ಟೇ ಇದೆ ಅವಳೇನಾದ್ರೂ ನನ್ನನ್ನ ಬ್ಲಾಕ್‌ ಮಾಡಿದ್ಲಾ..? ಮೆಸೇಜ್‌ ಮಾಡಿದಾಗ ಮೂಡುವ ಟಿಕ್‌ಗಳು ಇಂಥವೆಲ್ಲಾ ಟೆನನ್‌ಗಳನ್ನು ಸೃಷ್ಟಿಸುತ್ತಿವೆ. ನಿಮ್ಮನ್ನು ಅನುಮಾನದ ಗೂಡಾಗಿಸುತ್ತಿದೆ. 

Advertisement

5. ನಿಮ್ಮ ಫೋನು, ಕಸದ ಬುಟ್ಟಿ!
ಪ್ರೈಮರಿ ದೋಸ್ತಾಗಳು, ಕ್ರೇಝಿ ಕ್ಲಾಸ್‌ಮೇಟ್ಸ್‌, ಓಲ್ಡ್‌ ಫ್ರೆಂಡ್ಸ್‌ ಅಸೋಸಿಯೇಷನ್‌… ಎಂಬಿತ್ಯಾದಿ ವಾಟ್ಸ್ಯಾಪ್‌ ಗ್ರೂಪಿಗೆ ನೀವು ಸದಸ್ಯರಾಗಿರುತ್ತೀರಿ. ಅಲ್ಲಿ ಬೆಳಗ್ಗೆ, ರಾತ್ರಿ ಬರುವ ಗುಡ್‌ ಮಾರ್ನಿಂಗ್‌, ಗುಡ್‌ನೈಟ್‌ ಮೆಸೇಜ್‌ಗಳು, ಮೀಮ್ಸ್‌, ಹಳಸಲು ಜೋಕ್‌ಗಳಿಂದಲೇ ಫೋನ್‌ ಮೆಮೊರಿ ತುಂಬಿ ಮೊಬೈಲ್‌ ದಿನಕ್ಕೊಮ್ಮೆ ಹ್ಯಾಂಗ್‌ ಆಗುತ್ತದೆ. ಎಷ್ಟೇ ಬೇಡ ಬೇಡ ಅಂದರೂ, ಇಂಥ ಗ್ರೂಪ್‌ಗ್ಳಿಂದ ದೂರ ಉಳಿಯುವುದು ಕಷ್ಟದ ವಿಷಯ. ವಾಟ್ಸ್ಯಾಪ್‌ ಕಾರಣದಿಂದಲೇ ನಿಮ್ಮ ಫೋನು ಕಸದ ಬುಟ್ಟಿ ಆಗಿರುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next