Advertisement

ಬಳಸದೇ ಪಾಳು ಬಿದ್ದ ಸಬ್‌ ವೇಗಳು

12:33 PM May 08, 2018 | |

ಬೆಂಗಳೂರು: ಎತ್ತ ನೋಡಿದರೂ ಕಸದ ರಾಶಿ, ದುರ್ವಾಸನೆ, ಗೋಡೆಗಳ ಮೇಲೆ ಅಶ್ಲೀಲ ಬರಹಗಳು, ಮುಂದೆ ಸಾಗಿದರೆ ಕತ್ತಲು, ಕೆಲವು ಕಡೆ ಮಳೆ ನೀರು ನಿಂತು ಹಬ್ಬಿರುವ ಪಾಚಿ..! ಇದು ನಗರದ ಬಹುತೇಕ ಪಾದಾಚಾರಿಗಳ ಸುರಂಗ ಮಾರ್ಗಗಳಲ್ಲಿ ಕಂಡು ಬರುವ ದೃಶ್ಯ.

Advertisement

ರಸ್ತೆ ದಾಟಲು ಪಾದಚಾರಿಗಳ ಅನುಕೂಲಕ್ಕಾಗಿ ನಗರಾದ್ಯಂತ ಕೋಟ್ಯಂತರ ರೂ. ಖರ್ಚು ಮಾಡಿ 20ಕ್ಕೂ ಹೆಚ್ಚು ಪಾದಚಾರಿ ಸುರಂಗ ಮಾರ್ಗಗಳನ್ನು ನಿರ್ಮಿಸಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಪಾಳುಬಿದ್ದಿವೆ. ಜನ ಇವುಗಳನ್ನು ಬಳಸುವುದಿರಲಿ, ಪಕ್ಕದಲ್ಲಿ ಹಾದು ಹೋಗಲು ಹಿಂದೇಟು ಹಾಕುತ್ತಿದ್ದಾರೆ.  

ಪಾದಚಾರಿಗಳು ರಸ್ತೆ ದಾಟುವ ವೇಳೆ ಸಂಭವಿಸುತ್ತಿದ್ದ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಬಿಬಿಎಂಪಿ ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಳಾದ ಕೆ.ಆರ್‌.ವೃತ್ತ, ಮಲ್ಲೇಶ್ವರ, ನೃಪತುಂಗ ರಸ್ತೆ, ಚಾಲುಕ್ಯ ಹೋಟೆಲ್‌, ಶೇಷಾದ್ರಿ ರಸ್ತೆ, ಬಸವೇಶ್ವರ ಸರ್ಕಲ್ ಬಳಿ,

ಸಿಟಿ ಮಾರ್ಕೆಟ್‌, ಕಬ್ಬನ್‌ ಪಾರ್ಕ್‌, ಪುರಭವನ ಮುಂಭಾಗದ ರಸ್ತೆ, ವಿಜಯನಗರ, ಗಂಗಾನಗರ, ಶಿವಾಜಿನಗರ ಸೇರಿದಂತೆ ಹಲವಾರು ಕಡೆ ಪಾದಚಾರಿ ಸುರಂಗ ಮಾರ್ಗಗಳನ್ನು ನಿರ್ಮಿಸಿದೆ. ಆದರೆ, ಸಮಪರ್ಕವಾಗಿ ಅವುಗಳ ನಿರ್ವಹಣೆಗೆ ಮುಂದಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬಳಕೆಯಾಗುತ್ತಿಲ್ಲ. 

ಬಿಬಿಎಂಪಿಯಿಂದಲೇ ಬೀಗ: ಹೆಚ್ಚು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಚಾರಿಸುವಂತಹ ನೃಪತುಂಗ ರಸ್ತೆ, ಬಹುಮಹಡಿ ಕಟ್ಟಡ, ಚಾಲುಕ್ಯ ವೃತ್ತ ಹಾಗೂ ರಾಜಭವನ ರಸ್ತೆಯಲ್ಲಿರುವ ಸುರಂಗ ಮಾರ್ಗಗಳು ಜನರ ಬಳಕೆಗೆ ಲಭ್ಯವಿದ್ದರೂ ಪಾಲಿಕೆಯಿಂದಲೇ ಅವುಗಳಿಗೆ ಬೀಗ ಹಾಕಲಾಗಿದೆ. ಈ ಜಾಗಗಳಲ್ಲಿ ಇಂದಿಗೂ ಅಸುರಕ್ಷತೆಯ ಭಯದಿಂದಲೇ ಜನ ರಸ್ತೆ ದಾಟುತ್ತಿದ್ದಾರೆ. 

Advertisement

ಮಳೆ ನೀರು ತುಂಬಿ ಕೊಳ: ಸಂಪೂರ್ಣ ಅವೈಜ್ಞಾನಿಕವಾಗಿ ಈ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದ್ದು, ತಗ್ಗು ಪ್ರದೇಶಗಳಾಗಿರುವುದರಿಂದ ಮಳೆ ಬಂದರೆ ರಸ್ತೆಯ ನೀರೆಲ್ಲಾ ಹರಿದು ಬಂದು ಸುರಂಗ ಮಾರ್ಗದಲ್ಲಿ ಸಂಗ್ರಹವಾಗುತ್ತದೆ. ಮಳೆ ನೀರಿನ ಹರಿವಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಅಲ್ಲದೆ, ಈ ನೀರು ಕೆಲ ದಿನಗಳ ಕಾಲ ನಿಲ್ಲುವುದರಿಂದ ಸುತ್ತ ಮುತ್ತಲ ಪ್ರದೇಶಗಳಲ್ಲಿ ಸೊಳ್ಳೆ ಕಾಟವು ಹೆಚ್ಚಾಗುತ್ತಿದೆ.

ಅಲ್ಲದೆ, ಪಾಚಿ ಕಟ್ಟಿ ಸಂಪೂರ್ಣ ಬಳಕೆಗೆ ಬಾರದಂತಾಗಿವೆ ಎನ್ನುತ್ತಾರೆ ಕೆ.ಆರ್‌.ವೃತ್ತದ ಬಳಿ ಇರುವ ಮಂಜುನಾಥ್‌. ಬಹುತೇಕ ಸುರಂಗ ಮಾರ್ಗಗಳು ಶೌಚಾಲಯಗಳಾಗಿ ಮಾರ್ಪಟ್ಟಿವೆ. ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದರಿಂದ ಅನೇಕರು ಮೂತ್ರವಿಸರ್ಜನೆ ಬಳಸುತ್ತಿದ್ದಾರೆ. ಜತೆಗೆ ಸಂಪೂರ್ಣ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದು, ಅಕ್ಕಪಕ್ಕದ ಮನೆಯವರು, ಹೋಟೆಲ್‌ ವ್ಯಾಪಾರಿಗಳು ಕಸ ಹಾಗೂ ತ್ಯಾಜ್ಯವನ್ನು ಇಲ್ಲಿ ಹಾಕುತ್ತಿದ್ದಾರೆ.

ಇದರಿಂದ ಸುರಂಗ ಮಾರ್ಗಗಳ ಅಕ್ಕ ಪಕ್ಕದಲ್ಲಿ ಹಾದು ಹೋಗುವಾಗಲೂ ಮೂಗು ಮಚ್ಚಿಕೊಳ್ಳುಬೇಕು ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿ ಕೇಶವ್‌. ನಗರದ ಅನೇಕ ಸೇವಾ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಯೋಜನೆ ವಿದ್ಯಾರ್ಥಿಗಳು ಆಗಾಗ ಸ್ವತ್ಛ ಕಾರ್ಯಕ್ರಮದಡಿ ಈ ಸುರಂಗ ಮಾರ್ಗಗಳನ್ನು ಸ್ವತ್ಛ ಮಾಡುತ್ತಾರೆ. ಅದನ್ನು ಬಿಟ್ಟರೆ ಬಿಬಿಎಂಪಿ ಇತ್ತ ತಲೆಯೂ ಹಾಕುವುದಿಲ್ಲ.

ರಸ್ತೆ ಕಸಗುಡಿಸುವ ಬಿಬಿಎಂಪಿ ಪೌರ ಕಾರ್ಮಿಕರುನ್ನು ಪ್ರಶ್ನಿಸಿದರೆ, ಈ ಸುರಂಗಗಳು ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ ಎಂದು ಅಸಡ್ಡೆಯಿಂದ ಮಾತನಾಡುವುದಾಗಿ ನಾಗರಿಕರು ಆರೋಪಿಸುತ್ತಾರೆ.  ಪ್ರಸ್ತುತ ಪಾದಚಾರಿ ಸುರಂಗ ಮಾರ್ಗಗಳು ನಿರ್ವಹಣೆ ಕಷ್ಟವೆಂದು ಸ್ಕೈವಾಕ್‌(ಪಾದಚಾರಿಗಳ ಮೇಲ್ಸೇತುವೆ) ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಅಲ್ಲದೆ, ಈಗಾಗಲೇ ನಿರ್ಮಿಸಿರುವ ಸುರಂಗ ಮಾರ್ಗವನ್ನು ಮುಂದಿನ ದಿನಗಳಲ್ಲಿ ಖಾಸಗಿಯವರಿಗೆ ಗುತ್ತಿಗೆ ನೀಡುವ ಯೋಜನೆಯನ್ನು ಹಾಕಿಕೊಂಡಿದೆ.  

ಸುರಂಗ ಮಾರ್ಗಗಳು ಪಾಳು ಬೀಳುತ್ತಿರುವ ಬಗ್ಗೆ ಕೇವಲ ಬಿಬಿಎಂಪಿಯನ್ನು ಮಾತ್ರ ದೂರುವಂತಿಲ್ಲ. ಸಾರ್ವಜನಿಕರ ಕೊಡುಗೆಯೂ ಇದರಲ್ಲಿದೆ. ಸುರಂಗ ಮಾರ್ಗ ಇದ್ದರೂ ಬೇಗೆ ರಸ್ತೆ ದಾಟಬೇಕು ಎಂಬ ಕಾರಣಕ್ಕೆ ಜನ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹೀಗೆ ಜನರ ಓಡಾಟವಿಲ್ಲದ ಸುರಂಗ ಮಾರ್ಗಗಳನ್ನು ಕೆಲವರು ಶೌಚಾಲಯ, ಕಸದ ತೊಟ್ಟಿಗಳಾಗಿ ಮಾಡಿಕೊಂಡಿದ್ದಾರೆ.

ಕಳೆದ 2 ವರ್ಷಗಳಿಂದ ಸುರಂಗ ಮಾರ್ಗದಲ್ಲಿ ಕಸತುಂಬಿ ಕೊಂಡಿದ್ದು, ಬಿಬಿಎಂಪಿ ಸ್ವತ್ಛತೆಗೆ ಮುಂದಾಗಿಲ್ಲ. ಅದರ ಪಕ್ಕದಲ್ಲಿ ಹೋಗುವಾಗಲೂ ಮೂಗು ಹಿಡಿದುಕೊಂಡು ಹೋಗುತ್ತೇವೆ. 
-ಸುಷ್ಮಾ, ಸೆಂಟ್ರಲ್‌ ಕಾಲೇಜು ವಿದ್ಯಾರ್ಥಿನಿ  

ಕೋಟಿಗಟ್ಟಲೆ ಹಣ ಖರ್ಚು ಮಾಡಿ ಈ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲ. ಸ್ವಚ್ಚತೆ ಕಾಪಾಡಿಕೊಂಡು, ಮಳೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ, ದೀಪಗಳನ್ನು ಹಾಕುವ ಮೂಲಕ ಬೆಳಕಿನ ವ್ಯವಸ್ಥೆ ಮಾಡಿ, ಭದ್ರತೆಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿದಾಗ ಸಾರ್ವಜನಿಕರು ಬಳಸುತ್ತಾರೆ. 
-ಪರಶುರಾಂ, ವಸಂತ ನಗರ  

ಸಬ್‌ವೇಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ಚಿಂತನೆ ನಡೆಸಿದ್ದು, ಆನಂತರ ಅವುಗಳ ಸಂಪೂರ್ಣ ನಿರ್ವಹಣೆ ಹಾಗೂ ಭದ್ರತೆಯನ್ನು ಗುತ್ತಿಗೆದಾರರೇ ನೋಡಿಕೊಳ್ಳುತ್ತಾರೆ.  
-ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಮಾಜಿ ಆಯುಕ್ತ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next