ಹುಬ್ಬಳ್ಳಿ: ಅಮೃತ ಯೋಜನೆಯಲ್ಲಿ ನಗರದಲ್ಲಿ ನಡೆಯುತ್ತಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಹಾಗೂ ವೆಟ್ವೆಲ್ಗಳ ಕಾಮಗಾರಿ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
177.50 ಕಿಮೀ ಪೂರ್ಣ: 156 ಕೋಟಿ ರೂ. ವೆಚ್ಚದಲ್ಲಿ 202 ಕಿಮೀ ಒಳಚರಂಡಿ ನಿರ್ಮಿಸುವ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 177.50 ಕಿಮೀ ಪೂರ್ಣಗೊಂಡಿದೆ. 7900 ಛೇಂಬರ್‌ನಲ್ಲಿ ಈಗಾಗಲೇ 6103 ನಿರ್ಮಿಸಲಾಗಿದೆ. ಈಗಾಗಲೇ ಗಬ್ಬೂರು ಹೊರವಲಯದಲ್ಲಿ 40 ಎಂಎಲ್ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಲಾಗಿದೆ. ಅಲ್ಲಲ್ಲಿ ಚರಂಡಿ ವ್ಯವಸ್ಥೆ ಕಡಿತಗೊಂಡಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೊಳಚೆ ನೀರು ಬರುತ್ತಿಲ್ಲ. ಇಂತಹ ಸ್ಥಳಗಳನ್ನು ಗುರುತಿಸಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ವಿವರಿಸಿದರು.
ಅವಳಿ ನಗರದ ಕೆಲ ಕಾಲೋನಿಗಳು ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿದ್ದು, ಅಂತಹ ಪ್ರದೇಶಗಳಲ್ಲೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಗಿತ್ತು. 350 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಬಿಆರ್‌ಟಿಎಸ್ ರಸ್ತೆ, ಸಿಆರ್‌ಎಫ್ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕೂಡಲೇ ಪರಿಹಾರ ಕಲ್ಪಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
Advertisement
ಸೋಮವಾರ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 156 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ 5 ತ್ಯಾಜ್ಯ ನೀರು ಸಂಸ್ಕರಣ ಘಟಕಗಳು ಹಾಗೂ 6 ವೆಟ್ವೆಲ್ಗಳ ಕಾಮಗಾರಿ ನಡೆಯುತ್ತಿದ್ದು, ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಐದು ವರ್ಷಗಳ ಕಾಲ ಗುತ್ತಿಗೆದಾರರು ನಿರ್ವಹಣೆ ಮಾಡಲಿದ್ದು, ಮಹಾನಗರ ಪಾಲಿಕೆ ಮೇಲೆ ಯಾವುದೇ ಭಾರ ಇರುವುದಿಲ್ಲ ಎಂದರು.
ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಹೇಳಿ ಹೇಳಿ ಸುಸ್ತಾಗಿ ಹೋಗಿದೆ
ನಗರದಲ್ಲಿ ಒತ್ತುವರಿಗೆ ಸಮಸ್ಯೆಯಿಂದ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಸೂಚನೆ ನೀಡಿದ್ದು, ಕೆಲವೊಂದು ಕಡೆ ಅತಿಕ್ರಮಣ ತೆರವು ಕೆಲಸ ಆಗಿದೆ. ಕೆಲವೆಡೆ ಬಾಕಿ ಇರುವುದರಿಂದ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ತೊಂದರೆಯಾಗಿದೆ. ಈ ಕುರಿತು ಅಧಿಕಾರಿಗಳಿಗೆ ಹೇಳಿ ನನಗೆ ಸುಸ್ತಾಗಿ ಹೋಗಿದೆ. ರಾಜ್ಯ ಸರಕಾರವೇ ಗೊಂದಲದಿಂದ ಕೂಡಿದ ಪರಿಣಾಮ ಸ್ಥಳೀಯವಾಗಿ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶೆಟ್ಟರ ಅಸಮಾಧಾನ ವ್ಯಕ್ತಪಡಿಸಿದರು.
ಅತಿಕ್ರಮಣದಾರರಿಗೆ ನೋಟಿಸ್; ದಾಖಲೆಗಳ ಪರಿಶೀಲನೆ
ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಒತ್ತುವರಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಸಂಬಂಧಿಸಿದವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಪ್ರಶಾಂತ ಮಿಶ್ರಾ ತಿಳಿಸಿದರು. ಕಮರಿಪೇಟೆ ಪೊಲೀಸ್ ಠಾಣೆ ಮುಂಭಾಗದ ರಸ್ತೆಯ ಪ್ರಾರ್ಥನಾ ಮಂದಿರ ಹಾಗೂ ಆದರ ಹಿಂಭಾಗದಲ್ಲಿರುವ ಶೆಡ್‌ವೊಂದಕ್ಕೆ ನೋಟಿಸ್ ಅಂಟಿಸಲಾಗಿದೆ. ಇಲ್ಲಿಯವರೆಗೂ ಯಾರೂ ನೋಟಿಸ್ ಕುರಿತು ಸಂಪರ್ಕಿಸಿಲ್ಲ. ಕಾನೂನು ಪ್ರಕಾರ ಮೂರು ನೋಟಿಸ್ ಜಾರಿ ಮಾಡಿ ತೆರವುಗೊಳಿಸಲಾಗುವುದು. ಒತ್ತುವರಿ ಕುರಿತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಅತಿಕ್ರಮಣ ತೆರವಿಗೆ ಯಾವ ರಾಜಕೀಯ ನಾಯಕರ ಒತ್ತಡವಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ತೆರವು ಖಚಿತ ಎಂದು ಹೇಳಿದರು.
ನಗರದಲ್ಲಿ ಈಗಾಗಲೇ 250 ಕಿಮೀ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಯಿತ್ತು. ಇದೀಗ 202 ಕಿಮೀ ಯೋಜನೆ ಕೈಗೊಳ್ಳಲಾಗಿದೆ. ಈ ಯೋಜನೆಯಲ್ಲಿ ಬಿಟ್ಟು ಹೋಗಿರುವ ಪ್ರದೇಶ ಸೇರಿದಂತೆ ಒಟ್ಟಾರೆ 180 ಕಿಮೀ ವಿಸ್ತೀರ್ಣದ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲು 350 ಕೋಟಿ ರೂ. ವೆಚ್ಚದ ವಿಸ್ತೃತ ವರದಿ ಸರಕಾರಕ್ಕೆ ನೀಡಲಾಗಿದೆ. • ಡಿ.ಎಲ್. ರಾಜು, ಒಳಚರಂಡಿ-ಜಲಮಂಡಳಿ ಮುಖ್ಯ ಅಭಿಯಂತರ