Advertisement

ರಸ್ತೆಯಿಲ್ಲ, ಮನೆ ಮುಂದೆ ಕೊಳಚೆ ನೀರು

08:37 PM Feb 17, 2022 | Team Udayavani |

ಬಂಟ್ವಾಳ: ಸಾಮಾನ್ಯವಾಗಿ ಹಳ್ಳಿಗಳು ಅಭಿವೃದ್ಧಿಯಾಗದೇ ಇರುವ ಪ್ರದೇಶವನ್ನು ನಾವು ಸಾಕಷ್ಟು ಕಡೆಗಳಲ್ಲಿ ಕಾಣಬಹುದು, ಆದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರಿನ ರಾಮನಗರ-ಬೋಳಂಗಡಿ ಭಾಗಕ್ಕೆ ಸಂಪರ್ಕಕ್ಕೆ ರಸ್ತೆಯೇ ಇಲ್ಲದೆ ಈ ಭಾಗದ ಮಂದಿ ಸಂಕಷ್ಟು ಪಡಬೇಕಾದ ಸ್ಥಿತಿ ಇದೆ. ಈ ಭಾಗದ ಕಾಲನಿಯಲ್ಲಿ ಶೇ. 100 ಅಂಗವಿಕಲತೆ ಹೊಂದಿರುವ ಮಗು ವೊಂದಿದ್ದು, ಆ ಮಗವನ್ನು ಎಲ್ಲಿಗೆ ಕರೆದು ಕೊಂಡು ಹೋಗಬೇಕಾದರೂ ಅರ್ಧ ಕಿ.ಮೀ.ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿ ಇದೆ.

Advertisement

ಮೆಲ್ಕಾರಿನಿಂದ ಮಾರ್ನಬೈಲು ರಸ್ತೆ ಯಲ್ಲಿ 200 ಮೀ.ನಷ್ಟು ಸಾಗಿ ಎಡಕ್ಕೆ ತಿರುಗಿದರೆ ರಾಮನಗರ ಎಂಬ ಪ್ರದೇಶ ವಿದೆ. ಸುಮಾರು 50ಕ್ಕೂ ಅಧಿಕ ಮನೆ ಗಳಿರುವ ಜನವಸತಿ ಪ್ರದೇಶ ವಾಗಿದ್ದು, ಮನೆಗೆ ಯಾವುದೇ ವಸ್ತು ತರಬೇಕಾದರೂ ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ಸ್ಥಳೀಯ ನಿವಾಸಿಗಳದ್ದಾಗಿದೆ.

ಕಾಲನಿಯ ಸುತ್ತಮುತ್ತಲು ಅಲ್ಪ ಸ್ವಲ್ಪವಾದರೂ ರಸ್ತೆ ಇದೆಯಾದರೂ, ಪ್ರಾರಂಭದಲ್ಲಿ ಸುಮಾರು 50 ಮೀ. ನಷ್ಟು ಪ್ರದೇಶ ಕಿರಿದಾಗಿರುವುದರಿಂದ ಕಾಲನಿಯ ಒಳ ಭಾಗದಲ್ಲಿ ರಸ್ತೆ ಇದ್ದರೂ, ಯಾವುದೇ ಪ್ರಯೋಜನವಿಲ್ಲದ ಸ್ಥಿತಿ. ಅಲ್ಲೊಂದು ಮನೆ ನಿರ್ಮಾಣ ಮಾಡಬೇಕಾದರೂ, ಜಲ್ಲಿ, ಮರಳು, ಹೊಯಿಗೆಯನ್ನು ಹೊತ್ತುಕೊಂಡೇ ಬರಬೇಕಾದ ಸ್ಥಿತಿ ಇದೆ.

ಈ ಕಾಲನಿಯಲ್ಲೇ ದೈವಸ್ಥಾನ, ಅಂಗನವಾಡಿ ಇದ್ದು, ಅಲ್ಲಿಗೂ ಆಹಾರ ಸಾಮಗ್ರಿಗಳನ್ನು ಹೊತ್ತುಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಪ್ರತಿ ಮನೆಗಳಿಗೂ ಗ್ಯಾಸ್‌ ಸಿಲಿಂಡರ್‌ಗಳನ್ನೂ ಹೊತ್ತುಕೊಂಡು ಬರಬೇಕಿದೆ. ಈ ಭಾಗದ ಮಂದಿ ಹೇಳಿಕೊಳ್ಳುವುದಕ್ಕೆ ನಗರ ಸ್ಥಳೀಯಾಡಳಿತ ಸಂಸ್ಥೆಯ ಅಧೀನದಲ್ಲಿದ್ದರೂ, ಇವರ ಸಮಸ್ಯೆ ಕುಗ್ರಾಮಕ್ಕಿಂತಲೂ ಕಡೆ ಇದೆ ಎಂದು ಸ್ಥಳೀಯ ನಾಗರಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಮನೆ ಮುಂದೆಯೇ ತೆರೆದ ಚರಂಡಿ: 

Advertisement

ಜಗದ ಯಾವುದೇ ಜಂಜಾಟಗಳನ್ನು ಅರಿಯದೆ 17 ವರ್ಷ ಹರೆಯದ ಬಾಲಕ ನೋರ್ವ ಮನೆ ಚಾವಡಿಯಲ್ಲಿ ಅಂಗಾತ ಬಿದ್ದು ಕೊಂಡಿದ್ದು, ಆ ಮನೆಯ ಅಂಗಳದ ಬದಿಯಲ್ಲೇ ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ದಿನವಿಡೀ ಹರಿಯುವ ಆ ನೀರು ದುರ್ನಾತ ಬೀರುತ್ತಿದ್ದು, ಸಂಜೆಯಾಗುತ್ತಲೇ ಸೊಳ್ಳೆ ಕಾಟ ಹೆಚ್ಚಾಗಿ ಮನೆಯೊಳಗೆ ಕುಳಿತುಕೊಳ್ಳಲಾಗದ ಸ್ಥಿತಿ ಇದೆ.

ಸಾಮಾನ್ಯ ವ್ಯಕ್ತಿಗಳು ಸೊಳ್ಳೆಗಳು ಬಂದಾಗ ಅದನ್ನು ಹೊಡೆದು ಸಾಯಿಸುವ ಪ್ರಯತ್ನವನ್ನಾದರೂ ಮಾಡಬಹುದಾಗಿದ್ದರೂ, ಆದರೆ ಅಂಗಾತ ಬಿದ್ದಿರುವ ಈ ಮಗುವಿಗೆಅದನ್ನು ಮಾಡುವುದಕ್ಕೂ ಅರಿವಿಲ್ಲ. ಅಂಗವಿಕಲರಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದೇವೆ ಎಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಇತ್ತ ಗಮನ ಹರಿಸದೇ ಇರುವುದು ವಿಪರ್ಯಾಸವೇ ಸರಿ.

ಮಗುವಿನ ಮನೆಯ ಪಕ್ಕದವರೆಗೂ ಮುಚ್ಚಿದ ಚರಂಡಿ ಇದ್ದು, ಕನಿಷ್ಠ 5-10 ಲಕ್ಷ ರೂ. ಖರ್ಚು ಮಾಡಿದರೂ ಚರಂಡಿಯನ್ನು ಮುಂದುವರಿಸಿ ವ್ಯವಸ್ಥೆ ಮಾಡಬಹುದು. ಆದರೆ ಆಳುವ ವರ್ಗ ಅದಕ್ಕೂ ಮನಸ್ಸು ಮಾಡಿಲ್ಲ. ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ನೀತಿ ಪಾಠ ಹೇಳುವ ಅಧಿಕಾರಿಗಳು ತುರ್ತಾಗಿ ಇತ್ತ ಗಮನಹರಿಸಬೇಕಿದೆ.

ಆ ಭಾಗದ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯ ಕುರಿತು ಪುರಸಭೆಯ ಗಮನಕ್ಕೆ ತರಲಾಗುವುದು. ಸಂಪೂರ್ಣ ಅಂಗವೈಕಲ್ಯ ಹೊಂದಿರುವ ಮಗುವಿನ ಕಾರ್ಡ್‌ ನವೀಕರಣಕ್ಕೆ ಅಧಿಕಾರಿಗಳೇ ಮನೆಗೆ ತೆರಳಿ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅವರು ವ್ಯವಸ್ಥೆ ಮಾಡಲಿದ್ದಾರೆ.  –ರಶ್ಮಿ ಎಸ್‌.ಆರ್‌.,  ತಹಶೀಲ್ದಾರ್‌, ಬಂಟ್ವಾಳ

ಚುನಾವಣೆ ಬಂದಾಗ ಎಲ್ಲ ಪಕ್ಷದವರು ಬಂದು ಈ ಬಾರಿ ನಿಮಗೆ ರಸ್ತೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿ ಹೋಗುತ್ತಾರೆ. ಆದರೆ ಗೆದ್ದ ಬಳಿಕ ಯಾರೂ ಕೂಡ ನಮ್ಮ ಸಮಸ್ಯೆಯನ್ನು ಕೇಳಿದವರೇ ಇಲ್ಲ. ಬಂಟ್ವಾಳ ಪುರಸಭೆ, ಶಾಸಕರು, ಅಧಿಕಾರಿ ವರ್ಗ ಹೀಗೆ ಎಲ್ಲರಿಗೂ ಮನವಿ ಮಾಡಿ ಸೋತು ಹೋಗಿದ್ದೇವೆ.  ಜಯಂತ್‌,ಪುರುಷೋತ್ತಮ  ಸ್ಥಳೀಯ ನಿವಾಸಿಗಳು.

Advertisement

Udayavani is now on Telegram. Click here to join our channel and stay updated with the latest news.

Next