Advertisement

ಬೈಲುಮನೆ ಪರಿಸರದಲ್ಲಿ ತ್ಯಾಜ್ಯ ನೀರಿನಿಂದ ಅವಾಂತರ

10:39 PM Mar 04, 2020 | Team Udayavani |

ಹೆಬ್ರಿ: ಹೆಬ್ರಿ ಕುಚ್ಚಾರು ರಸ್ತೆಯ ಬೈಲುಮನೆ ಪರಿಸರದಲ್ಲಿ ಹರಿಯುವ ಚರಂಡಿಯಲ್ಲಿ ಹರಿಯುವ ತ್ಯಾಜ್ಯ ನೀರಿನಿಂದಾಗಿ ಸುತ್ತಮುತ್ತಲಿನ ಬಾವಿಗಳ ನೀರು ಕಲುಷಿತ ಗೊಂಡು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿದ್ದು, ಇದೇ ಪ್ರದೇಶ ದಲ್ಲಿ ತೆರೆದ ಚರಂಡಿ ಹಾದುಹೋಗುತ್ತಿದೆ. ಇದು ಪಕ್ಕದಲ್ಲಿರುವ ಬಾವಿಗಳಿಗೆ ಸೇರಿಕೊಂಡು ಅಲ್ಲಿಯ ನೀರು ಗಬ್ಬುವಾಸನೆ ಬೀರುತ್ತಿದೆ. ಹಲವು ಮನೆಯವರು ಬೇರೆಯವರ ಮನೆ ನೀರು ಆಶ್ರಯಿಸಬೇಕಾಗಿದೆ. ಮನೆಗಳ ಪಕ್ಕದಲ್ಲಿರುವ ಚರಂಡಿಯಲ್ಲಿ ತ್ಯಾಜ್ಯವೂ ಸಂಗ್ರಹ ವಾಗಿದ್ದು ಸೊಳ್ಳೆಗಳ ಕಾಟ ವಿಪರೀತವಾಗಿದೆ. ಪರಿಸರದ ಜನರಿಗೆ ಈಗಾಗಲೇ ಅನಾರೋಗ್ಯ ಕಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

ಕೊಳಚೆ ನೀರು ಎಲ್ಲಿಂದ?
ಹೆಬ್ರಿ ಪೇಟೆಯ ಹೋಟೆಲ್‌ಗ‌ಳಿಂದ ನೀರು, ಶೌಚಾಲಯ, ಸ್ನಾನದ ಮನೆಗಳ ನೀರು, ಕಟ್ಟಡಗಳಿಂದ ಬಂದ ನೀರು, ಇಡೀ ಪೇಟೆಯ ಚರಂಡಿ ನೀರು ಕೆಳಪೇಟೆ ಮೋರಿ ಮೂಲಕ ಕೆಳಪೇಟೆಯ ಮಡಿವಾಳರ ಬೆಟ್ಟು ತನಕ ಹರಿಯುತ್ತದೆ. ಇದು ತೆರೆದ ಚರಂಡಿಯಾಗಿದ್ದು ತ್ಯಾಜ್ಯ ಕೊಳೆತು ಸೊಳ್ಳೆಗಳು ಉತ್ಪತ್ತಿಯಾಗಿವೆ.

ಬಾಟಲಿ ನೀರಿಗೆ ಮೊರೆ
ಈ ಪರಿಸರದ ಹೆಚ್ಚಿನ ಜನರು ತಮ್ಮ ಬಾವಿ ನೀರು ಕಲುಷಿತಗೊಂಡ ಪರಿಣಾಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ಯಾಕೇಜ್‌x ಬಾಟಲಿ ನೀರಿನ ಮೊರೆಹೋಗಿದ್ದಾರೆ. ಇನ್ನು ಕೆಲವರು ತಮ್ಮ ಮನೆಯಲ್ಲಿ ಬಾವಿಯಿದ್ದರೂ ದೂರದ ಮನೆಯವರ ಬಾವಿಯಿಂದ ನೀರು ಹೊತ್ತು ತರುತ್ತಿದ್ದಾರೆ. ಚರಂಡಿಯ ಹತ್ತಿರದಲ್ಲಿಯೇ ಸಭಾಭವನವಿದ್ದು ಇಲ್ಲಿ ಸಾರ್ವ ಜನಿಕ ಕಾರ್ಯಕ್ರಮವಾಗುವುದರಿಂದ ಕಲುಷಿತ ನೀರಿನ ಬಳಕೆಯಿಂದ ಹೆಚ್ಚಿನ ಸಮಸ್ಯೆಯಾಗುವ ಭೀತಿಯೂ ಕಾಡಿದೆ.

ಕುಡಿಯುವ ನೀರಿನ ಯೋಜನೆಗೆ ತ್ಯಾಜ್ಯ ನೀರು
ಹೆಬ್ರಿ ಬಸ್ಸು ತಂಗುದಾಣ ಸಮೀಪವಿರುವ ಶೌಚಾಲಯದ ತ್ಯಾಜ್ಯ ಹಾಗೂ ಸುತ್ತಮುತ್ತಲಿನ ಹೋಟೆಲ್‌ ಹಾಗೂ ಇತರ ಮೂಲಗಳ ತ್ಯಾಜ್ಯ ನೀರು ಇದೇ ಚರಂಡಿಯಲ್ಲಿ ಹಾದು ಹೋಗಿ ಹೆಬ್ರಿ ಸುತ್ತಮುತ್ತಲಿನ ಜನರಿಗೆ ನೀರುಣಿಸುವ ಚಾರ ಬಹುಗ್ರಾಮ ಕುಡಿಯವ ನೀರಿನ ಯೋಜನೆಯ ನದಿಗೆ ಸೇರುತ್ತಿದೆ ಎನ್ನುವುದು ಸ್ಥಳೀಯರ ಆರೋಪ.

ಈ ನೀರು ಹೆಬ್ರಿ ಚಾರ ಸುತ್ತಮುತ್ತಲಿನ ಜನರ ಕುಡಿಯಲು ಬಳಕೆಯಾಗುತ್ತದೆ.
ಇಲಾಖೆಯ ನಿರ್ಲಕ್ಷ್ಯ

Advertisement

ಜನರ ಆರೋಗ್ಯದ ದೃಷ್ಟಿಯಿಂದ ಬಾವಿಗಳ ನೀರನ್ನು ಬಳಸಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ಇದ್ದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲದಿರುವುದರ ಬಗ್ಗೆ ಈ ಭಾಗದ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.
ಹಲವಾರು ವರ್ಷಗಳ ಸಮಸ್ಯೆಯಿಂದ ಬೇಸತ್ತು ಈ ಭಾಗದ ಜನ ತಮ್ಮ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ಖಾಸಗಿ ಪ್ರದೇಶ
ಹೆಬ್ರಿಯ ಬೈಲುಮನೆ ಚರಂಡಿ ತ್ಯಾಜ್ಯ ಹಾಗೂ ಮಡಿವಾಳರಬೆಟ್ಟು ಬಳಿಯ ಸಮಸ್ಯೆ ಗಂಭೀರವಾಗಿದ್ದು, ಮಡಿವಾಳರಬೆಟ್ಟು ಸಮೀಪ ಪೈಪ್‌ಲೈನ್‌ ಅಳವಡಿಸಲಾಗಿದೆ. ಚರಂಡಿಯ ಸುತ್ತಮುತ್ತಲಿನ ಪ್ರದೇಶ ಖಾಸಗಿಯಾಗಿದ್ದು ಜಾಗದವರು ಮುಂದೆ ಬಂದರೆ ಸಮಸ್ಯೆಯನ್ನು ಶಾಶ‌Ìತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಕೊಳೆತ ತ್ಯಾಜ್ಯ ಪ್ರದೇಶಗಳಿಗೆ ಕೀಟನಾಶಕವನ್ನು ಸಿಂಪಡಿಸುವಂತೆ ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗುತ್ತದೆ.
-ಎಚ್‌.ಕೆ. ಸುಧಾಕರ್‌, ಅಧ್ಯಕ್ಷರು, ಗ್ರಾ.ಪಂ., ಹೆಬ್ರಿ

ಗಮನಕ್ಕೆ ತಂದರೂ ಪ್ರಯೋಜನವಿಲ್ಲ
ಹಲವಾರು ವರ್ಷಗಳಿಂದ ಕೊಳಚೆ ನೀರು ವಠಾರದ ಬಾವಿಗೆ ಇಂಗಿ ಬಾವಿ ನೀರನ್ನು ಹಾಳು ಮಾಡುತ್ತಿದೆ. ಈ ವಠಾರದಲ್ಲಿ ವಿಪರೀತ ಸೊಳ್ಳೆ ಕಾಟ, ಕೆಟ್ಟ ವಾಸನೆ ಅಲ್ಲದೆ, ಆರೋಗ್ಯ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಕುಡಿಯುವ ಹಾಗೂ ದಿನಬಳಕೆಯ ನೀರಿಗಾಗಿ ದೂರದ ಕೆಂಜೂರಿನಿಂದ ಟ್ಯಾಂಕರ್‌ ಮೂಲಕ ತಂದು ಉಪಯೋಗಿಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್‌ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
-ಮುದ್ದಣ್ಣ ಶೆಟ್ಟಿ, ಬೈಲುಮನೆ ವಠಾರ ನಿವಾಸಿ

ಕೊಳಚೆ ಬಗ್ಗೆ ನಿರ್ಲಕ್ಷ್ಯವೇಕೆ?
ಹೆಬ್ರಿ ಕೊಳಚೆ ತ್ಯಾಜ್ಯ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. ಚರಂಡಿ ಹರಿಯುವ ತ್ಯಾಜ್ಯದಿಂದಾಗಿ ಅಕ್ಕಪಕ್ಕದ ಮನೆಗಳಲ್ಲಿ ಡೆಂಗ್ಯೂ, ಮಲೇರಿಯಾ ಶಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇದೇ ನೀರು ಬಹುಗ್ರಾಮ ಕುಡಿಯುವ ನೀರು ಪೂರೈಕೆಯ ನೀರು ಸಂಗ್ರಹಾಗಾರಕ್ಕೆ ಮಿಶ್ರಣವಾಗುತ್ತಿದ್ದು ಪಟ್ಟಣಕ್ಕೆ ಪೂರೈಕೆಯಾಗುವ ನೀರು ಮಲಿನವಾಗಲಿದೆ. ಸ್ವತ್ಛ ಗ್ರಾಮ ಪ್ರಶಸ್ತಿ ಪಡೆದ ಹೆಬ್ರಿ ಗ್ರಾಮ ಪಂಚಾಯತ್‌ಗೆ ಕೊಳಚೆ ಬಗ್ಗೆ ನಿರ್ಲಕ್ಷ್ಯವೇಕೆ?
-ರಾಜೀವ ಶೆಟ್ಟಿ, ಸ್ಥಳೀಯರು, ಬೈಲುಮನೆ ಹೆಬ್ರಿ

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next