Advertisement

ರಸ್ತೆಗೆ ಹರಿಯುವ ತ್ಯಾಜ್ಯ ನೀರು; ಬಾಯ್ದೆರೆದ ಚರಂಡಿ

11:22 PM Jun 25, 2019 | mahesh |

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

ಚರಂಡಿ ಅವ್ಯವಸ್ಥೆ; ತ್ಯಾಜ್ಯ ನೀರು ರಸ್ತೆಗೆ
ಕುಲಶೇಖರ 36ನೇ ವಾರ್ಡ್‌ನ ಕೋಟಿಮುರ ಸಮಾಜ ಭವನದ ಬಳಿ ಚರಂಡಿ ಅವ್ಯವಸ್ಥೆಯಿಂದಾಗಿ ಮಳೆ ಮತ್ತು ಕುಲಶೇಖರ ಹಾಲಿನ ಡೈರಿಯಿಂದ ಬರುವ ದುರ್ವಾಸನೆಯುಕ್ತ ನೀರಿನಿಂದ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮಳೆ ನೀರು ಮತ್ತು ಹಾಲಿನ ತ್ಯಾಜ್ಯ ರಸ್ತೆಯಲ್ಲಿ ಹರಿದು ಈ ಪ್ರದೇಶದ ಜನರು ನಡೆದಾಡಲು ತೀರಾ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಈ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಾಸಿಸಲು ಯೋಗ್ಯವಾದ ವಾತಾವರಣ ಕಲ್ಪಿಸಿಕೊಡಬೇಕು.
-ಸುಶಾಂತ್‌, ಕೋಟಿಮುರ
ರಾಜಕಾಲುವೆ ತಡೆಗೋಡೆ ಕುಸಿತ: ಅಪಾಯ
ಬೆಂದೂರು 38ನೇ ವಾರ್ಡ್‌ ಮತ್ತು ಕುದ್ಕೋರಿಗುಡ್ಡೆ ವಾರ್ಡ್‌ ಮಧ್ಯೆ ಹರಿಯುವ ರಾಜಕಾಲುವೆಯ ತಡೆಗೋಡೆ ಕುಸಿದು ಬಿದ್ದು ಕುದ್ಕೋರಿಗುಡ್ಡೆಯ ಕೆಲವು ಮನೆಗಳು ಅಪಾಯದಲ್ಲಿವೆ. ರಾಜಕಾಲುವೆ ನೀರು ಹರಿಯುವ ಮೇಲ್ಭಾಗದಲ್ಲಿ ಈ ಮನೆಗಳಿರುವುದರಿಂದ ಕಳೆದೊಂದು ವಾರದಿಂದ ಇಲ್ಲಿನ ನಿವಾಸಿಗಳು ತೊಂದರೆಯಲ್ಲಿದ್ದಾರೆ. ಮಹಾನಗರ ಪಾಲಿಕೆಯವರು ಆಗಮಿಸಿ ಕಲ್ಲು ಮಣ್ಣುಗಳನ್ನಷ್ಟೇ ಸರಿ ಮಾಡಿ ಕೊಟ್ಟಿದ್ದು, ಉಳಿದಂತೆ ಬಿದ್ದ ತಡೆಗೋಡೆಯನ್ನು ಸರಿಪಡಿಸುವ ಕೆಲಸ ಆಗಿಲ್ಲ. ಬಿರುಸಾದ ಮಳೆ ಬಂದರೆ ಮನೆಗಳಿಗೂ ಅಪಾಯ ಇರುವುದರಿಂದ ತತ್‌ಕ್ಷಣ ಪಾಲಿಕೆಯವರು ಇತ್ತ ಕಡೆ ಗಮನ ಹರಿಸಬೇಕು.
-ಓಸ್ವಾಲ್ಡ್ ಪಿರೇರಾ,ಸ್ಥಳೀಯರು
ಕಸ ವಿಲೇವಾರಿ ಮಾಡಿ
ಜಲ್ಲಿಗುಡ್ಡೆ ಆಕಾಶಭವನ ರಸ್ತೆ ಬದಿಯ ದುರವಸ್ಥೆ ಇದು. ಈ ರಸ್ತೆಯ ಇಕ್ಕೆಲಗಳಲ್ಲಿ ಕಳೆದೊಂದು ವರ್ಷದಿಂದ ಸಾರ್ವಜನಿಕರು ಕಸ ಎಸೆಯುತ್ತಿದ್ದು, ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿನಿತ್ಯ ಕಸದ ರಾಶಿ ದೊಡ್ಡದಾಗುತ್ತಿದ್ದು, ಅದರಿಂದ ಹುಟ್ಟುವ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಶಾಲಾ ಮಕ್ಕಳಿಗೆ, ವಯಸ್ಕರಿಗೆ ಇಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ಶೀಘ್ರ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.
ಭವ್ಯಾ, ಸ್ಥಳೀಯರು
Advertisement

ರಸ್ತೆಯಲ್ಲಿ ಒಳಚರಂಡಿ ನೀರು
ನಗರದ ಪಂಪ್‌ವೆಲ್ ಬಳಿ ಬೇಕರಿಯೊಂದರ ಪಕ್ಕದ ರಸ್ತೆಯಲ್ಲಿ ಕಳೆದೊಂದು ವಾರದಿಂದ ಒಳಚರಂಡಿ ನೀರು ರಸ್ತೆಯಲ್ಲೇ ಪ್ರವಾಹದಂತೆ ಹರಿದು ಹೋಗುತ್ತಿದೆ. ಇದರಿಂದಾಗಿ ವಾಹನಗಳಿಗೆ, ಸಾರ್ವಜನಿಕರಿಗೆ ಓಡಾಡಲೂ ಕಷ್ಟವಾಗಿದೆ. ಸ್ಥಳೀಯ ನಿವಾಸಿಗಳು ಪ್ರತಿದಿನ ಮೂಗು ಮುಚ್ಚಿಕೊಂಡೇ ವಾಸಿಸಬೇಕಾದ ಸ್ಥಿತಿ ಬಂದೊದಗಿದೆ. ಸ್ಥಳೀಯ ಕಾರ್ಪೊರೇಟರ್‌, ಪಾಲಿಕೆ ಅಧಿಕಾರಿಗಳು ಈವರೆಗೆ ಸಮಸ್ಯೆಗೆ ಸ್ಪಂದನೆ ನೀಡಿಲ್ಲ. ಮುಂದಾದರೂ ಈ ಸಮಸ್ಯೆಗೆ ಮುಕ್ತಿ ನೀಡಿ ಎಂಬುದು ಜನರ ವಿನಂತಿ.
-ಗಂಗಾಧರ್‌, ಪಂಪ್‌ವೆಲ್

ನೀರು ನಿಂತು ಸಮಸ್ಯೆ
ಬಿಜೈ ಬಸ್‌ ನಿಲ್ದಾಣದ ಸಮೀಪ ಬಿಗ್‌ ಬಜಾರ್‌ ಮುಂಭಾಗದ ರಸ್ತೆಯಲ್ಲಿ ಸ್ವಲ್ಪ ಮಳೆ ಬಂದರೂ ಅಧಿಕ ಪ್ರಮಾಣದಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ. ಇಲ್ಲಿನ ಕಾಪಿಕಾಡ್‌ ಕ್ರಾಸ್‌ನಲ್ಲಿ ಲಾಲ್ಬಾಗ್‌ನಿಂದ ಮುಂದೆ ಹೋಗಿ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಕ್ರಾಸ್‌ ಆಗುವಲ್ಲಿ ನೀರು ನಿಲ್ಲುವುದರಿಂದ ವಾಹನ ಸವಾರರಿಗೆ ತುಂಬಾ ಸಮಸ್ಯೆ ಎದುರಾಗುತ್ತಿದೆ. ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಕ್ರಾಸ್‌ ಆಗುವಲ್ಲಿ ಇಂಟರ್‌ಲಾಕ್‌ ಕೂಡ ಎದ್ದು ಹೋಗಿದ್ದು, ಮಳೆಗಾಲದ ಸಮಸ್ಯೆ ಬಿಗಡಾಯಿಸಿದೆ. ರಸ್ತೆಯಲ್ಲಿ ನೀರು ನಿಲ್ಲದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ವಹಿಸಿ, ಸಮಸ್ಯೆಮುಕ್ತ ಚಾಲನೆಗೆ ಸಹಕರಿಸಬೇಕು.
– ನಾಗರಿಕ, ಬಿಜೈ

ಫುಟ್ಪಾತ್‌ ಇಲ್ಲದ ರಸ್ತೆ: ಸಂಕಷ್ಟ
ನಗ‌ರದ ಜೈಲ್ರೋಡ್‌ ಗೋವು ಆಸ್ಪತ್ರೆಯ ಮುಂಭಾಗ ರೋಡ್‌ನ‌ ಎರಡೂ ಪಕ್ಕದಲ್ಲಿ ಪಾದಚಾರಿಗಳು ಹೋಗಲು ಫುಟ್ಪಾತ್‌ ವ್ಯವಸ್ಥೆ ಇಲ್ಲ. ಇದರಿಂದಾಗಿ ಕೊಳಚೆ ನೀರು ವಾಹನ ಹೋಗುವಾಗ ಪಾದಚಾರಿಗಳ ಮೇಲೆ ಚಿಮ್ಮಿ ಕೊಳಕಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಫುಟ್ಪಾತ್‌ ವ್ಯವಸ್ಥೆ ಮಾಡಿ ಪಾದಚಾರಿಗಳ ಸುಗಮ ನಡೆದಾಡುವಿಕೆಗೆ ಪಾಲಿಕೆ ವ್ಯವಸ್ಥೆ ಮಾಡಿಕೊಡಬೇಕು.
-ಪುಷ್ಪರಾಜ್‌, ಕೊಡಿಯಾಲ್ಬೈಲ್

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಚರಂಡಿ

ಪದವಿನಂಗಡಿ ಜಂಕ್ಷನ್‌ ಬಳಿ ಕಳೆದ ಹಲವು ಸಮಯಗಳಿಂದ ಚರಂಡಿಯ ಮೇಲು ಹಾಸು ಬಾಯ್ದೆರೆದ ಸ್ಥಿತಿಯಲ್ಲಿದೆ. ಇದು ಸಾರ್ವಜನಿಕರು ನಡೆದಾಡುವ ಸ್ಥಳವಾದ್ದರಿಂದ ಬಾಯ್ದೆರೆದ ಸ್ಥಿತಿಯಲ್ಲಿರುವ ಚರಂಡಿ ಚಪ್ಪಡಿಯನ್ನು ಗಮನಿಸದೆ ಕಾಲಿಟ್ಟು ಬೀಳುವ ಅಪಾಯವೂ ಇದೆ. ಸ್ಥಳೀಯ ಜನಪ್ರತಿನಿಧಿಗಳು ತತ್‌ಕ್ಷಣ ಈ ಸಮಸ್ಯೆಯನ್ನು ಗಮನಿಸಿ ಸಾರ್ವಜನಿಕರಿಗೆ ನಡೆದಾಡಲು ಅನುಕೂಲಕರವಾಗುವ ರೀತಿಯಲ್ಲಿ ದುರಸ್ತಿಪಡಿಸಬೇಕು.

-ಶ್ರೀಕಾಂತ್‌, ಪದವಿನಂಗಡಿ ಜಂಕ್ಷನ್‌
Advertisement

ಇಲ್ಲಿಗೆ ಕಳುಹಿಸಿ

‘ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲಬೈಲ್, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್: mlr.sudina@udayavani.com
Advertisement

Udayavani is now on Telegram. Click here to join our channel and stay updated with the latest news.

Next