ಕಟಪಾಡಿ: ಉದ್ಯಾವರ ಪಿತ್ರೋಡಿ ಭಾಗದ ಹೊಳೆಯಲ್ಲಿ ಮೀನುಗಳು ಸತ್ತಿರುವ ಸ್ಥಿತಿಯಲ್ಲಿ ದಡ ಸೇರುತ್ತಿರುವುದನ್ನು ಕಂಡಿರುವ ಸ್ಥಳೀಯರ ಆತಂಕದ ನಡುವೆಯೇ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ, ಉಪಾಧಿಕಾರಿ ಪ್ರಮೀಳಾ, ಮೀನುಗಾರಿಕಾ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಅವರು ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್ ಸಹಿತ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆಯ ನೀರು ಮತ್ತು ಸತ್ತಿರುವ ಮನುಗಳ ಸ್ಯಾಂಪಲ್ಸ್ ನ್ನು ಸ್ಥಳೀಯರ ಸಹಕಾರದೊಂದಿಗೆ ತೆಗೆದು ಪರೀಕ್ಷೆಗೊಳಪಡಿಸಲು ಕೊಂಡೊಯ್ದಿದ್ದಾರೆ.
ಪರಿಶೀಲನೆಗೆ ಬಂದ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಸಾಕಷ್ಟು ಚರ್ಚೆ, ವಾಗ್ವಾದಗಳು ನಡೆದಿದ್ದು, ಅಧಿಕಾರಿಗಳು ಫಿಶ್ ಮೀಲ್ ಪರವಿದ್ದಾರೆ ಎಂಬ ಆರೋಪ ಹೊರಿಸಿದ್ದು, ಈ ಬಾರಿ ಹಾಗಾಗದಂತೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಈ ಭಾಗದಲ್ಲಿ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಸೂಕ್ತ ಪರಿಶೀಲನೆಯನ್ನು ನಡೆಸಬೇಕು. ನಿಷ್ಪಕ್ಷಪಾತ ವರದಿಯನ್ನು ಸಲ್ಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಪರಿಶೀಲನೆಗೆ ಬಂದ ಅಕಾರಿಗಳಿಗೆ ತೆಂಗಿನಕಾಯಿಯನ್ನು ಮುಟ್ಟಿಸಿ ಪ್ರಮಾಣ ಪಡೆದುಕೊಂಡಿರುವ ಘಟನೆಯೂ ನಡೆದಿದೆ.
ಈ ಎಲ್ಲಾ ವಿದ್ಯಾಮಾನಗಳ ಬಳಿಕ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಪರಿಸರ ಅಕಾರಿ ವಿಜಯಾ ಹೆಗ್ಡೆ , ನದಿ ನೀರಿನಲ್ಲಿ ಕರಗಿರುವ ಆಮ್ಲಜನಕದ ಕೊರತೆಯಿಂದ ಅಥವಾ ಉಷ್ಣತೆ ಹೆಚ್ಚಾದಾಗ ಅಥವಾ ವಿಷ ವಸ್ತು ನೀರಿನಲ್ಲಿ ಸೇರಿದಾಗ ಮೀನು ಸಾವಿಗೀಡಾಗಿರುವ ಸಾಧ್ಯತೆ ಇದೆ. ಇಲ್ಲಿ ಪರಿವೀಕ್ಷಣೆ ಮಾಡಿದಾಗ, ನದಿಯನ್ನು ಡಂಪಿಂಗ್ ಯಾರ್ಡ್ ನಂತೆ ಈ ಭಾಗದಲ್ಲಿ ತ್ಯಾಜ್ಯಗಳಿಂದ ಕಂಡು ಬರುತ್ತಿದ್ದು, ನದಿಯ ತಳದಲ್ಲಿ ಕೊಳೆತ ತ್ಯಾಜ್ಯ ವಸ್ತುಗಳಿಂದ ಉಂಟಾಗಬಹುದಾದ ಆಮ್ಲಜನಕದ ಕೊರತೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಿರುತ್ತಾರೆ. ಸ್ಥಳೀಯರ ವಾಗ್ವಾದದ ಬಗ್ಗೆ ಮಾತನಾಡಿ, ಗ್ರಾ.ಪಂ. ಆಡಳಿತವು ನದಿಯಲ್ಲಿ ಅಳವಡಿಸಲಾಗಿರುವ ಪೈಪ್ ಲೈನ್ ತೆರವುಗೊಳಿಸುವಂತೆ ಒತ್ತಾಯಿಸುತ್ತಿದ್ದು, ಈ ಬಗ್ಗೆ ಈಗಾಗಲೇ ಪೈಪ್ ಅಳವಡಿಸಿದ ಸ್ಥಳೀಯ ಫಿಶ್ ಮೀಲ್ ಘಟಕಕ್ಕೆ ತೆರವುಗೊಳಿಸುವಂತೆ ನೋಟೀಸ್ ನೀಡಿ ಸೂಚಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು.
ಮೀನುಗಾರಿಕಾ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಉದಯವಾಣಿಯೊಂದಿಗೆ ಪ್ರತಿಕ್ರಿಯಿಸಿ, ಪಿತ್ರೋಡಿ ಭಾಗದಲ್ಲಿ ಹೊಳೆ ನೀರಿನಲ್ಲಿ ಮೀನು ಸತ್ತು ಬಿದ್ದಿರುವುದನ್ನು ಪರಿಶೀಲನೆ ನಡೆಸಿರುತ್ತೇನೆ. ಇಲ್ಲಿನ ನೀರಿನ, ಸತ್ತಿರುವ ಮೀನಿನ ಸ್ಯಾಂಪಲ್ ಪಡೆಯಲಾಗಿದ್ದು, ಮೀನುಗಾರಿಕಾ ಕಾಲೇಜಿನಲ್ಲಿ ಪರೀಕ್ಷೆಗೊಳಪಡಿಸಿ ವರದಿಯನ್ನು ಮೇಲಕಾರಿಗಳು ಮತ್ತು ಉದ್ಯಾವರ ಗ್ರಾ.ಪಂ. ನೀಡಲಾಗುತ್ತದೆ ಎಂದಿದ್ದು ಅವರೂ ಕೂಡಾ ಸ್ಥಳೀಯರ ಒತ್ತಾಯದ ಮೇರೆಗೆ ತೆಂಗಿನಕಾಯಿ ಪ್ರಮಾಣವನ್ನು ನಡೆಸಿರುತ್ತಾರೆ.
ಸ್ಥಳದಲ್ಲಿದ್ದ ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್, ನದಿಯ ಆಳದಲ್ಲಿರುವ ಮೀನುಗಳೂ ಸಾವಿಗೀಡಾಗಿದ್ದು, ಸ್ಥಳೀಯರೂ ಆತಂಕ ವ್ಯಕ್ತಪಡಿಸಿದ್ದರು. ಫಿಶ್ ಮೀಲ್ ಘಟಕಗಳ ಅಪಾಯಕಾರಿ ಮಲೀನ ತ್ಯಾಜ್ಯ ಹೊಳೆಯ ನೀರನ್ನು ಸೇರುವ ಪರಿಣಾಮ ಜಲಚರ ಮೀನುಗಳು ಸತ್ತ ಸ್ಥಿತಿಯಲ್ಲಿ ದಡ ಸೇರುತ್ತಿದ್ದು, ಮಾಹಿತಿ ನೀಡಿದ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಫಿಶ್ ಮೀಲ್ ಘಟಕವು ನದಿಯಲ್ಲಿ ಅಳವಡಿಸಿರುವ ಪೈಪ್ ಲೈನ್ ತೆರವುಗೊಳಿಸುವಂತೆ ಆದೇಶಿಸುವ ಜೊತೆಗೆ ಖುದ್ದಾಗಿ ಅಧಿಕಾರಿಗಳು ಸ್ಥಳದಲ್ಲಿದ್ದು, ತೆರವುಗೊಳಿಸಬೇಕು. ಅಧಿಕಾರಿಗಳು ತಿಳಿಸುವಂತೆ ಘಟಕವು ಇಟಿಪಿ ಪ್ಲಾಂಟ್ ಅಳವಡಿಸಿ ಕಾರ್ಯಾಚರಿಸುತ್ತಿದ್ದರೆ ಆ ನೀರನ್ನು ತೋಟ, ಗಾರ್ಡನ್ ಗೆ ಅಥವಾ ಇತರೇ ಕೆಲಸಕ್ಕೆ ಸದುಪಯೋಗಪಡಿಸಿಕೊಳ್ಳಲಿ ಹೊರತು ಹೊಳೆಗೆ ಬಿಡುವುದು ಸಮಂಜಸ ಅಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದು, ಸ್ಥಳೀಯರ ಆತಂಕದ ಬಗ್ಗೆ ಅಧಿಕಾರಿಗಳ ಗಮನವನ್ನು ಸೆಳೆದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಗಿರೀಶ್ ಸುವರ್ಣ, ಸಚಿನ್ ಸುವರ್ಣ ಪಿತ್ರೋಡಿ, ಲಾರೆನ್ಸ್ ಡೇಸಾ, ದಿವಾಕರ ಬೊಳ್ಜೆ, ಸ್ಥಳೀಯರು ಉಪಸ್ಥಿತರಿದ್ದರು.