Advertisement

ನೀರು ಪೋಲಾಗೀ ಜಲಧಾರೆ ಉದ್ಭವ

11:59 AM Dec 02, 2018 | Team Udayavani |

ಬೀದರ: ಬರದಿಂದ ಹನಿ ನೀರಿಗೂ ತತ್ತರಿಸುತ್ತಿರು ಗಡಿ ಜಿಲ್ಲೆಯಲ್ಲಿ ಕಾರಂಜಾ ಜಲಾಶಯದಿಂದ ಬೀದರ ನಗರಕ್ಕೆ ನೀರು ಪೂರೈಕೆ ಮಾಡುವ ಮಧ್ಯದಲ್ಲಿ ಎರಡು ತಿಂಗಳಿಂದ ನೀರು ಪೋಲಾಗುತ್ತಿದ್ದು, ಈ ನೀರಿನಿಂದ ಕೆರೆ ಹಾಗೂ ಜಲಧಾರೆಯೊಂದು ಉದ್ಭವಗೊಂಡಿದೆ. ಕಾರಂಜಾ ಜಲಾಶಯದಿಂದ ಬೀದರ ನಗರಕ್ಕೆ ನೀರು ಸರಬರಾಜು ಮಾಡಬೇಕಿರುವ ಪೈಪ್‌ಲೈನ್‌ ಹಾಲಹಳ್ಳಿ ಸಮೀಪದ ಕಾಲೇಜು ಪಕ್ಕದ ಎರಡು ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಕಾಲೇಜು ವಸತಿ ನಿಲಯದ ಸಮೀಲದಲ್ಲಿನ ಪೈಪ್‌ಲೈನ್‌ ಸಮಸ್ಯೆಯಿಂದ ಪ್ರತಿ ನಿತ್ಯ ಸಾವಿರಾರು ಲೀಟರ್‌ ನೀರು ಪೋಲಾಗುತ್ತಿದೆ ಎಂದು ವಸತಿ ನಿಲಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.

Advertisement

ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಅಲ್ಲಿನ ಜನರು ಹೈರಾಣ ಆಗುತ್ತಿದ್ದಾರೆ. ಜಾನುವಾರುಗಳು ನೀರಿನ
ಸಮಸ್ಯೆ ಎದುರಿಸುತ್ತಿವೆ. ಒಂದು ಬಿಂದಿಗೆ ನೀರು ತರಲು ಕಿ.ಮೀ. ದೂರ ಸಂಚರಿಸುತ್ತಿರುವುದನ್ನು ಕಂಡಿದ್ದೇವೆ. ಆದರೆ, ಇಲ್ಲಿ ನೀರು ಪೋಲಾಗುತ್ತಿರುವುದನ್ನು ನೋಡಿ ದಿನ ಮನಸ್ಸಿಗೆ ಬೇಜಾರಾಗುತ್ತಿತ್ತು. ಸಂಬಂಧ ಪಟ್ಟ ಅಧಿಕಾರಿಗಳು ಬಂದು ದುರಸ್ತಿ ಮಾಡುತ್ತಾರೆ ಎಂದು ನಂಬಿದ್ದೆವು. ಆದರೆ, ಎರಡು ತಿಂಗಳು ಗತಿಸಿದರೂ ಕೂಡ ಯಾವ ಅಧಿಕಾರಿಗಳೂ ಈ ಕಡೆಗೆ ಗಮನ ಹರಿಸಿಲ್ಲ ಎಂದು ಸ್ಥಳೀಯ ನಿವಾಸಿ ಮಹಾನಂದ ಶಿಂಧೆ ತಿಳಿಸಿದ್ದಾರೆ.

ಕರ್ತವ್ಯ ಲೋಪ: ಕಾರಂಜಾ ಜಲಾಶಯದಿಂದ ಬೀದರ್‌ ನಗರದಕ್ಕೆ ನೀರು ಸರಬರಾಜು ನಿರ್ವಹಣೆ ಮಾಡಬೇಕಾದ ಅಧಿಕಾರಿಗಳ ಕರ್ತವ್ಯ ಲೋಪದಿಂದ ಎರಡು ತಿಂಗಳಿಂದ ನೀರು ಪೋಲಾಗುತ್ತಿದೆ. ಅಧಿಕಾರಿಗಳು ಸರ್ಕಾರಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಜಲಾಶಯದಿಂದ ಹರಿದು ಬರುವ ನೀರು ಮಧ್ಯದಲ್ಲಿ ಸೋರಿಕೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ನಗರ ಪ್ರದೇಶದಲ್ಲಿ ಉಳಿದುಕೊಂಡು ಸರ್ಕಾರದ ಸಂಬಳ ಪಡೆಯುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಜಿಲ್ಲೆಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಗೆ ನಿಭಾಯಿಸಬೇಕು ಎಂದು ಜಿಲ್ಲಾಡಳಿತ ಚಿಂತಿಸುತ್ತಿದೆ. ಆದರೆ, ನೀರು ಪೂರೈಕೆ ಹೊಣೆ ಹೊತ್ತ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಹೆಚ್ಚು ಪ್ರಮಾಣದ ನೀರು ಪೋಲಾಗಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಕೆರೆ, ಜಲಧಾರೆ ಸೃಷ್ಟಿ: ಹಾಲಹಳ್ಳಿ ಸಮೀಪದ ಕಾಲೇಜು ವಸತಿ ನಿಲಯದ ಸಮೀಪದಲ್ಲಿ ಪೈಲ್‌ಲೈನ್‌ ಸಮಸ್ಯೆಯಿಂದ ನೀರು ಪೋಲಾಗಿ ಹರಿದು, ಬೃಹತ್‌ ಪ್ರಮಾಣದ ಕೆರೆ ನಿರ್ಮಾಣವಾಗಿದೆ. ಸುಮಾರು 20 ಅಡಿಗೂ ಅಧಿಕ ಆಳದಲ್ಲಿ ನೀರು ಅಲ್ಲಿ ಸಂಗ್ರಹವಾಗಿದೆ. ಅಲ್ಲದೆ, ಅಲ್ಲಿಂದ ನೀರು ಖಾಸಗಿ ಹೊಲಗಳ ಮೂಲಕ ಹರಿದು ಜಲಧಾರೆ ಸೃಷ್ಟಿಯಾಗಿದೆ. ಗುಡ್ಡದಿಂದ ಬೀಳುವ ನೀರು ಸುತ್ತಲಿನ ಗುಡ್ಡಾಗಾಡು ಪ್ರದೇಶದಲ್ಲಿ ಸಂಗ್ರಹವಾಗುತ್ತಿದೆ.

Advertisement

ಪ್ರತಿಭಟನೆ: ಕೆಲ ದಿನಗಳಿಂದ ಔರಾದ ತಾಲೂಕಿನ ರೈತರು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅಲ್ಲದೆ, ಎರಡು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಾರಂಜಾ ಜಲಾಶಯದ ನೀರು ಔರಾದ ವರೆಗೆ ಹರಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದು, ಹಾಲಹಳ್ಳಿ ಸಮೀಪದಲ್ಲಿ ಪೋಲಾಗುತ್ತಿರುವ ನೀರು ಹರಿಸಿದರೆ ಔರಾದ ತಾಲೂಕಿನ ಜನರಿಗಾದರೂ ಅನೂಕುಲವಾಗುತ್ತಿತ್ತು ಎಂಬುದು ಅಲ್ಲಿನ ರೈತರ ಮಾತು.

ನೀರಿನ ಪ್ರಮಾಣ: ಸದ್ಯ ಕಾರಂಜಾ ಜಲಾಶಯದಲ್ಲಿ ಸುಮಾರು 2,595 ಟಿಎಂಸಿ ಅಡಿ ನೀರು ಇದೆ. ಈ ಪೈಕಿ 2.220 ಟಿಎಂಸಿ ಅಡಿ ನೀರು ಬಳಕೆ ಮಾಡಬಹುದಾಗಿದೆ. ಕಾರಂಜಾ ಜಲಾಶಯದಿಂದ ಬೀದರ್‌ ನಗರ, ಹುಮನಾಬಾದ, ಭಾಲ್ಕಿ, ಚಿಟಗುಪ್ಪ, ಹಳ್ಳಿಖೇಡ(ಬಿ) ಪಟ್ಟಣಗಳ ನಿವಾಸಿಗಳಿಗೆ ಹಾಗೂ ಜಿಲ್ಲೆಯ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಸಧ್ಯ ಪೋಲಾದ ನೀರು ಸರಾಸರಿ ಒಂದು ತಿಂಗಳ ಕಾಲ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿತ್ತು ಎನ್ನುತ್ತಾರೆ ಅಲ್ಲಿನ ಸ್ಥಳೀಯ ನಿವಾಸಿಗಳು.

 ಕ್ರಮಕ್ಕೆ ಒತ್ತಾಯ: ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಪೈಪ್‌ಲೈನ್‌ ದುರಸ್ಥಿ, ಮೋಟಾರು ದುರಸ್ಥಿ ಹೆಸರಲ್ಲಿ ಆಯಾ ಇಲಾಖೆಗಳು ಲಕ್ಷಾಂತರ ರೂ. ಖರ್ಚು ಮಾಡುತ್ತಿವೆ. ಆದರೂ ಕೂಡ ನೀರು ಪೋಲಾಗುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತಪ್ಪಿಸ್ಥರ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಕ್ರಮ ಕೈಗೊಂಡು ಕೆಲಸ ಮಾಡದ ಅಧಿಕಾರಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡಬೇಕು. ಹನಿ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಹಣ ನೀಡಿ ವಾಹನಗಳ ಮೂಲಕ ವಿವಿಧೆಡೆ ನೀರು ಪೂರೈಕೆ ಮಾಡುತ್ತಿದೆ. ಆದರೆ, ಪೋಲಾಗುತ್ತಿರುವ ನೀರಿನ ಬಗ್ಗೆ ಕಾಳಜಿ ಯಾಕೆ ಇಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕಾರಂಜಾ ಜಲಾಶಯದಿಂದ ಹರಿದು ಬರುವ ನೀರು ಪೋಲಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿ, ದುರಸ್ಥಿ ಕಾರ್ಯ ಮಾಡುವಂತೆ ಸೂಚಿಸಲಾಗಿದೆ. ಯಾವ ಕಾರಣಕ್ಕೆ ನೀರು ಪೋಲಾಗಿದೆ ಎಂಬುದನ್ನು ತಿಳಿದುಕೊಂಡು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 
 ಡಾ| ಎಚ್‌.ಆರ್‌. ಮಹಾದೇವ, ಜಿಲ್ಲಾಧಿಕಾರಿ

ಕಾರಂಜಾ ನೀರು ಪೋಲಾಗುತ್ತಿರುವ ಬಗ್ಗೆ ಶನಿವಾರ ಮಧ್ಯಾಹ್ನ ಗೊತ್ತಾಗಿದೆ. ಕೂಡಲೇ ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳು ದುರಸ್ಥಿ ಮಾಡಿ, ನೀರು ಪೋಲಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಈ ಕುರಿತು ಹೆಚ್ಚು ಕಾಳಜಿ ವಹಿಸಲಾಗುವುದು.
 ಬಲಭೀಮ ಕಾಂಬಳೆ, ಯೋಜನಾ ಅಧಿಕಾರಿ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next