ಮಹದೇವಪುರ: ಬಿದರಹಳ್ಳಿ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ರಾತ್ರಿ ವೇಳೆ ಕಸ ಸುರಿಯುವವರನ್ನು ಹಿಡಿದು ಕೊಟ್ಟವರಿಗೆ 5 ಸಾವಿರ ಬಹುಮಾನ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಬಿ.ವಿ.ವರುಣ್ ಘೋಷಿಸಿದರು. ಕ್ಷೇತ್ರದ ಬಿದರಹಳ್ಳಿ ಮತ್ತು ಕಿತ್ತಗ ನೂರು ಮುಖ್ಯ ರಸ್ತೆಯಲ್ಲಿ ಇತ್ತೀಚೆಗೆ ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ಸುರಿದಿರುವ ತ್ಯಾಜ್ಯವನ್ನು ಗ್ರಾಪಂ ವತಿಯಿಂದ ಜೆಸಿಬಿ ಮೂಲಕ ತೆರವುಗೊಳಿಸಲು ಸಿಬ್ಬಂದಿಗೆ ಸೂಚಿಸಿ ನಂತರ ಮಾತನಾಡಿದರು.
ಇದನ್ನೂ ಓದಿ;- ಅಪಾಚೆ 160 4 ವಿ ಸರಣಿ ಬಿಡುಗಡೆ
ಪಾಲಿಕೆ ವ್ಯಾಪ್ತಿಯಲ್ಲಿ ಶೇಖರಣೆ ಮಾಡುವ ತ್ಯಾಜ್ಯವನ್ನು ರಾತ್ರೋರಾತ್ರಿ ಬಿದರಹಳ್ಳಿ ಗ್ರಾಪಂನ ಕೆಲ ಖಾಲಿಯಿರುವ ಖಾಸಗಿ ಜಾಗ ಮತ್ತು ರಸ್ತೆಗಳ ಬದಿಯಲ್ಲಿ ಸುರಿದು ಹೋಗುತ್ತಿದ್ದಾರೆ. ಇದ್ದರಿಂದ ಸ್ಥಳೀಯರಿಗೆ ಹಾಗೂ ಪ್ರಯಾಣಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿತಿಯು ಸ್ವತ್ಛತೆಗೆ ಮೊದಲ ಆದ್ಯತೆ ನೀಡಿದೆ ಅದರೆ ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ಕಸ ಸುರಿದು ಹೋಗುತ್ತಿರುವುದು ಬೇಸರ ಸಂಗತಿ ಎಂದು ತಿಳಿಸಿದರು.
ಬಿದರಹಳ್ಳಿ ಗ್ರಾ.ಪಂ ಕೆಲ ಗ್ರಾಮಗಳು ಬಿಬಿಎಂಪಿಗೆ ಹೊಂದಿಕೊಂಡಿದ್ದು ಪರಿಣಾಮ ಕಿಡಿಗೇಡಿಗಳು ಹಾಸು ಪಾಸು ಸುರಿದು ಹೋಗುತ್ತಿದ್ದಾರೆ ಎಂದು ದೂರಿದರು. ತ್ಯಾಜ್ಯ ಸುರಿಯುತ್ತಿರುವ ಪ್ರದೇಶದಲ್ಲಿ ಪಂಚಾಯತಿ ವತಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು ಮತ್ತು ಮಾರ್ಷಲ್ ಮಾದರಿಯಲ್ಲಿ ಕಾವಲುಗಾರರನ್ನು ನೇಮಿಸಲಾಗುವುದು ಎಂದು ತಿಳಿಸಿದರು. ಪಿಡಿಒ ನಾಗೇಶ್, ಕಾರ್ಯದರ್ಶಿ ಮುನಿರಾಜ್ ಇದ್ದರು.