ಕೊಟ್ಟಿಗೆಹಾರ: ಮಹಾ ಶಿವರಾತ್ರಿ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳಿಂದ ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾದಯಾತ್ರೆಯಲ್ಲಿ ಸಾಗಿದ್ದು ಈ ಮಾರ್ಗದುದ್ದಕ್ಕೂ ರಾಶಿ ರಾಶಿ ತ್ಯಾಜ್ಯ ಸಂಗ್ರಹವಾಗಿದ್ದು ತ್ಯಾಜ್ಯ ತೆರವುಗೊಳಿಸುವುದು ಸವಾಲಿನ ಕಾರ್ಯವಾಗಿದೆ.
ಬೆಂಗಳೂರು, ಹಾಸನ, ಕೋಲಾರ, ಚನ್ನರಾಯಪಟ್ಟಣ ಸೇರಿದಂತೆ ರಾಜ್ಯದ ವಿವಿದೆಡೆಗಳಿಂದ ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾವಿರಾರು ಭಕ್ತಾಧಿಗಳು ಪಾದಯಾತ್ರೆಯಲ್ಲಿ ಸಾಗಿದ್ದು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು, ಜನ್ನಾಪುರ, ಅಣಜೂರು, ಜೇನುಬೈಲು, ಮುತ್ತಿಗೆಪುರ, ಹ್ಯಾಂಡ್‌ಪೋಸ್ಟ್, ಹೊರಟ್ಟಿ, ಸಬ್ಬೇನಹಳ್ಳಿ, ಬಗ್ಗಸಗೋಡು, ಚಕ್ಕಮಕ್ಕಿ, ಬಣಕಲ್, ಅತ್ತಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರಿಗರು ಸಾಗುತ್ತಾರೆ.
ಈ ಮಾರ್ಗದುದ್ದಕ್ಕೂ ರಸ್ತೆಯ ಇಬ್ಬದಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತಟ್ಟೆಗಳು, ಮುಂತಾದ ತ್ಯಾಜ್ಯಗಳು ಎಲ್ಲೆಂದರಲ್ಲಿ ಕಂಡು ಬರುತ್ತಿವೆ. ಬಣಕಲ್, ಕೊಟ್ಟಿಗೆಹಾರ, ಅತ್ತಿಗೆರೆ, ಬಿನ್ನಡಿ ಭಾಗದಲ್ಲಿ ರಸ್ತೆ ಬದಿಯಲ್ಲಿ ಹರಿಯುವ ಹೇಮಾವತಿ ನದಿ ತೀರದಲ್ಲಿಯೂ ಕೂಡ ತ್ಯಾಜ್ಯ ರಾಶಿ ಸಂಗ್ರಹವಾಗಿದ್ದು ತೆರವುಗೊಳಿಸುವುದು ಸವಾಲಿನ ಕೆಲಸವಾಗಿದೆ.
ಮಾರ್ಗದುದ್ದಕ್ಕೂ ಬಿದ್ದ ತ್ಯಾಜ್ಯವನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿದ್ದು ತಾಲ್ಲೂಕು ಆಡಳಿತ ಪಾದಯಾತ್ರೆ ಪ್ರಾರಂಭವಾಗುವ ಮುನ್ನವೇ ಪಾದಯಾತ್ರೆ ಸಾಗುವ ಮಾರ್ಗ ವ್ಯಾಪ್ತಿಯ ಗ್ರಾ.ಪಂಗಳಿಗೆ ಸೂಚಿಸಿ ಕಸದ ತೊಟ್ಟಿಗಳನ್ನು ಇಡುವುದು, ಸೂಚನಾ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಮುಂಚಿತವಾಗಿ ಸಿದ್ದತೆಗಳನ್ನು ನಡೆಸಿದ್ದರೆ ತ್ಯಾಜ್ಯ ಪರಿಸರವನ್ನು ಸೇರುವುದನ್ನು ತಪ್ಪಿಸಬಹುದಾಗಿತ್ತು.
ಶೌಚಾಲಯ ವ್ಯವಸ್ಥೆ ಇಲ್ಲದೇ ಹೆಚ್ಚಿನ ಮಾಲಿನ್ಯ:
ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಶೌಚಾಲಯ ಇಲ್ಲದೇ ಇರುವುದರಿಂದ ಪಾದಯಾತ್ರಿಗರು ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜನೆ ಮಾಡಿದ ಪರಿಣಾಮ ನದಿ ತೀರ ಹಾಗೂ ರಸ್ತೆ ಇಬ್ಬದಿಗಳಲ್ಲಿ ದುರ್ವಾಸನೆ ಬೀರುತ್ತಿದೆ.
ಕಳೆದ ಕೆಲ ವರ್ಷಗಳಲ್ಲಿ ಮೂಡಿಗೆರೆ ಭಾಗದ ಕೆಲ ಸಂಘ ಸಂಸ್ಥೆಗಳು ಪಾದಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಸ್ವಚ್ಛತಾ ಅಭಿಯಾನ ನಡೆಸಿ ಟ್ಯಾಕ್ಟರ್‌ಗಳಲ್ಲಿ ತ್ಯಾಜ್ಯ ಸಂಗ್ರಹಿಸಿ ತ್ಯಾಜ್ಯವನ್ನು ತೆರವುಗೊಳಿಸಲಾಗಿತ್ತು. ಈ ಬಾರಿಯೂ ತಾಲ್ಲೂಕು ಆಡಳಿತ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಅಭಿಯಾನ ಮಾಡಬಹುದಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪರಿಸರ ಪ್ರೇಮಿ ಸಂಜಯಗೌಡ ಕೊಟ್ಟಿಗೆಹಾರ, ಪಾದಯಾತ್ರಿಗೆ ನೀರು, ತಂಪುಪಾನಿಯ ವಿತರಿಸುವ ದಾನಿಗಳು ಪ್ಲಾಸ್ಟೀಕ್ ಬಾಟಲಿಗಳನ್ನು ಉಪಯೋಗಿಸದೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವುದನ್ನು ತಡೆಯಬಹುದು. ಪಾದಯಾತ್ರೆಗೂ ಮುನ್ನ ಸಿದ್ದತೆ ಮಾಡಿಕೊಳ್ಳುವುದು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಕೆಲಸವಾಗಿದೆ. ಮೂಡಿಗೆರೆ ತಾಲ್ಲೂಕಿನ ಸುಮಾರು ೮ ಗ್ರಾ.ಪಂ ವ್ಯಾಪ್ತಿಯಲ್ಲಿ ಪಾದಯಾತ್ರೆ ಹಾದು ಹೋಗುವುದರಿಂದ ಆ ಮಾರ್ಗದಲ್ಲಿ ನೀರಿನ ವ್ಯವಸ್ತೇ ಇರುವ ಕಡೆಗೆ ಮೂರು ಕಿ.ಮಿಗೆ ಒಂದರಅತೆ ತಾತ್ಕಾಲಿಕ ಶೌಚಾಲಯ ಹಾಗೂ 1ಕಿ.ಮಿಗೊಂದರಅತೆ ಕಸದ ಬುಟ್ಟಿಗಳನ್ನು ಇಡಬೇಕಿದೆ ಎಂದು ತಿಳಿಸಿದ್ದಾರೆ.
ಕಸ ತೆರವು ಮಾಡುವುದು ಆಯಾ ಗ್ರಾ.ಪಂಯ ಕಾರ್ಯವಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ ಪಾದಯಾತ್ರೆ ಸಾಗಿದ ಮಾರ್ಗ ವ್ಯಾಪ್ತಿಯ ಗ್ರಾಮಗಳಲ್ಲಿನ ಕಸ ವಿಲೇವಾರಿ ಆಯಾ ಗ್ರಾ.ಪಂ ವ್ಯಾಪ್ತಿಗೆ ಬರುತ್ತದೆ.
-ಎಂ.ಎ.ನಾಗರಾಜ್, ತಹಶೀಲ್ದಾರ್ ಮೂಡಿಗೆರೆ