Advertisement

ಮ್ಯಾಂಗನೀಸ್‌ ವಾರ್ಫ್‌ ಪರಿಸರದಲ್ಲಿ ಕೊಳೆಯುತ್ತಿದೆ ತ್ಯಾಜ್ಯ

11:00 PM Sep 14, 2019 | Sriram |

ಗಂಗೊಳ್ಳಿ: ಬಂದರು ಪ್ರದೇಶವಾಗಿರುವ ಗಂಗೊಳ್ಳಿಯ ಮ್ಯಾಂಗನೀಸ್‌ ರಸ್ತೆ ವಾರ್ಫ್‌ ಪರಿಸರದಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತಿದ್ದು, ನಿಂತ ನೀರಿನಲ್ಲಿ ತ್ಯಾಜ್ಯ ಕೊಳೆತು ವಾಸನೆ ಬರುತ್ತಿದೆ. ತ್ಯಾಜ್ಯ ಸಮರ್ಪಕ ವಿಲೇವಾರಿ ಮಾಡದ ಕಾರಣ ಈ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.

Advertisement

ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಮ್ಯಾಂಗನೀಸ್‌ ವಾರ್ಫ್‌ ಪರಿಸರದಲ್ಲಿ ಬೋಟುಗಳನ್ನು ನಿಲ್ಲಿಸುವ ಸ್ಥಳ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು, ಬಂದರು ಇಲಾಖೆ, ಸ್ಥಳೀಯಾಡಳಿತದ ಅಧಿಕಾರಿಗಳು ದಿವ್ಯ ನಿರ್ಲಕ್ಷé ವಹಿಸಿದ್ದಾರೆ.

ಗಬ್ಬು ವಾಸನೆ
ಮಳೆಗಾಲದಲ್ಲಿ ಬೋಟ್‌ ನಿಲ್ಲಿಸುವ ಜಾಗದಲ್ಲಿ ಮಳೆ ನೀರು ನಿಂತಿದ್ದು, ನೀರಿನಲ್ಲಿ ತ್ಯಾಜ್ಯ ಸೇರಿಕೊಂಡು ಪರಿಸರವಿಡೀ ಗಬ್ಬು ವಾಸನೆಯಿಂದ ದುರ್ನಾತ ಬರುತ್ತಿದೆ. ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದ್ದು, ತ್ಯಾಜ್ಯಗಳ ದುರ್ನಾತ ಪರಿಸರದ ಜನರನ್ನು ಕಂಗೆಡಿಸಿದೆ. ತ್ಯಾಜ್ಯದ ವಾಸನೆಯಿಂದ ಪರಿಸರ ಸುತ್ತಮುತ್ತ ಇರುವ ಜನರು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಜೆ ಬಳಿಕ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ.

ಬೋಟ್‌ಗಳನ್ನು ನೀರಿಗೆ ಇಳಿಸಿದ ಬಳಿಕ ಬೋಟ್‌ ದುರಸ್ತಿ ಮತ್ತಿತರ ವಸ್ತುಗಳನ್ನು ಸ್ಥಳದಲ್ಲೇ ರಾಶಿ ಹಾಕಲಾಗಿದ್ದು, ಅದನ್ನು ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಳೆಯ ನೀರಿನಲ್ಲಿ ಈ ತ್ಯಾಜ್ಯಗಳು ಕೊಳೆಯಲಾರಂಭಿಸಿವೆ. ಪ್ರತಿವರ್ಷ ಸಾವಿರಾರು ರೂ. ತೆರಿಗೆ ವಸೂಲಿ ಮಾಡುತ್ತಿರುವ ಬಂದರು ಇಲಾಖೆ ಪರಿಸರದಲ್ಲಿ ಸ್ವತ್ಛತೆ ಕಾಪಾಡಲು ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಣಾಂತಿಕ ಕಾಯಿಲೆ ಉಲ್ಬಣಿಸುತ್ತಿರುವ ಈ ಸಂದರ್ಭದಲ್ಲಿ ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಶೀಘ್ರ ಕ್ರಮಕೈಗೊಳ್ಳಲಿ
ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿ ಬೋಟ್‌ಗಳಿಗೆ ಹೊದಿಸಲಾದ ಮಡಲು ಮತ್ತಿತರ ತ್ಯಾಜ್ಯಗಳನ್ನು ಅಲ್ಲಿ ರಾಶಿ ಹಾಕಿರುವುದರಿಂದ ಮಳೆ ನೀರಿನಲ್ಲಿ ಕೊಳೆತು ಹೋಗುತ್ತಿದೆ. ತ್ಯಾಜ್ಯಗಳ ವಾಸನೆಯಿಂದ ಇಲ್ಲಿ ಇರಲು ತುಂಬಾ ಕಷ್ಟವಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೋಟು ಕಾರ್ಮಿಕ ಗಣೇಶ ಆಗ್ರಹಿಸಿದ್ದಾರೆ.

Advertisement

ರೋಗ ಭೀತಿ
ತ್ಯಾಜ್ಯ ಕೊಳೆತು ನಾರುತ್ತಿರುವುದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಸುತ್ತಮುತ್ತಲಿನ ಮನೆಗಳಲ್ಲಿ ಸೊಳ್ಳೆ ಮತ್ತಿತರ ಕ್ರಿಮಿ -ಕೀಟಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮಲೇರಿಯಾ, ಡೆಂಗ್ಯೂ, ಚಿಕುನ್‌ ಗುನ್ಯಾ, ಫೈಲೇರಿಯಾ ಮತ್ತಿತರ ರೋಗ ಹರಡುವ ಭೀತಿ ಇಲ್ಲಿನ ಜನರಿಗಿದೆ.

ಸೊಳ್ಳೆಗಳ ಕಾಟ
ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿ ನಿಂತ ನೀರಿನಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಜೆ ಬಳಿಕ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಹೀಗಾಗಿ ಪರಿಸರದ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಂದರು ಇಲಾಖೆಯ ಅಧಿಕಾರಿಗಳು, ಸ್ಥಳೀಯಾಡಳಿತ ಮ್ಯಾಂಗನೀಸ್‌ ವಾರ್ಫ್‌ ಶುಚಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಲಿ.
– ನಾರಾಯಣ, ಸ್ಥಳೀಯ ನಿವಾಸಿ

ಶೀಘ್ರ ಪರಿಹಾರಕ್ಕೆ ಕ್ರಮ
ಪಂಚಾಯತ್‌ ವತಿಯಿಂದ ಘನತ್ಯಾಜ್ಯ ಘಟಕವನ್ನು ಗ್ರಾಮವಿಡೀ ವಿಸ್ತರಣೆಗೆ ಯೋಜನೆ ರೂಪಿಸಲಾಗುತ್ತಿದ್ದು, ವಾಹನ ಖರೀದಿಗೆ ಮುಂದಾಗಿದ್ದೇವೆ. ಆ ಮೂಲಕ ಎಲ್ಲ ವಾರ್ಡ್‌
ಗಳಿಂದ ಹಂತ – ಹಂತವಾಗಿ ಕಸ ಸಂಗ್ರಹಿಸಲಾಗುವುದು. ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿ ಕೆಲ ದಿನಗಳ ಹಿಂದೊಮ್ಮೆ ಕಸ ವಿಲೇವಾರಿ ಮಾಡಲಾಗಿದೆ. ಈಗ ಮತ್ತೂಮ್ಮೆ ಮಾಡಲಾಗುವುದು. ಶೀಘ್ರ ಪಂಚಾಯತ್‌ ವ್ಯಾಪ್ತಿಯ ಕಸದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
– ಚಂದ್ರಶೇಖರ್‌ ಡಿ. ಗಂಗೊಳ್ಳಿ ,ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next