Advertisement
ಹೀಗೆ ನದಿಗೆ ಸೇತುವೆ ಮೇಲಿನಿಂದ ಎಸೆದ ಕಸದ ರಾಶಿಯು ಕಂಡ್ಲೂರು ಕಳುವಿನಬಾಗಿಲು ಪ್ರದೇಶದಲ್ಲಿ ಸಂಗ್ರಹಗೊಳ್ಳುತ್ತಿದ್ದು, ಈ ಭಾಗವೀಗ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಾಡಾಗುತ್ತಿದೆ.
ಪ್ರತಿದಿನ ರಾತ್ರಿಯ ವೇಳೆ ಕಾರು, ಬೈಕ್ ಇನ್ನಿತರ ಗೂಡ್ಸ್ ವಾಹನಗಳಲ್ಲಿ ಎಲ್ಲೆಂದಲೋ ಇಲ್ಲಿಗೆ ಬರುವ ಜನ ಕಂಡ್ಲೂರು ಸೇತುವೆಯ ಮೇಲಿನಿಂದ ನದಿಗೆ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್ ಮತ್ತಿತರ ಕಸ, ತರಕಾರಿ ತ್ಯಾಜ್ಯಗಳೆಲ್ಲವನ್ನು ಎಸೆದು ಹೋಗುತ್ತಾರೆ ಎನ್ನುವುದು ಸ್ಥಳೀಯರ ಆರೋಪ. ಪರಿಸರವಿಡೀ ದುರ್ನಾತ
ಇದರ ಪರಿಣಾಮವಾಗಿ ವಾರಾಹಿಯ ಸಿಹಿ ನೀರು ಕಲ್ಮಶವಾಗಿದೆ. ಅಷ್ಟು ಮಾತ್ರವಲ್ಲದೆ ಸೇತುವೆ ಪರಿಸರದ ಮನೆಗಳಿಗೂ ತ್ಯಾಜ್ಯದ ವಾಸನೆ ಬರುತ್ತಿದೆ.
Related Articles
Advertisement
ಸಾಂಕ್ರಾಮಿಕ ರೋಗ ಭೀತಿವಾರಾಹಿ ನದಿಗೆ ಎಸೆದ ಕಸ, ಕೋಳಿ ತ್ಯಾಜ್ಯ ಕಂಡ್ಲೂರಿನ ಕಳುವಿನಬಾಗಿಲು ಪ್ರದೇಶದಲ್ಲಿ ಈ ಶೇಖರಣೆಗೊಳ್ಳುತ್ತಿದೆ. ಸೊಳ್ಳೆಗಳ ಉತ್ಪತ್ತಿ ಕೇಂದ್ರ ವಾಗಿ ಮಾರ್ಪಡಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಕೂಡ ಹರಡುವ ಭೀತಿ ಇಲ್ಲಿನ ಜನರದ್ದಾಗಿದೆ. ಫಲಕ ತೆಗೆದ ಕಿಡಿಗೇಡಿಗಳು
ಇಲ್ಲಿ ಕಸ ಎಸೆಯಬಾರದು, ಎಸೆದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆ ಫಲಕವನ್ನು ಸೇತುವೆ ಸಮೀಪ ಕಾವ್ರಾಡಿ ಗ್ರಾ.ಪಂ.ನಿಂದ ಹಾಕಲಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಕೆಲ ತಿಂಗಳ ಹಿಂದೆ ಅದನ್ನು ಕಿತ್ತು ತೆಗೆದಿದ್ದಾರೆ. ವಿಲೇವಾರಿ ಘಟಕಕ್ಕೆ
ಜಾಗ ಸಮಸ್ಯೆ
ನಾವು ಜಿ.ಪಂ.ಗೆ ಅನೇಕ ಬಾರಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಳ್ನಾಡು, ದೂಪದಕಟ್ಟೆಯಲ್ಲಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೂ ಅದಕ್ಕೆ ಡೀಮ್ಡ್ ಫಾರೆಸ್ಟ್ ಅಡ್ಡಿಯಾಗಿದೆ. ಅದನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸರಿಪಡಿಸಿದರೆ, ಸ್ಥಳೀಯರು ಕಸ ಎಸೆಯದಂತೆ ಮುನ್ನೆಚ್ಚರಿಕೆ ವಹಿಸಬಹುದು. ಇನ್ನು ಹೊರಗಿನಿಂದ ಹಗಲು ಹೊತ್ತು ಯಾರೂ ಕಸ ಎಸೆಯುವುದಿಲ್ಲ, ರಾತ್ರಿ ವೇಳೆ ಬಂದು ಕಸ ಎಸೆಯುತ್ತಿದ್ದಾರೆ. ನೋಡಿದವರು ಬಂದು ಹೇಳಿ ಅಂದರೂ ಯಾರೂ ಬಂದು ಹೇಳಲು ರೆಡಿಯಿಲ್ಲ. ಮತ್ತೆ ಹೇಗೆ ನಾವು ಕ್ರಮ ಕೈಗೊಳ್ಳುವುದು.
– ಗೌರಿ ಆರ್. ಶ್ರೀಯಾನ್, ಕಾವ್ರಾಡಿ ಗ್ರಾ.ಪಂ. ಅಧ್ಯಕ್ಷರು ಕ್ರಮಕ್ಕೆ ಆಗ್ರಹ
ಇದಕ್ಕಿಂತಲೂ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇದೇ ವಾರಾಹಿ ನದಿಯ ಉಪ ನದಿಯಾದ ಜಂಬೂವಿನಿಂದ ಜಪ್ತಿ ಸಮೀಪ ನೀರಿನ ಟ್ಯಾಂಕ್ ಮೂಲಕ ನೀರು ಸಂಗ್ರಹಿಸಿ ಕುಂದಾಪುರ ಪುರಸಭೆ, ಬಸ್ರೂರು ಮತ್ತಿತರೆಡೆಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕಂಡ್ಲೂರಿನಿಂದ ಈ ಜಂಬೂ ನದಿಯ ನೀರು ಸಂಗ್ರಹ ಪ್ರದೇಶವು ಕೆಲ ಕಿ.ಮೀ. ಗಳಷ್ಟೇ ದೂರದಲ್ಲಿದೆ. ಆ ಕಾರಣಕ್ಕೆ ವಾರಾಹಿ ನದಿಗೆ ಕಸ ಎಸೆಯುವುದು, ತ್ಯಾಜ್ಯ ನೀರನ್ನು ಬಿಡುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯಾಡಳಿತ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. -ದಯಾನಂದ ಬಳ್ಕೂರು