Advertisement

ಉಳ್ಳಾಲ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯ ರಾಶಿ ತೆರವು

11:29 PM Jan 04, 2020 | mahesh |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆಯ ದಕ್ಷಿಣ ತುದಿಯ ಹೆದ್ದಾರಿ ಬದಿ ತ್ಯಾಜ್ಯ ವಸ್ತುಗಳ ತಿಪ್ಪೆ ಗುಂಡಿಗೆ ಕೊನೆಗೂ ತಾತ್ಕಾಲಿಕವಾಗಿ ಮುಕ್ತಿ ಸಿಕ್ಕಿದೆ. ಇಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯ ಮತ್ತು ಕಸದ ರಾಶಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ವತಿಯಿಂದ ತೆರವು ಮಾಡಿ ಸ್ವಚ್ಛ ಗೊಳಿಸಲಾಗಿದೆ.

Advertisement

ಈ ಪ್ರದೇಶದಲ್ಲಿ ಕಸ ಮತ್ತು ತ್ಯಾಜ್ಯ ತಂದು ಸುರಿಯುತ್ತಿರುವ ಕಾರಣ ಮೀನು, ಮಾಂಸ ಮತ್ತು ಇತರ ತ್ಯಾಜ್ಯ ವಸ್ತುಗಳು ಕೊಳೆತು ವಾಸನೆ ಬರುತ್ತಿದ್ದು. ಇದು ಇನ್ನೊಂದು ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತನೆ ಹೊಂದುವ ಲಕ್ಷಣಗಳು ಕಂಡು ಬರುತ್ತಿವೆ ಎಂಬುದಾಗಿ ಉದಯವಾಣಿಯ ಸುದಿನ ಇತ್ತೀಚೆಗೆ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿದ ಸ್ಥಳೀಯ ಕಾರ್ಪೊರೇಟರ್‌, ಶಾಸಕರು ವಿಷಯವನ್ನು ಪಾಲಿಕೆಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ತೆರವು ಮಾಡಿದ್ದಾರೆ. ಜ. 3ರಂದು ಪುನಃ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ಕಸವನ್ನು ಎತ್ತಿ ಸ್ವತ್ಛಗೊಳಿಸಿದ್ದಾರೆ.

ತೊಕ್ಕೊಟು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಳ್ಳಾಲ ಸೇತುವೆಗೆ ಪ್ರವೇಶಿಸುವಲ್ಲಿ ರಸ್ತೆಯ ಎಡ ಬದಿ ಮರ, ಗಿಡ, ಪೊದೆಗಳಿದ್ದು, ಈ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಕಸ – ಕಡ್ಡಿ, ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದು, ಇತ್ತೀಚೆಗೆ ಅದರ ಪ್ರಮಾಣ ಹೆಚ್ಚಾಗಿತ್ತು.

ಮಂಗಳೂರು ಕಡೆಗೆ ಕಾರು, ಲಾರಿ, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರು ಪ್ಲಾಸ್ಟಿಕ್‌ ಲಕೋಟೆಯಲ್ಲಿ ತುಂಬಿಸಿ ಕಸ, ತ್ಯಾಜ್ಯ ಇಲ್ಲಿ ಎಸೆಯುತಿದ್ದರು. ಸತ್ತ ಪ್ರಾಣಿ ಗಳನ್ನು ಕೂಡ ಇಲ್ಲಿ ತಂದು ಹಾಕುತ್ತಿದ್ದರು. ರಾತ್ರಿ ವೇಳೆ ಮೀನಿನ ಲಾರಿಗಳವರು ಮಲಿನ ನೀರನ್ನು ಇಲ್ಲಿ ಸುರಿಯುತ್ತಿದ್ದರು. ಕೆಲವರು ಕೋಳಿ, ಇತರ ಮಾಂಸದ ತ್ಯಾಜ್ಯಗಳನ್ನು ಇಲ್ಲಿ ತಂದು ಎಸೆಯುತ್ತಿದ್ದರು. ಇದೆಲ್ಲವೂ ಕೊಳೆತು ಈ ಪ್ರದೇಶದಲ್ಲಿ ವಾಸನೆ ಸೃಷ್ಟಿಯಾಗಿತ್ತು. ಇಲ್ಲಿ ಮೀನಿನ ತ್ಯಾಜ್ಯ ನೀರು ಸುರಿಯುತ್ತಿದ್ದ ಕೆಲವು ಮೀನು ಸಾಗಾಟ ಲಾರಿಗಳ ಚಾಲಕರ ವಿರುದ್ಧ ಕಂಕನಾಡಿ ನ.ಠಾಣೆಯ ಪೊಲೀಸರು ಪ್ರಕರಣ ದಾಖ ಲಿಸಿದ್ದು, ಇದರಿಂದಾಗಿ ಸಮಸ್ಯೆಯೂ ಕಡಿಮೆಯಾಗಿದೆ.

ಕಸ ಹಾಕದಂತೆ ಕ್ರಮ
ಅಲ್ಲಿ ಸಾರ್ವಜನಿಕರು ತಂದು ಹಾಕಿದ್ದ ಕಸ ಮತ್ತು ತ್ಯಾಜ್ಯದ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತಂದು ಪೂರ್ತಿಯಾಗಿ ತೆರವು ಮಾಡಲಾಗಿದೆ. ಮುಂದೆ ಅಲ್ಲಿ ಕಸ ಹಾಕದಂತೆಯೂ ಕ್ರಮ ವಹಿಸಲಾಗುವುದು.
– ವೀಣಾ ಮಂಗಳಾ, ಕಾರ್ಪೊರೇಟರ್‌, ಜಪ್ಪಿನಮೊಗರು

Advertisement

ಅಗತ್ಯ ಕ್ರಮ ಕೈಗೊಳ್ಳಲಾಗಿದೆ
ಇಲ್ಲಿನ ತಾಜ್ಯ ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ಸ್ಪಂದಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ತ್ಯಾಜ್ಯ ತಂದು ಸುರಿಯುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
 - ಡಿ. ವೇದವ್ಯಾಸ ಕಾಮತ್‌, ಶಾಸಕರು

ಪಾಲಿಕೆಯ ಸಿಬಂದಿಯಿಂದ ಸ್ಪಚ್ಛತೆ
ಈ ಪ್ರದೇಶದಲ್ಲಿ ಹಾಕಿದ್ದ ಕಸವನ್ನು ಮಹಾನಗರ ಪಾಲಿಕೆಯ ವತಿಯಿಂದ ಈಗಾಗಲೇ ತೆರವು ಮಾಡಲಾಗಿದೆ. ಶುಕ್ರವಾರ ಪುನಃ ಪಾಲಿಕೆಯ ಸಿಬಂದಿ ಅಲ್ಲಿಗೆ ತೆರಳಿ ಕಸ ತೆಗೆದು ಸ್ವಚ್ಛ ಮಾಡಿದ್ದಾರೆ. ಆದರೆ ಇಲ್ಲಿ ಹೊರಗಿನವರು ಬಂದು ಕಸ ಹಾಕುತ್ತಿದ್ದು, ಸಮಸ್ಯೆಯಾಗಿದೆ.
 - ಡಾ| ಮಂಜಯ್ಯ ಶೆಟ್ಟಿ, ಮ.ನ.ಪಾ. ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next