Advertisement

ಗಂಗೊಳ್ಳಿ ಬಂದರಿನಲ್ಲಿ ತ್ಯಾಜ್ಯ ರಾಶಿ

09:16 PM Dec 15, 2019 | Team Udayavani |

ವಿಶೇಷ ವರದಿ ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಕೊಳೆತ ಮತ್ತು ನಿರುಪಯುಕ್ತ ಮೀನುಗಳನ್ನು ಹರಾಜು ಪ್ರಾಂಗಣದ ಬಳಿಯೇ ಬಿಟ್ಟು ಹೋಗುತ್ತಿರುವುದರಿಂದ, ಹಾಗೂ ಅಲ್ಲಿ ಬಿದ್ದ ಪ್ಲಾಸ್ಟಿಕ್‌ ಮತ್ತಿತರ ಕಸಗಳನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡದೆ ಇರುವುದರಿಂದ ಬಂದರು ಪ್ರದೇಶಾದ್ಯಂತ ತ್ಯಾಜ್ಯ ರಾಶಿಯೇ ತುಂಬಿ ಕೊಂಡಿದ್ದು, ಬಂದರು ಪ್ರದೇಶ ಗಬ್ಬೆದ್ದು ನಾರುತ್ತಿದೆ.

Advertisement

ಕೊಳಚೆ ನೀರು ಹರಿದು ಹೋಗಲು ನಿರ್ಮಿಸಿದ ಚರಂಡಿಗಳು ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿವೆ. ಎಸೆದ ಕೊಳೆತ ಮೀನು, ಪ್ಲಾಸ್ಟಿಕ್‌, ನೀರಿನ ಬಾಟಲಿಗಳು ಬಂದರಿನ ಎಲ್ಲೆಡೆ ರಾಶಿ ಬಿದ್ದು ಗಬ್ಬು ವಾಸನೆ ಹರಡಿಕೊಂಡಿದೆ. ಇದರಿಂದ ಬಂದರಿನಲ್ಲಿ ಮೀನುಗಾರರು ಬಹಳ ತೊಂದರೆ ಅನುಭವಿಸುವಂತಾಗಿದೆ.

ಮೀನುಗಾರಿಕಾ ಋತು ಆರಂಭದಿಂದಲೇ ಇಲಾಖೆ ಮೂಲಕ ಪ್ರತಿನಿತ್ಯ ಬಂದರನ್ನು ತೊಳೆದು ಸ್ವತ್ಛಗೊಳಿಸಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಶುಚಿತ್ವ ಸರಿಯಾಗಿ ಮಾಡದ ಕಾರಣ ಸಮಸ್ಯೆ ಬಿಗಡಾಯಿಸಿದ್ದು, ಇಡೀ ಬಂದರು ತ್ಯಾಜ್ಯದಿಂದ ತುಂಬಿ ತುಳುಕುತ್ತಿದ್ದರೂ, ಬಂದರು ಸ್ವತ್ಛತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಬಗ್ಗೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗ ಭೀತಿ
ಬಂದರಿನ ಚರಂಡಿಯಲ್ಲಿ ಕಸ, ಕೊಳೆತ, ನಿರುಪಯುಕ್ತ ಮೀನುಗಳಿರುವುದರಿಂದ, ಅವು ಕೊಳೆತು ರೋಗ ಹರಡುವ ಭೀತಿ ಉಂಟಾಗಿದೆ. ಯಾರು ಟೆಂಡರ್‌ ವಹಿಸಿಕೊಂಡಿದ್ದಾರೋ ಯಾರು ಸ್ವತ್ಛ ಮಾಡಬೇಕೋ ನಮಗೆ ಗೊತ್ತಿಲ್ಲ. ಬಂದರನ್ನು ದಯಮಾಡಿ ಸ್ವತ್ಛ ಮಾಡಿ ಎಂದು ಮೀನುಗಾರ ಮಹಿಳೆಯರು ಒತ್ತಾಯಿಸಿದ್ದಾರೆ.

ಕೊಳೆತ ಮೀನು ಎಸೆಯದಂತೆ ಮನವಿ
ಬಂದರು ಪ್ರದೇಶ ವ್ಯಾಪ್ತಿಯ ಹರಾಜು ಪ್ರಾಂಗಣ, ಜೆಟ್ಟಿ, ಚರಂಡಿಗಳಲ್ಲಿ ಮೀನುಗಾರರು ಕೊಳೆತ, ನಿರುಪಯುಕ್ತ ಮೀನುಗಳನ್ನು ಎಸೆಯುತ್ತಿರುವುದರಿಂದ ಇಲ್ಲಿ ದುರ್ವಾಸನೆ ಬೀರುತ್ತಿದ್ದು, ಈ ಬಗ್ಗೆ ಈ ಹಿಂದೆಯೇ ಮೀನು ಬಿಸಾಡದಂತೆ ಮನವಿ ಮಾಡಲಾಗಿತ್ತು. ಆದರೆ ಕೊಳೆತ, ನಿರುಪಯುಕ್ತ ಮೀನುಗಳನ್ನು ಅಲ್ಲಿಯೇ ಎಸೆಯುತ್ತಿದ್ದಾರೆ. ಮತ್ತೆ ಬಂದರು ವ್ಯಾಪ್ತಿಯಲ್ಲಿ ಮೀನುಗಳನ್ನು ಎಸೆಯದಂತೆ ಮೀನುಗಾರಿಕಾ ಇಲಾಖೆ ಮನವಿ ಮಾಡಿಕೊಂಡಿದೆ.

Advertisement

ಶೀಘ್ರ ಕ್ರಮ
ಮೀನುಗಾರರು ಕೊಳೆತ ಮತ್ತು ನಿರುಪಯುಕ್ತ ಮೀನುಗಳನ್ನು ಹರಾಜು ಪ್ರಾಂಗಣದ ಬಳಿ ಬಿಟ್ಟು ಹೋಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಕಳೆದ 5 ದಿನಗಳಿಂದ ಬಂದರನ್ನು ತೊಳೆದು ಸ್ವತ್ಛಗೊಳಿಸಲು ಸಾಧ್ಯವಾಗಿಲ್ಲ. ಸ್ವತ್ಛತೆಯ ನಿರ್ವಹಣೆಗೆ ಗುತ್ತಿಗೆದಾರರು ನಿಗದಿಯಾಗಿದ್ದು, ಶೀಘ್ರ ಸ್ವತ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ಅಂಜನಾದೇವಿ,
ಸಹಾಯಕ ನಿರ್ದೇಶಕಿ,ಮೀನುಗಾರಿಕಾ ಇಲಾಖೆ,ಗಂಗೊಳ್ಳಿ

ಕೂಡಲೇ ಕ್ರಮ ಕೈಗೊಳ್ಳಲಿ
ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ಸ್ವತ್ಛ ಮಾಡದೆ 15 ದಿನ ಕಳೆದಿವೆ. ಸ್ವತ್ಛತಾ ಕೆಲಸದ ಟೆಂಡರ್‌ ತೆಗೆದುಕೊಂಡವರು ಕೆಲ ದಿನಗಳಿಂದ ಪತ್ತೆಯೇ ಇಲ್ಲ. ಈ ಬಂದರಿನ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷé ವಹಿಸುತ್ತಿದ್ದಾರೆ. ಜೆಟ್ಟಿ ಕುಸಿದು 1 ವರ್ಷ 2 ತಿಂಗಳು ಕಳೆದರೂ ಇನ್ನೂ ದುರಸ್ತಿ ಕಾರ್ಯ ಮಾತ್ರ ಕೈಗೆತ್ತಿಕೊಂಡಿಲ್ಲ. ಕೇಳಿದರೆ ಹೆಚ್ಚುವರಿ ಅನುದಾನ ಬೇಕು ಅಂತಾರೆ. ಬಂದರಿನ ಸ್ವತ್ಛತೆ ಬಗ್ಗೆ ಗಮನಹರಿಸಿ ಮೀನುಗಾರರ ಆರೋಗ್ಯ ಕಾಪಾಡಲು ಕ್ರಮ ಕೈಗೊಳ್ಳಬೇಕು.
-ರಾಮಪ್ಪ ಖಾರ್ವಿ ಗಂಗೊಳ್ಳಿ,
ಮೀನುಗಾರ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next