Advertisement

ಮಂಗಳೂರಿನಲ್ಲೂ ಸ್ಥಾಪನೆಯಾಗಲಿ ತ್ಯಾಜ್ಯ ಇಂಧನ ಘಟಕ

11:34 PM Jun 15, 2019 | Sriram |

ತ್ಯಾಜ್ಯ ಇಡೀ ಜಗತ್ತಿನಲ್ಲಿ ಸರ್ವೇ ಸಾಮಾನ್ಯ ಸಮಸ್ಯೆ. ತ್ಯಾಜ್ಯ ನಿರ್ವಹಣೆ ಕೂಡ ಬಹುದೊಡ್ಡ ಸವಾಲಾಗಿದೆ. ತ್ಯಾಜ್ಯ ನಿರ್ವಹಣೆಗಾಗಿ ತ್ಯಾಜ್ಯದಿಂದ ಇಂಧನದ ಉತ್ಪತ್ತಿ ಯೋಜನೆ ಜಾರಿಗೆ ಬಂದಿದೆ. ಭಾರತದಲ್ಲಿ ಪ್ರತಿ ವರ್ಷ 62 ಮಿಲಿಯನ್‌ ಟನ್‌ಗಳಷ್ಟು ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ಸಮಸ್ಯೆಯಿಂದ ಮಂಗಳೂರು ಕೂಡ ಹೊರತಾಗಿಲ್ಲ. ಮಂಗಳೂರಿನಲ್ಲೂ ಸೂಕ್ತವಾಗಿ ತ್ಯಾಜ್ಯ ನಿರ್ವಹಣೆ ಆಗಬೇಕಾದರೆ ತ್ಯಾಜ್ಯ ಇಂಧನ ಘಟಕಗಳು ಮಂಗಳೂರಿನಲ್ಲಿ ಸ್ಥಾಪನೆಯಾಗಬೇಕು.

Advertisement

ಬಹುಬೇಗವಾಗಿ ಬೆಳೆಯುತ್ತಿರುವ ನಗರ ಮಂಗಳೂರು. ಅದಕ್ಕೆ ತಕ್ಕಂತೆ ದಿನದಿಂದ ದಿನಕ್ಕೆ ತ್ಯಾಜ್ಯದ ಸಮಸ್ಯೆ ಏರುತ್ತಲೇ ಇದೆ. ಮಂಗಳೂರು ಮಹಾನಗರಪಾಲಿಕೆಗೆ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದೆ. ಇದರಲ್ಲೂ ಒಣತ್ಯಾಜ್ಯ ನಿರ್ವಹಣೆ ಪಾಲಿಕೆಯ ಪಾಲಿಗೆ ಸವಾಲಾಗಿದೆ. ಪಚ್ಚನಾಡಿಯ ಡಂಪಿಂಗ್‌ ಯಾರ್ಡ್‌ನಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯಗಳಿಗೆ ಆಕಸ್ಮಿಕವಾಗಿ ತಗಲುವ ಬೆಂಕಿ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡು ಸುತ್ತಮುತ್ತಲ ಪ್ರದೇಶಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.

ಪ್ರಸ್ತುತ ಇಲ್ಲಿ ಹಸಿ ತ್ಯಾಜ್ಯಗಳನ್ನು ಗೊಬ್ಬರ ತಯಾರಿಗೆ ಬಳಸಲಾಗುತ್ತಿದೆ. ಒಣ ತ್ಯಾಜ್ಯಗಳನ್ನು ಮಣ್ಣು ಹಾಕಿ ಮುಚ್ಚಲಾಗುತ್ತಿದೆ.ಅತ್ಯಾಧುನಿಕ ತಂತ್ರಜ್ಞಾನಗಳ ಯುಗದಲ್ಲಿ ಈ ರೀತಿಯ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರವಾಗಲಾರದು. ಬದಲಿಗೆ ದೇಶದ ಇತರ ನಗರಗಳಲ್ಲಿ ಮತ್ತು ಮುಂದುವರಿದ ರಾಷ್ಟ್ರಗಳಲ್ಲಿ ಅನುಸರಿಸುತ್ತಿರುವ ತ್ಯಾಜ್ಯ ನಿರ್ವಹಣೆ ಮಾದರಿಗಳನ್ನು ಮಂಗಳೂರು ನಗರದಲ್ಲೂ ಅಳವಡಿಸಿ ವೈಜ್ಞಾನಿಕವಾಗಿ ನಿರ್ವಹಣೆಗೆ ಕ್ರಮ ವಹಿಸುವುದು ಇಂದು ಅಗತ್ಯವಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಒಣ ತ್ಯಾಜ್ಯ ವಿಲೇವಾರಿಗೆ ನೆದರ್‌ಲ್ಯಾಂಡ್‌ನ‌ ಸ್ವೀಪ್‌ಸ್ಮಾರ್ಟ್‌ ಸಂಸ್ಥೆಯ ಸಹಭಾಗಿತ್ವ ಪಡೆದುಕೊಂಡಿದೆ.

ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ದಿನಂಪ್ರತಿ ಸುಮಾರು 350 ಟನ್‌ ತ್ಯಾಜ್ಯ ಬರುತ್ತಿದೆ. ಹಸಿ ತಾಜ್ಯದಿಂದ ಪ್ರತಿದಿನ 20 ರಿಂದ 25 ಟನ್‌ ಗೊಬ್ಬರ ತಯಾರಿ ಸಾಮರ್ಥ್ಯದ ಘಟಕ ಇದ್ದರೂ ಕೆಲವೊಂದು ಸಮಸ್ಯೆಗಳಿಂದಾಗಿ ಸಾಮರ್ಥ್ಯದ ಅರ್ಧದಷ್ಟು ಕೂಡಾ ಗೊಬ್ಬರ ತಯಾರಾಗುತ್ತಿಲ್ಲ. ಒಣ ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಮಣ್ಣುಹಾಕಿ ಮುಚ್ಚಲಾಗುತ್ತಿದೆ. ಈ ಹಿಂದೆ ಸುಮಾರು 10 ಎಕ್ರೆ ಜಾಗದಲ್ಲಿ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಈಗ ಮತ್ತೆ ಇನ್ನಷ್ಟು ಜಾಗ ಈ ಪ್ರಕ್ರಿಯೆಗೆ ಬಳಸಲಾಗುತ್ತಿದೆ. ಈ ರೀತಿಯ ವಿಲೇವಾರಿ ಹೆಚ್ಚು ಸಮಯ ಸಾಧ್ಯವಾಗಲಾರದು.

ವಿದ್ಯುತ್‌ ಉತ್ಪಾದನೆ
ತ್ಯಾಜ್ಯಗಳನ್ನು ಬಳಸಿಕೊಂಡು ವಿದ್ಯುತ್‌ ಹಾಗೂ ಸಿಎನ್‌ಜಿ ಇಂಧನ ಉತ್ಪಾದನೆ ಮಾಡುವ ಯೋಜನೆ ಅನೇಕ ನಗರಗಳಲ್ಲಿ ಕಾರ್ಯಾಚರಿಸುತ್ತಿವೆ. ತ್ಯಾಜ್ಯ ನಿರ್ವಹಣೆ ಜತೆಗೆ ಆದಾಯ ಗಳಿಕೆಗೂ ಇದು ಸಹಕಾರಿಯಾಗಿದೆ. ಬೆಂಗಳೂರಿನಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿಯ ಯಡಿಯೂರು ವಾರ್ಡ್‌ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ವಾರ್ಡ್‌ನಲ್ಲಿ ಪ್ರತಿ ದಿನ ತ್ಯಾಜ್ಯದಿಂದ 250 ಕಿಲೋವ್ಯಾಟ್ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

Advertisement

ವಾರ್ಡ್‌ನ ತ್ಯಾಜ್ಯ ನಿರ್ವಹಣೆ ಸಮಸ್ಯೆಗೂ ಗಣನೀಯ ಪರಿಹಾರ ಕಂಡುಕೊಂಡಿದೆ. ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ 150 ಕಿಲೋವ್ಯಾಟ್ ವಿದ್ಯುತ್‌ನ್ನು 17 ಕಟ್ಟಡಗಳಿಗೆ, 13 ಪಾರ್ಕ್‌ಗಳಿಗೆ ಬಳಸಲಾಗುತ್ತಿದೆ. ಉಳಿದ 100 ಕಿಲೋವ್ಯಾಟ್ ವಿದ್ಯುತ್‌ನ್ನು ಬೆಸ್ಕಾಂಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದೊಂದು ವಾರ್ಡ್‌ನಿಂದಲೇ ತ್ಯಾಜ್ಯದಿಂದ ಬಿಬಿಎಂಪಿಗೆ 34 ಲಕ್ಷ ರೂ. ಲಾಭ ಬರುತ್ತಿದೆ.

ಪ್ಲಾಸ್ಟಿಕ್‌ ತ್ಯಾಜ್ಯಗಳು
ನಗರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಗಳಿರುತ್ತವೆ.ಇದರಿಂದ ತ್ಯಾಜ್ಯ ಸಂಸ್ಕರಣೆಯಲ್ಲೂ ಸಮಸ್ಯೆಗಳು ಉಂಟಾಗುತ್ತಿವೆೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ಗಳನ್ನು ಸಂಸ್ಕರಿಸಿ ಮರುಬಳಕೆ ವ್ಯವಸ್ಥೆಯನ್ನು ಅಳವಡಿಸಿದರೆ ಆದಾಯದ ಜತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಿದೆ. ಸಾಮಾನ್ಯವಾಗಿ ಒಂದು ಟನ್‌ ಪ್ಲಾಸ್ಟಿಕ್‌ ಕರಗಿಸಿದರೆ 4 ಬ್ಯಾರಲ್ಗಳಷ್ಟು ತೈಲ ದೊರೆಯಲಿದೆ. ಅದನ್ನು ವಿವಿಧ ಉದ್ದೇಶಗಳಿಗೆ ಬಳಸಬಹುದಾಗಿದೆ. ಮರುಬಳಕೆ ತ್ಯಾಜ್ಯದಿಂದ ಇಟ್ಟಿಗೆ, ರಸ್ತೆ ಡಿವೈಡರ್‌, ಚರಂಡಿ ಚಪ್ಪಡಿ, ಪೈಪ್‌ಗ್ಳನ್ನು ತಯಾರಿಸಲು ಬಳಸಲಾಗುತ್ತಿದೆ. ರಸ್ತೆಗೆ ಡಾಮರೀಕರಣ ಮಾಡುವ ಸಂದರ್ಭದಲ್ಲಿ ಪ್ಲಾಸ್ಟಿಕ್‌ ದ್ರಾವಣಗಳನ್ನು ಸೇರಿಸಲು ಅವಕಾಶವಿದೆ.

ಮಂಗಳೂರಿನಲ್ಲೂ ಕಾರ್ಯಗತಗೊಳ್ಳಲಿ
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ಇಂಧನ ತಯಾರಿ ಘಟಕ ಸ್ಥಾಪನೆಯ ಪ್ರಸ್ತಾವನೆ ಇದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ, ಪಚ್ಚನಾಡಿಯಲ್ಲಿ 100 ಕೋ.ರೂ. ವೆಚ್ಚದಲ್ಲಿ ಕಂಪೆನಿಯೊಂದರಿಂದ ಕಾರ್ಯಗತಗೊಳ್ಳುವ ಯೋಜನೆಗೆ ಸರಕಾರದಿಂದ ಇನ್ನೂ ಒಪ್ಪಿಗೆ ದೊರಕಿಲ್ಲ. ಡಂಪಿಂಗ್‌ ಯಾರ್ಡ್‌ ಗೆ ದಿನಂಪ್ರತಿ ಬರುವ ಸುಮಾರು 350 ಟನ್‌ ತ್ಯಾಜ್ಯವನ್ನು ಹಸಿ ಹಾಗೂ ಒಣ ತ್ಯಾಜ್ಯವಾಗಿ ವಿಂಗಡಿಸಿ ಹಸಿ ತ್ಯಾಜ್ಯದಿಂದ ಸಿಎನ್‌ಜಿ ಇಂಧನ ಹಾಗೂ ಒಣ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆ ಸಿದ್ದವಿದೆ. ಸಿಎನ್‌ಜಿ ಇಂಧನವನ್ನು ಕೇಂದ್ರ ಸರಕಾರಕ್ಕೆ ಹಾಗೂ ಒಣ ತ್ಯಾಜ್ಯದಿಂದ ಪ್ರತಿ ದಿನ ಉತ್ಪಾದನೆಯಾಗುವ ಸುಮಾರು 2 ಮೆ.ವಾ.ವಿದ್ಯುತ್‌ನ್ನು ಮೆಸ್ಕಾಂಗೆ ನೀಡುವ ಪ್ರಸ್ತಾವನೆಗಳು ಇದರಲ್ಲಿ ಒಳಗೊಂಡಿದೆ. ಪ್ಲಾಸ್ಲಿಕ್‌ ತಾಜ್ಯಗಳನ್ನು ಕೂಡಾ ಸಂಸ್ಕರಣೆ ( ರಿಸೈಕ್ಲಿಂಗ್‌) ಮರುಬಳಕೆ ಮಾಡುವ ಹಾಗೂ ಫರ್ನಿಸ್‌ ಆಯಿಲ್ ಹಸಿ ಕಸದಿಂದ ಇಂಧನ ತಯಾರಿ ಮಾಡುವಾಗ ಉತ್ಪಾದನೆಯಾಗುವ ನೀರನ್ನು ಸಂಸ್ಕರಿಸಿ ಘಟಕಕ್ಕೆ ಬಳಸಲಾಗುತ್ತದೆ. ಒಣ ಕಸ ಉರಿದು ಉಂಟಾಗುವ ಬೂದಿ ( ಪೊಟ್ಯಾಷಿಯಂನ್ನು ) ಮಾರಾಟ ಮಾಡುವ ಪ್ರಸ್ತಾವನೆಗಳಿವೆ. ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಕಸ ಸಂಗ್ರಹಕ್ಕೆ ಬೆಂಕಿ ಕಾಣಿಸಿಕೊಳ್ಳುವುದರ ಪರಿಣಾಮ ದುರ್ವಾಸನೆಯ ಜತೆಗೆ ಹೊಗೆಯು ಆವರಿಸಿಕೊಂಡು ಪರಿಸರ ಸುಮಾರು 3 ಕಿಲೋಮೀಟರ್‌ ವ್ಯಾಪ್ತಿಯ ಜನರಿಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿದೆ. ತ್ಯಾಜ್ಯದಿಂದ ಇಂಧನ ತಯಾರಿ ಘಟಕ ಸ್ಥಾಪನೆಯಾದರೆ ಸಮಸ್ಯೆ ಬಹುತೇಕ ಪರಿಹಾರ ಕಾಣುವ ಸಾಧ್ಯತೆಗಳಿವೆ. ತ್ಯಾಜ್ಯದಿಂದ ಪರಿಸರದಲ್ಲಿ ಆವರಿಸಿಕೊಂಡಿರುವ ದುರ್ವಾಸನೆಗೆ ಮುಕ್ತಿ ದೊರೆಯಲ್ಲಿದೆ . ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗಲಿದ್ದು ಡಂಪಿಂಗ್‌ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ.

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next