Advertisement
ನಗರ, ಪಟ್ಟಣ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಕಸ ಸಂಗ್ರಹಣೆ ಹಾಗೂ ಸಂಸ್ಕರಣೆ ಕಾರ್ಯ ಸ್ವಚ್ಛ ಭಾರತ್ ಮಿಷನ್ ಯೋಜನೆ ಫಲವಾಗಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಈಗಾಗಲೇ 93 ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಲಾಗಿದ್ದು, 100ಕ್ಕೂ ಅಧಿಕ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಪ್ರತಿ ಗ್ರಾಪಂಗೆ ಒಂದರಂತೆ ಸ್ವಚ್ಛ ಸಂಕೀರ್ಣ ಘಟಕಗಳು ತಲೆ ಎತ್ತಲಿದ್ದು, ಈ ಘಟಕಗಳ ಮೂಲಕ ತ್ಯಾಜ್ಯ ಸಂಸ್ಕರಣೆಗೊಳಿಸಿ ಗ್ರಾಮೀಣ ಪ್ರದೇಶಗಳನ್ನು ತ್ಯಾಜ್ಯ ಮುಕ್ತಗೊಳಿಸುವ ಸಂಕಲ್ಪ ಹೊಂದಲಾಗಿದೆ.
Related Articles
Advertisement
ಸ್ವಸಹಾಯ ಗುಂಪುಗಳಿಗೆ ಉದ್ಯೋಗ: ಜಿಲ್ಲೆಯ ಸ್ವಚ್ಛ ಸಂಕೀರ್ಣ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಮಟ್ಟದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ನೀಡಲಾಗಿದೆ. ಈ ಮೂಲಕ ಅವರಿಗೂ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದಲೇ ಆದಾಯ ದೊರಕಿಸಿಕೊಡಲು ಅನುವು ಮಾಡಿಕೊಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಜಿಪಂ ವತಿಯಿಂದ 60 ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಆಟೋ ಟಿಪ್ಪರ್ ವಾಹನ ಚಾಲನೆ ಹಾಗೂ ತ್ಯಾಜ್ಯ ಸಂಸ್ಕರಣೆ ಕುರಿತು ತರಬೇತಿ ನೀಡಲಾಗಿದ್ದು, ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ 93 ಘಟಕ ನಿರ್ಮಾಣ ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ತ್ಯಾಜ್ಯ ಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ 93 ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ 8, ಹಾನಗಲ್ಲ 28, ಹಾವೇರಿ 16, ಹಿರೇಕೆರೂರು 8, ರಾಣಿಬೆನ್ನೂರ 18, ರಟ್ಟಿಹಳ್ಳಿ 3, ಸವಣೂರ 9 ಹಾಗೂ ಶಿಗ್ಗಾವಿ ತಾಲೂಕಿನಲ್ಲಿ 3 ಘಟಕಗಳನ್ನು ನಿರ್ಮಿಸಲಾಗಿದೆ. ಈ ಘಟಕಗಳ ಮೂಲಕ ತ್ಯಾಜ್ಯ ಸಂಸ್ಕರಣ ಕಾರ್ಯ ನಡೆಯಲಿದೆ. ಈಗಾಗಲೇ ಗ್ರಾಮ ಸಭೆ ಹಾಗೂ ಪಿಡಿಒ ಮೂಲಕ ತ್ಯಾಜ್ಯ ಸಂಸ್ಕರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.
ಗ್ರಾಮೀಣ ಪ್ರದೇಶಗಳನ್ನು ತ್ಯಾಜ್ಯ ಮುಕ್ತಗೊಳಿಸುವ ಸದುದ್ದೇಶದಿಂದ ಜಿಲ್ಲೆಯ ಗ್ರಾಪಂಗಳಿಗೆ ತಲಾ ಒಂದರಂತೆ ಸ್ವಚ್ಛ ಸಂಕೀರ್ಣ ಘಕಟಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 93 ಘಕಟಗಳನ್ನು ನಿರ್ಮಿಸಲಾಗಿದ್ದು, 100ಕ್ಕೂ ಹೆಚ್ಚು ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಪ್ರತಿ ಗ್ರಾಪಂಗೆ ಒಂದರಂತೆ ಸ್ವಚ್ಛ ಸಂಕೀರ್ಣ ಘಟಕಗಳು ನಿರ್ಮಾಣಗೊಳ್ಳಲಿವೆ. –ಮಹ್ಮದ್ ರೋಷನ್, ಜಿಪಂ ಸಿಇಒ, ಹಾವೇರಿ
ವೀರೇಶ ಮಡ್ಲೂರ