Advertisement

ಆಸ್ಪತ್ರೆ- ಇಂದಿರಾ ಕ್ಯಾಂಟೀನ್‌ ನಡುವೆ ತ್ಯಾಜ್ಯ ವಿಲೇವಾರಿ ವಾಹನಗಳು!

11:31 AM Jun 17, 2018 | Team Udayavani |

ಸುರತ್ಕಲ್‌ : ಸುರತ್ಕಲ್‌ ಭಾಗದಿಂದ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳಿಗೆ ಆ ಸಂಸ್ಥೆ ತನ್ನ ಖರ್ಚಿನಿಂದ ಸೂಕ್ತ ನಿಲುಗಡೆಗೆ ಸ್ಥಳಾವಕಾಶ ಹುಡುಕಿಕೊಳ್ಳುವ ಬದಲು ಸುರತ್ಕಲ್‌ ಪೇಟೆ ನಡುವೆ ಸುಲಭವಾಗಿ ಸ್ಥಳವೊಂದನ್ನು ಆಯ್ಕೆ ಮಾಡಿಕೊಂಡಿದೆ. ಅದು ಸರಕಾರಿ ಆಸ್ಪತ್ರೆಯ ಸ್ಥಳ!.

Advertisement

ಹೌದು ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳುವ ಸಂದೇಶ ನೀಡುವ ಆಸ್ಪತ್ರೆಯ ಆವರಣವನ್ನೇ ಇದೀಗ ದುರ್ವಾಸನೆ, ಸೊಳ್ಳೆಗಳ ಹಿಂಡು ಮುತ್ತಿಕೊಳ್ಳುವಂತೆ ಮಾಡುವ ಕಸ ಸಾಗಿಸುವ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.

ಗರ್ಭಿಣಿಯರ ಆರೈಕೆ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ದಾದಿಯರ ವಸತಿ ಗೃಹ ಒಂದಡೆಯಾದರೆ ಇನ್ನೊಂದೆಡೆ ಇಂದಿರಾ ಕ್ಯಾಂಟೀನ್‌ ಸಮೀಪದಲ್ಲೇ ಇದೆ. ಇವುಗಳ ನಡುವೆ ತ್ಯಾಜ್ಯ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಘನ ವಾಹನಗಳನ್ನು ತೊಳೆಯದೆ ನೇರವಾಗಿ ತಂದಿಡುವ ಕಾರಣ ಸುತ್ತಮುತ್ತ ದುರ್ವಾಸನೆ ಹರಡಲು ಕಾರಣವಾಗುತ್ತಿದೆ. ಇನ್ನೊಂದೆಡೆ ರಾತ್ರಿಯಾದರೆ ಸೊಳ್ಳೆ ಕಾಟ ಶುರುವಾಗುತ್ತದೆ.

ರೋಗಗಳೂ ಹರಡುವ ಸಾಧ್ಯತೆ
ಗರ್ಭಿಣಿಯರು, ಮಕ್ಕಳ ಕೇಂದ್ರಕ್ಕೆ ಇಂಜಕ್ಷನ್‌ಗಾಗಿ ನೂರಾರು ಮಂದಿ ಬರುವುದರಿಂದ ಯಾವುದೇ ಇನ್‌ಫೆಕ್ಷನ್‌ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ವೈದ್ಯರ ಮೇಲಿದೆ. ಇದೀಗ ಮಲಿನತೆ ಆಸ್ಪತ್ರೆ ಆವರಣದ ಸುತ್ತಮುತ್ತ ಹರಡಿರುವುದರಿಂದ ಸೊಳ್ಳೆಗಳಿಂದ ರೋಗಗಳೂ ಹರಡುವ ಸಾಧ್ಯತೆಯಿದೆ. ಇನ್ನು ಅಪಘಾತ ಮತ್ತಿತರ ಅವಘಡದಿಂದ ನಿಧನ ಹೊಂದಿದ ಸಂದರ್ಭ ಮೃತ ದೇಹಗಳನ್ನು ಪೋಸ್ಟ್‌ ಮಾರ್ಟಂಗೆ ಇಲ್ಲಿನ ಆಸ್ಪತ್ರೆಗೆ ತರಲಾಗುತ್ತದೆ. ಹೀಗಾಗಿ ಆಸ್ಪತ್ರೆಯ ಆವರಣವನ್ನು ಅತಿಕ್ರಮಣವಾಗದಂತೆ ತಡೆಬೇಕಿದೆ.

ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದ ಸಂಸ್ಥೆ ತನ್ನ ನೂರಾರು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಹುಡುಕಿಕೊಳ್ಳಬೇಕಾಗುತ್ತದೆ. ಈ ಹಿಂದೆ ಕೂಳೂರು ಸ್ಟಾಕ್‌ ಎಕ್ಸ್‌ ಚೇಂಜ್‌ ಜಾಗದಲ್ಲಿ ನಿಲ್ಲಿಸಲಾಗುತ್ತಿತ್ತು. ಸ್ಥಳೀಯರು ಸತತ ಹೋರಾಟ ಮಾಡಿ ಅಲ್ಲಿಂದ ತೆರವುಗೊಳಿಸಲು ಯಶಸ್ವಿ ಯಾಗಿದ್ದರು. ಇದೀಗ ಉಪವಿಭಾಗ ವ್ಯಾಪ್ತಿಯಲ್ಲಿ ವಾಹನಗಳನ್ನು ಆಯಾ ಭಾಗದಲ್ಲೇ ಖಾಲಿ ಇರುವ ಸ್ಥಳಗಳಲ್ಲಿ ನಿಲ್ಲಿಸಲಾಗುತ್ತಿದೆ. ತತ್‌ಕ್ಷಣ ಆರೋಗ್ಯ ಕೇಂದ್ರದ ಆವರಣದಿಂದ ಅನಧಿಕೃತವಾಗಿ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಲು ಮನಪಾ ಮುಂದಾಗ ಬೇಕಿದೆ.

Advertisement

ಸಂತೆ ವಾಹನಗಳ ಪಾರ್ಕಿಂಗ್‌ ಕೂಡ ಇಲ್ಲೇ !
ವಾರಕ್ಕೆರಡು ಬಾರಿ ನಡೆಯುವ ಸಂತೆ ವಾಹನಗಳು ಇದೀಗ ಆಸ್ಪತ್ರೆ ಆವರಣವನ್ನೇ ಅತಿಕ್ರಮಿಸಿವೆ. ಸಂತೆ ವ್ಯಾಪಾರಿಗಳು ಸರಂಜಾಮುಗಳನ್ನು ಇಳಿಸಿ ಆಸ್ಪತ್ರೆ ಆವರಣದಲ್ಲೇ ನಿಲುಗಡೆ ಮಾಡುತ್ತಿವೆ. ಇನ್ನೊಂದೆಡೆ ಕೊಳೆತ ತರಕಾರಿಗಳನ್ನು ಸರಿಯಾಗಿ ಮುಚ್ಚಿಡದೆ ಅಥವಾ ಗೋಣಿ ಚೀಲದಲ್ಲಿ ತುಂಬಿಸಿ ಇಡದೆ ಅಲ್ಲಲ್ಲೇ ಬಿಟ್ಟು ತೆರಳುತ್ತಿರುವುದು ಮತ್ತೆ ಸೊಳ್ಳೆಗಳ ಕಾಟಕ್ಕೆ ಕಾರಣವಾಗುತ್ತಿದೆ.

ಎರಡು ವಾರದಲ್ಲಿ ಸ್ಥಳಾಂತರ
ಆರೋಗ್ಯ ಕೇಂದ್ರದ ಬಳಿ ತ್ಯಾಜ್ಯ ವಾಹನ ನಿಲ್ಲಿಸದಂತೆ ಆರೋಗ್ಯ ಇಲಾಖೆಯಿಂದ ಪತ್ರ ಬಂದಿದೆ. ತ್ಯಾಜ್ಯ ಗುತ್ತಿಗೆ ಪಡೆದ ಸಂಸ್ಥೆಗೆ ನಾವು ಪಚ್ಚನಾಡಿ ಬಳಿ ಎರಡೆಕ್ರೆ ನೀಡಲು ಸಿದ್ಧª. ಬಾಡಿಗೆ ಪಾವತಿಸಿ ವಾಹನ ನಿಲ್ಲಿಸಬಹುದು. ಆರೋಗ್ಯ ಕೇಂದ್ರದ ಬಳಿಯಿಂದ ಎರಡು ವಾರದಲ್ಲಿ ವಾಹನ ನಿಲುಗಡೆ ಸ್ಥಳಾಂತರಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ.
 - ಡಾ| ಮಂಜಯ್ಯ ಶೆಟ್ಟಿ,
ಆರೋಗ್ಯಾಧಿಕಾರಿ, ಮನಪಾ

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next