ಲೋಕಾಪುರ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಲೋಕಾಪುರ, ಹೆಬ್ಟಾಳ, ಮಾಚಕನೂರ, ಲಕ್ಷಾನಟ್ಟಿ, ಭಂಟನೂರ ಗ್ರಾಮ ಪಂಚಾಯತಿ ಗಳಲ್ಲಿ ಸಂಗ್ರಹವಾದ ಘನ ಮತ್ತು ದ್ರವ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಗ್ರಾಪಂ ಮಟ್ಟದಲ್ಲೇ ಬಹು ಗ್ರಾಮ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕಗಳನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸ್ವಚ್ಛ ಭಾರತ ಮಿಷನ್ ಗ್ರಾಮೀಣ ರಾಜ್ಯ ಸಮಾಲೋಚಕ ಗುರುಬಸವರಾಜ ಎಸ್. ಗಟ್ಟಿಮಠ ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಘನ ತ್ಯಾಜ್ಯ ಘಟಕ ನಿರ್ವಹಣೆ ಕುರಿತು ಕ್ರಿಯಾ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಗ್ರಾಪಂ ಮಟ್ಟದಲ್ಲೂ ಇಂತಹ ಘಟಕ ನಿರ್ಮಿಸುವುದು ಯೋಜನೆ ಇದಾಗಿದೆ ಎಂದರು.
ಈಗಾಗಲೇ ಮೊದಲ ಹಂತದ ಕಾಮಗಾರಿಗಳನ್ನು ಕೈಗೊಳ್ಳುವ 20 ಲಕ್ಷ ರೂ. ಬಿಡುಗಡೆಯಾಗಲಿದ್ದು, ಈ ಹಣದಲ್ಲಿ ಕಸ ಸಾಗಣೆ ವಾಹನಗಳು ಹಾಗೂ ಇತರೆ ಅಗತ್ಯ ಉಪಕರಣಗಳನ್ನು ಖರೀದಿ ಮಾಡಲಾಗುವುದು ಸದ್ಯ ಪ್ರಾಯೋಗಿಕವಾಗಿ 5 ಗ್ರಾಪಂ ಕೇಂದ್ರಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ತೆರೆಯಲಾಗುತ್ತಿದ್ದು, ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಜಿಲ್ಲಾ ಸಮಾಲೋಚಕ ಶ್ರೀಶೈಲ ಬೆಲವಲದ ಮಾತನಾಡಿ ಪ್ರತಿ ಮನೆಯಲ್ಲಿ ಕಸ ಹಾಕುವ ಮೊದಲು ಹಸಿ, ಒಣ ಮರು ಬಳಕೆಯಾಗುವ ಕಸ ಎಂದು ವಿಂಗಡಣೆ ಮಾಡುವಂತೆ ಆಯಾ ಗ್ರಾಪಂ ಅಧಿಕಾರಿಗಳು ಅರಿವು ಮೂಡಿಸಲಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಕಮಲಾ ಹೊರಟ್ಟಿ ಮಾತನಾಡಿ, ಲೋಕಾಪುರ ಸೇರಿದಂತೆ ಹೆಬ್ಟಾಳ, ಮಾಚಕನೂರ, ಲಕ್ಷಾನಟ್ಟಿ, ಭಂಟನೂರ ಗ್ರಾಪಂಗಳನ್ನು ಬಹು ಗ್ರಾಮ ಘನ ತ್ಯಾಜ್ಯ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ಗ್ರಾಪಂಗೆ 20 ಲಕ್ಷ ರೂ. ಅನುದಾನ ದೊರೆಯಲಿದ್ದು, 1 ಕೋಟಿ ರೂ.ವೆಚ್ಚದಲ್ಲಿ ಹೆಬ್ಟಾಳ ಗ್ರಾಪಂ ವ್ಯಾಪ್ತಿಯ ಚಿತ್ರಭಾನುಕೋಟಿ ಗ್ರಾಮದ ಹತ್ತಿರ ಒಂದು ಬೃಹತ್ ಘನ ಮತ್ತು ದ್ರವ ತ್ಯಾಜ್ಯ ಘಟಕ ಸ್ಥಾಪಿಸಲಾಗುವುದು ಎಂದರು.
ಸಭೆಯಲ್ಲಿ ಪಿಡಿಒಗಳಾದ ಸುಭಾಸ ಗೋಲಶೆಟ್ಟಿ, ಎಸ್.ಎಸ್. ಅಂಗಡಿ, ಹಣಮಂತ ಭಜಂತ್ರಿ, ಎಸ್.ವೈ. ದಂಡಾವತಿ, ಬಿದರಿ, ಗ್ರಾಪಂ ಅಧ್ಯಕ್ಷರುಗಳು ಇದ್ದರು.