Advertisement

ತ್ಯಾಜ್ಯ ವಿಲೇವಾರಿಗೆ ಬೇಕಿದೆ ಇನ್ನಷ್ಟು ವಾಹನ

06:24 PM Jun 30, 2022 | Nagendra Trasi |

ಸಿಂದಗಿ: ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ಹೆಚ್ಚಾಗುತ್ತಿದ್ದು ಸಮರ್ಪಕ ವಿಲೇವಾರಿ ಆಗುತ್ತಿಲ್ಲ. ಕಸ ವಿಲೇವಾರಿ ವಾಹನ ಪ್ರತಿ ದಿನ ಬರುತ್ತಿಲ್ಲ. ಇದರಿಂದ ಮನೆಯಲ್ಲೇ ಕಸ ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Advertisement

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 7199 ಮನೆಗಳು, 2708 ವಾಣಿಜ್ಯ ಮಳಿಗೆಗಳು, 12828 ಖಾಲಿ ನಿವೇಶನಗಳಿವೆ. 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜನವಸತಿ ಪ್ರದೇಶದಲ್ಲಿ ಪ್ರತಿ ಮನೆಯಲ್ಲೂ ಕನಿಷ್ಟ ನಾಲ್ಕೈದು ಕೆಜಿ. ಕಸ ಉತ್ಪತ್ತಿಯಾಗುತ್ತದೆ. ಪಟ್ಟಣದಲ್ಲಿ ದಿನಕ್ಕೆ ಸರಾಸರಿ 12 ಟನ್‌ ತ್ಯಾಜ್ಯ ವಸ್ತು ಸಂಗ್ರಹವಾಗುತ್ತದೆ. ಆದರೆ ಸಮರ್ಪಕ ವಿಲೇವಾರಿ ಆಗದ ಕಾರಣ ಕಸವನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಆಗದೆ ಜನರು ಖಾಲಿ ನಿವೇಶನಗಳಲ್ಲಿ ಎಸೆಯುತ್ತಿದ್ದಾರೆ.

ಖಾಲಿ ನಿವೇಶನಗಳಲ್ಲಿ ಎಸೆಯುವ ಕಸವನ್ನು ಪಾಲಿಕೆಯ ಯಾವ ಸಿಬ್ಬಂದಿಯೂ ವಾಹನಗಳಲ್ಲಿ ಸಂಗ್ರಹಿಸುತ್ತಿಲ್ಲ. ಇದರಿಂದ ಬಡಾವಣೆಯ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿದೆ ಎಂಬುದು ನಿವಾಸಿಗಳ ಆರೋಪ. ಪುರಸಭೆಯಲ್ಲಿ 23 ವಾರ್ಡ್‌ಗಳ ಕಸ ಸಂಗ್ರಹಿಸಲು ಇರುವುದು ಎರಡೇ ವಾಹನಗಳು. ಒಂದು ದಿನ ಬಿಟ್ಟು ಒಂದು ದಿನ ಕಸದ ವಾಹನಗಳು ಬರುತ್ತವೆ. ವಾಹನಗಳ ಸಂಖ್ಯೆ ಕಡಿಮೆ ಇರುವ ಕಾರಣ ಕಸ ಸಂಗ್ರಹ ಕಷ್ಟಕರ ಎಂದು ಸಿಬ್ಬಂದಿ ಹೇಳುತ್ತಾರೆ.

ಅಭಿವೃದ್ಧಿ ಹೊಂದುತ್ತಿರುವ ಪುರಸಭೆಗೆ ಕನಿಷ್ಟ 15 ಕಸದ ವಾಹನಗಳಾದರೂ ಬೇಕು. ಪುರಸಭೆಯಲ್ಲಿ 4 ಟ್ರಾಕ್ಟರ್‌ ಗಳಿಗೆ ಅವುಗಳಲ್ಲಿ ಮೂರು 15 ವರ್ಷ ಮೇಲ್ಪಟ್ಟಿದ್ದು ಮೇಲಿಂದ ಮೇಲೆ ದುರಸ್ತಿಗೆ ಬರುತ್ತವೆ. ಆಟೋ ಟಿಪ್ಪರ್‌ 8 ಇದ್ದು ಅವುಗಳಲ್ಲಿ 5 ಸಂಪೂರ್ಣ ಹಾಳಾಗಿವೆ. 3 ಆಟೋ ಟಿಪ್ಪರ್‌ಗಳು ಬರದಿದ್ದಾಗ, ಸಂಗ್ರಹಿಸಿದ ಕಸವನ್ನು ಅಕ್ಕಪಕ್ಕದ ಮನೆಯವರು  ರಾಶಿ ಹಾಕಿಕೊಂಡು ಒಬ್ಬರಿಗೊಬ್ಬರು ನಿಂದಿಸಿರುವ ಉದಾಹರಣೆ ಸಾಮಾನ್ಯ.

ಪುರಸಭೆಗೆ 65 ಜನ ಸ್ವಚ್ಛತಾ ಸಿಬ್ಬಂದಿ, 15 ಜನ ವಾಹನ ಚಾಲಕರು ಬೇಕು. ಆದರೆ ಈಗ ಇರುವುದು 51 ಜನ ಸ್ವಚ್ಛತಾ ಸಿಬ್ಬಂದಿ, ಕೇವಲ ಒಬ್ಬ ಮಾತ್ರ ವಾಹನ ಸಿಬ್ಬಂದಿ ಇದ್ದಾರೆ. ಬೆಳೆಯುತ್ತಿರುವ ಪಟ್ಟಣಕ್ಕೆ ಅನುಗುಣವಾಗಿ ಸ್ವತ್ಛತಾ ಸಿಬ್ಬಂದಿ, ಕಸ ವಿಲೇವಾರಿ ಮಾಡುವ ವಾಹನಗಳು ಇರಬೇಕು.ಈಗ ಇರುವ ವಾಹನಗಳು ಹಾಳಾದರೆ ಕನಿಷ್ಟ ವಾರಗಟ್ಟಲೇ ಕಸ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ಸಮರ್ಪಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ.

Advertisement

ಹೆಚ್ಚಿನ ವಾಹನಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ. ಜನರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್‌ ಹೇಳುತ್ತಾರೆ. ಪೌರಕಾರ್ಮಿಕ ಸಿಬ್ಬಂದಿ ಕೊರತೆ ಮಧ್ಯದಲ್ಲಿ ಇದ್ದ ಸಂಪನ್ಮೂಲ ಬಳಕೆ ಮಾಡಿಕೊಂಡು ಪಟ್ಟಣದ ಸ್ವಚ್ಚತೆ ಬಗ್ಗೆ ಹೆಚ್ಚಿನ ಕಾರ್ಯ ಮಾಡಲಾಗುತ್ತಿದೆ. ಪಟ್ಟಣದ ಸ್ವತ್ಛತೆ ಬಗ್ಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಆರೋಗ್ಯ ನೀಕ್ಷಕ ಎನ್‌.ಎಚ್‌. ಉಸ್ತಾದ ಹೇಳುತ್ತಾರೆ.

ಪಟ್ಟಣದ ಸೌಂದರೀಕರಣಕ್ಕೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಕಸ ವಿಲೇವಾರಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು. ಕಸ ವಿಲೆವಾರಿ ಮಾಡುವ ವಾಹನಗಳ ಬೇಡಿಕೆಯಿದೆ. ವಾಹನ ಖರೀದಿ ಮತ್ತು ಸಿಬ್ಬಂದಿ ನೇಮಕಾತಿ ಕುರಿತು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಈಗ ಒಂದು ಟ್ರಾಕ್ಟರ್‌ ಮತ್ತು ಎರಡು ಆಟೋ ಟಿಪ್ಪರ್‌ಗಳು ಶೀಘ್ರದಲ್ಲಿ ಪುರಸಭೆಗೆ ಬರಲಿವೆ.
ಡಾ| ಶಾಂತವೀರ ಮನಗೂಳಿ, ಅಧ್ಯಕ್ಷರು,
ಪುರಸಭೆ, ಸಿಂದಗಿ

ಸಿಂದಗಿ ಪಟ್ಟಣದ ಸ್ವಚ್ಛತೆಗೆ ಪುರಸಭೆಯಿಂದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಉತ್ಪಾದನೆಯಾಗುವ ಕಸ ವಿಲೇವಾರಿಗೆ ವಾಹನಗಳ ಕೊರೆತೆಯಿದೆ. ಮೇಲಾಗಿ ಸಿಬ್ಬಂದಿಗಳ ಕೊರತೆಯಿದೆ. ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು.
ಅಬ್ಟಾಸಲಿ ಕಾಖಂಡಕಿ, ಅಧ್ಯಕ್ಷರು,
ಕರ್ನಾಟಕ ರಾಜ್ಯ ಪೌರ ನೌಕರರ ಸಂಘ, ವಿಜಯಪುರ

ಪಟ್ಟಣದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಿ. ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದೆ. ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಸದಾ ಇರುತ್ತದೆ. ಮನೆ ಮನೆಗೆ ಕಸ ಸಂಗ್ರಹಿಸುವ ಕಾರ್ಯವಾಗಬೇಕು. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯ ಮಾಡಬೇಕು.
ಬಸವರಾಜ ನಾವಿ, ವರ್ತಕ, ಸಿಂದಗಿ

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next