ಚನ್ನಪಟ್ಟಣ: ನಗರದಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯ- ಕಸ ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರು ವುದರಿಂದ ದುರ್ವಾಸನೆ ನಗರವಾಗಿ ಮಾರ್ಪಟ್ಟಿದೆ. ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಕೋಳಿತ್ಯಾಜ್ಯ ಹಾಗೂ ಕಸವನ್ನು ಕೆರೆಯಂಗಳ, ಮಠ, ದೇವಾಲಯಗಳ ಸಮೀಪ, ಹೆದ್ದಾರಿ, ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾ ಗುತ್ತಿದೆ. ಇದರಿಂದಾಗಿ ದಾರಿಹೋಕರು ಸಹಿಸಲಾಗದ ವಾಸನೆಯಿಂದ ರೋಸಿ ಹೋಗಿದ್ದಾರೆ.
ಪ್ರಮುಖವಾಗಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ, ಪಟ್ಟಣದ ಹೊರವಲಯದ ಕೆರೆಗಳ ಏರಿ, ಅಂಗಳ, ಸೇತುವೆ ಕೆಳಗೆ ಕೋಳಿ ತ್ಯಾಜ್ಯದ ಮೂಟೆ ಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ಅಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಉಸಿರು ಬಿಗಿ ಹಿಡಿದು ಸಾಗುವಂತಾಗಿದೆ. ಅಲ್ಲದೇ, ಸುತ್ತಮುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ.
ಭಕ್ತರಿಗೆ ಕಿರಿಕಿರಿ: ವಿರಕ್ತಮಠದ ಎದುರಿಗೆ ಇರುವ ಕುಡಿಯುವ ನೀರು ಕಟ್ಟೆಗೆ ಮೂಟೆಗಳಲ್ಲಿ ಕೋಳಿ ತ್ಯಾಜ್ಯ ಕಟ್ಟಿ ಬಿಸಾಡುತ್ತಿರುವುದರಿಂದ ಮಠಕ್ಕೆ ಆಗಮಿಸುವ ಭಕ್ತರು ಸಹಿಸಲು ಆಗದ ವಾಸನೆ ಸಹಿಸಿಕೊಂಡೇ ಮಠ ಪ್ರವೇಶಿಸಬೇಕಾಗಿದೆ. ಇನ್ನುಮಠಕ್ಕೆ ಆಗಮಿಸುವ ರಸ್ತೆ ಬದಿಯಲ್ಲಿಯೂ ತ್ಯಾಜ್ಯದ ಮೂಟೆಗಳನ್ನು ಬಿಸಾಡಲಾಗುತ್ತಿದೆ. ಈ ಬಗ್ಗೆ ನಗರಸಭೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಮಠಾಧೀಶ ಶಿವರುದ್ರಸ್ವಾಮೀಜಿ ಆಗ್ರಹಿಸಿದ್ದಾರೆ. ಇನ್ನು ಇಂತಹದ್ದೇ ಸ್ಥಿತಿ ಕಲ್ಯನಾಥೇಶ್ವರ ದೇವಾಲಯದ ಬಳಿಯೂ ಇದೆ. ಹೆದ್ದಾರಿ ಇನ್ನೊಂದು ಬದಿಯಲ್ಲಿ ಸೇತುವೆ ಬಳಿ ಹೆಚ್ಚಾಗಿ ಕೋಳಿ ತ್ಯಾಜ್ಯ ಬಿಸಾಡುತ್ತಿರುವುದರಿಂದ ಅಲ್ಲಿಗೆ ಆಗಮಿಸುವ ಭಕ್ತರೂ ಮೂಗುಮುಚ್ಚಿಕೊಂಡೇ ದೇವಸ್ಥಾನಕ್ಕೆ ತೆರಳಬೇಕಿದೆ. ಸುಮಾರು ವರ್ಷಗಳಿಂದಲೂ ಇಲ್ಲಿ ತ್ಯಾಜ್ಯ ಬಿಸಾಡುತ್ತಿದ್ದರೂ ಸಂಬಂಧಪಟ್ಟವರು ಮಾತ್ರ ಕಂಡೂ ಕಾಣದಂತೆ ಸುಮ್ಮನಿದ್ದಾರೆ.
ಕೆರೆ ನೀರು ಕಲುಷಿತ: ಕೆರೆಯಂಗಳಕ್ಕೆ ತ್ಯಾಜ್ಯದ ಮೂಟೆಗಳನ್ನು ಬಿಸಾಡುತ್ತಿರುವುದರಿಂದ ಕೋಳಿಯ ವಿವಿಧ ಭಾಗಗಳು ಕೊಳೆತು ನೀರು ಕಲುಷಿತವಾಗುತ್ತಿದೆ. ಇನ್ನು ಕೆರೆಗಳಲ್ಲಿನ ಮೀನುಗಳ ಬೆಳವಣಿಗೆಗೆ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಕೆರೆಯ ಬಳಿಗೆ ತ್ಯಾಜ್ಯ ತಿನ್ನಲು ಬರುವ ನಾಯಿ, ಹಂದಿಗಳು ಆ ಸ್ಥಳವನ್ನೆಲ್ಲಾ ಇನ್ನಷ್ಟು ಕಲುಷಿತ ಮಾಡುತ್ತಿವೆ.
ಕ್ರಮ ಕೈಗೊಳ್ಳಲಿ: ಕೋಳಿ ಶುಚಿಗೊಳಿಸಿದ ನಂತರ ಬಿಸಾಡಬೇಕಾಗಿರುವ ತ್ಯಾಜ್ಯವನ್ನು ಗುಂಡಿತೋಡಿ ವೈಜಾnನಿಕವಾಗಿ ವಿಲೇವಾರಿ ಮಾಡಬೇಕೆಂದು ನಗರಸಭೆ ಪರವಾನಗಿ ನೀಡುವ ಸಂದರ್ಭದಲ್ಲೇ ತಿಳಿಸಿದೆ. ಆದರೆ, ಅದನ್ನು ಯಾರೂ ಪಾಲಿಸುತ್ತಿಲ್ಲ. ಇನ್ನು ನಗರಸಭೆಯೂ ಬಿಸಾಡುತ್ತಿರುವ ಮಾಹಿತಿ ತಿಳಿದಿದ್ದರೂ, ಅವರನ್ನು ಹಿಡಿದು ದಂಡ ವಿಧಿಸುವ ಅಥವಾ ಪರವಾನಗಿ ರದ್ದು ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ಕೋಳಿ ತ್ಯಾಜ್ಯ ನಿತ್ಯ ಪ್ರಯಾಣಿಕರಿಗೆ ಇನ್ನಿಲ್ಲದ ಸಮಸ್ಯೆ ಒಡ್ಡುತ್ತಿದೆ. ನಗರಸಭೆ ಪ್ರಭಾರ ಪೌರಾಯುಕ್ತರಾಗಿದ್ದ ಮಾಯಣ್ಣಗೌಡ, ಕೋಳಿ ತ್ಯಾಜ್ಯ ಸಂಗ್ರಹಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು, ಎಲ್ಲೆಂದರಲ್ಲಿ ಬಿಸಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಈ ಹಿಂದಿನ ತಾಪಂ ಸಭೆಯೊಂದರಲ್ಲಿ ತಿಳಿಸಿದ್ದರು.
ಆದರೆ, ಅವರು ಈಗ ಕರ್ತವ್ಯದಿಂದ ಮುಕ್ತರಾಗಿ ಹೊಸ ಪೌರಾಯುಕ್ತರು ಆಗಮಿಸಿದ್ದಾರೆ. ಈ ಹಿಂದೆ ಇದೇ ನಗರಸಭೆಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಶಿವನಂಕಾರಿಗೌಡ, ಈಗ ಪೌರಾಯುಕ್ತರಾಗಿದ್ದಾರೆ. ಇನ್ನಾದರೂ ಈ ಬಗ್ಗೆ ಗಮನಹರಿಸಿ ಕೋಳಿ ಅಂಗಡಿ ಮಾಲಿಕರಿಗೆ ನಿಯಮ ಪಾಲಿಸುವಂತೆ ನೋಟಿಸ್ ನೀಡಿ ಕೋಳಿ ತ್ಯಾಜ್ಯ ದುರ್ವಾಸನೆಯಿಂದ ಜನತೆಗೆ ಅನುಕೂಲ ಮಾಡಿಕೊಡಬೇಕಿದೆ.
-ಎಂ.ಶಿವಮಾದು