Advertisement

ಮಿಶ್ರ ಕಸದಿಂದ ಲೋಪದ ಕಮಟುವಾಸನೆ!

10:26 AM Mar 30, 2020 | Suhan S |

ಬೆಂಗಳೂರು: ನಗರವು ಅರ್ಧಕ್ಕರ್ಧ ಖಾಲಿಯಾಗಿದೆ. ವಾಣಿಜ್ಯ ಮಳಿಗೆಗಳಂತೂ ವಾರದಿಂದ ಸಂಪೂರ್ಣ ಸ್ಥಗಿತಗೊಂಡಿವೆ. ಈ ದೃಷ್ಟಿಯಿಂದ ಒಟ್ಟಾರೆ ತ್ಯಾಜ್ಯದ ಪ್ರಮಾಣ ಕಡಿಮೆ ಆಗಬೇಕು. ಆದರೆ, ವಾಸ್ತವವಾಗಿ ಈ ಲೆಕ್ಕಾಚಾರ ಉಲ್ಟಾ ಆಗಿದೆ!

Advertisement

ಮಿಶ್ರಕಸ ಪ್ರಮಾಣ ಗಣನೀಯವಾಗಿ ಏರಿಕೆ ಕಂಡುಬರುತ್ತಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದ ನಿರ್ವಹಣೆಯಲ್ಲಿನ ಉದ್ದೇಶ ಪೂರ್ವಕ ಲೋಪದ ಕಮಟುವಾಸನೆ ಮಿಶ್ರಕಸದಿಂದ ಹೊಮ್ಮುತ್ತಿದೆ.

ಮೂಲಗಳ ಪ್ರಕಾರ ಈ ಹಿಂದೆ ಹಸಿಕಸ ಸಂಸ್ಕರಣಾ ಘಟಕಗಳಿಗೆ ಜನವರಿಯಲ್ಲಿ 1,054 ಮೆಟ್ರಿಕ್‌ ಟನ್‌, ಫೆಬ್ರವರಿಯಲ್ಲಿ 1,182,ಮಾರ್ಚ್‌ನಲ್ಲಿ 811 ಮೆಟ್ರಿಕ್‌ಟನ್‌ (ಎಂಎಸ್‌ಜಿಪಿ ಸೇರಿ) ಹಸಿಕಸ ಸಾಗಯಾಗಿದೆ. ಅಂದರೆ ಮೊದಲೆರಡು ತಿಂಗಳಿಗೆ ಹೋಲಿಸಿದರೆ, 200ರಿಂದ 300 ಮೆಟ್ರಿಕ್‌ಟನ್‌ನಷ್ಟು ಹಸಿಕಸವು ಸಂಸ್ಕಾರಣಾ ಘಟಕಗಳಿಗೆ ಹೋಗುವುದು ಕಡಿಮೆ ಯಾಗಿದೆ. ಇನ್ನು ಮಿಟ್ಟಗಾನಹಳ್ಳಿ ಭೂಭರ್ತಿಗೆ ಜನವರಿ ಮತ್ತು ಫೆಬ್ರವರಿಯಲ್ಲಿ ಕ್ರಮವಾಗಿ 2,560 ಮತ್ತು 2,162 ಮೆಟ್ರಿಕ್‌ಟನ್‌ ಸಾಗಣೆಯಾಗಿದ್ದರೆ, ಮಾರ್ಚ್ ನಲ್ಲಿ 3,184 ಮೆಟ್ರಿಕ್‌ಟನ್‌ ಕಸ ಭೂ ಭರ್ತಿಗೆ ಹೋಗುತ್ತಿದೆ.

ಪ್ರಾಯೋಗಿಕ ಮತ್ತು ಸಂಪೂರ್ಣ ಲಾಕ್‌ ಡೌನ್‌ ಆದಾಗಿನಿಂದ ನಗರದ ಸಗಟು ತ್ಯಾಜ್ಯ ಉತ್ಪಾದನೆಯಲ್ಲಿ 1 ಸಾವಿರದಿಂದ 1,500 ಸಾವಿರ ಮೆಟ್ರಿಕ್‌ಟನ್‌ನಷ್ಟು ಕುಸಿತ ಕಂಡು ಬಂದಿದೆ. ಆದರೆ, ಹಸಿಕಸ ನೀಡುವಲ್ಲಿ ಜನ ವಿಫ‌ಲರಾಗಿದ್ದಾರೆ. ಜತೆಗೆ ನಿರ್ವಹಣೆಯೂ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ, ಪಾಲಿಕೆಯ ಹಸಿಕಸ ಸಂಸ್ಕರಣಾ ಘಟಕಗಳಿಗೆ ಹೋಗುತ್ತಿದ್ದ ಕಸದ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ. ಮಿಶ್ರತ್ಯಾಜ್ಯದ ಪ್ರಮಾಣ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಮಿಶ್ರಕಸಕ್ಕೆ ಸುಲಭ ಹಾದಿ!: ಹಸಿ ಮತ್ತು ಒಣಕಸ ಪ್ರತ್ಯೇಕಿಸಿ ಸಾಗಣೆಗಿಂತ ಗುತ್ತಿಗೆದಾರರಿಗೆ ಮಿಶ್ರಕಸ ಸಾಗಾಣೆ ಮಾಡಿದರೆನೇ ಲಾಭ ಹೆಚ್ಚು. ಹಸಿಕಸ ಸಂಸ್ಕ ರಣಾ ಘಟಕ ಗಳಿಗೂ, ಭೂಭರ್ತಿಗೆ ಇರುವ ಕಿ.ಮೀ ಅಂತರ ಅಂದಾಜು 35ರಿಂದ 40 ಕಿ.ಮೀ ಇದೆ. ಲಾರಿಗಳಿಗೆ ಕಿ.ಮೀ ಆಧಾರದ ಮೇಲೆ ದರ ನಿಗದಿಯಾಗುವುದರಿಂದ ಭೂ ಭರ್ತಿಗೆ ಹೆಚ್ಚು ಮಿಶ್ರಕಸ ಸಾಗಣೆ ಆಗುತ್ತಿದೆ ಎನ್ನುವ ಆರೋಪ ಇದೆ. ಈಗ ಪಾಲಿಕೆ ಅಧಿಕಾರಿಗಳೂ ಹಸಿಕಸ ಪ್ರತ್ಯೇಕಿ ಸುವ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿಲ್ಲ. ಹೀಗಾಗಿ, ಮಿಶ್ರಕಸ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

Advertisement

ಬ್ಲಾಕ್‌ಸ್ಪಾಟ್‌ಗಳು ಮಾಯ : ಲಾಕ್‌ಡೌನ್‌ನಿಂದ ಪಾಲಿಕೆಯ ಪೌರಕಾರ್ಮಿಕರ ಹೊರೆ ತಗ್ಗಿದೆ. ನಗರದಲ್ಲಿ ಈ ಹಿಂದೆ ಸೃಷ್ಟಿಯಾಗುತ್ತಿದ್ದ ಬ್ಲಾಕ್‌ ಸ್ಪಾಟ್‌ ಗಳಲ್ಲಿ ಶೇ. 50ರಷ್ಟು ಬ್ಲಾಕ್‌ ಸ್ಪಾಟ್‌ ಕಡಿಮೆಯಾಗಿವೆ. ಈ ಹಿಂದೆ ಕಸ ಸಂಗ್ರಹಿಸುವ ವೇಳೆ ಜನ ಮನೆಯಲ್ಲಿ ಇರುತ್ತಿರಲಿಲ್ಲ ಹಾಗೂ ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿದ್ದರು. ಅಲ್ಲದೆ, ಈಗ ಮನೆಯಿಂದ ಹೊರಬರದಂತೆ ಸರ್ಕಾರ ದಿಗ್ಬಂಧನ ಹಾಕಿರುವ ಹಿನ್ನೆಲೆಯಲ್ಲಿ ಬ್ಲಾಕ್‌ಸ್ಪಾಟ್‌ಗಳು ಕಡಿಮೆಯಾಗಿವೆ ಎಂದು ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಹಸಿ-ಒಣಕಸ ಪ್ರತ್ಯೇಕ ಸಂಗ್ರಹ ಸಾಧ್ಯವಾಗುತ್ತಿಲ್ಲ. ಜತೆಗೆ ಕೋವಿಡ್ 19ದ ಬಗ್ಗೆಜಾಗೃತಿ ಹಾಗೂ ಸ್ವತ್ಛತಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸಾರ್ವಜನಿಕರೇ ಹಸಿ ಮತ್ತು ಒಣ ಹಾಗೂ ಮುಖ್ಯವಾಗಿ ತಾವು ಬಳಸುವ ಮಾಸ್ಕ್, ಗ್ಲೌಸ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಿ ಜವಾಬ್ದಾರಿ ಪ್ರದರ್ಶಿಸಬೇಕು. -ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next