Advertisement

ತುಕ್ಕು ಹಿಡಿಯುತ್ತಿವೆ ತ್ಯಾಜ್ಯ ಸಂಗ್ರಹ ವಾಹನಗಳು

04:32 PM Jul 11, 2023 | Team Udayavani |

ಕೆಜಿಎಫ್‌: ನಗರದಲ್ಲಿ ಕಸ ಸಂಗ್ರಹಣೆಗೆ ಜನರ ತೆರಿಗೆ ಹಣದಿಂದ ಖರೀದಿ ಮಾಡಲಾದ ಕೋಟ್ಯಂತರ ರೂ ಬೆಲೆ ಬಾಳುವ ಕಸ ಸಂಗ್ರಹಣಾ ವಾಹನಗಳು ಅತ್ತ ಉಪಯೋಗಕ್ಕೆ ಬಾರದೇ, ಇತ್ತ ಹರಾಜು ಮಾಡದೇ ತಿಂಗಳಾನುಗಟ್ಟಲೇ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಾ ಕೆಲಸಕ್ಕೆ ಬಾರದಂತಾಗಿದೆ.

Advertisement

ನಗರಸಭೆ ಕಚೇರಿ ಮುಂದೆ 2 ಡಂಪರ್‌ ಪ್ಲೆಸರ್‌ (ತ್ಯಾಜ್ಯ ಸುರಿಯುವ ಹಳದಿ ಬಣ್ಣದ ಕಬ್ಬಿಣ ಕಂಟೈನರ್‌ ಸಾಗಿಸುವ ವಾಹನ)ಗಳು, 10 ಟಾಟಾ ಏಸ್‌ ವಾಹನಗಳು, 1 ಆಟೋ ಟಿಪ್ಪರ್‌, 2 ನೀರಿನ ಟ್ಯಾಂಕರ್‌ ಗಳು, 1 ಸಕ್ಕಿಂಗ್‌ ವಾಹನ ಇವಿಷ್ಟೂ ವಾಹನಗಳು ಕೆಲಸಕ್ಕೆ ಬಾರದೇ ತುಕ್ಕು ಹಿಡಿಯುತ್ತಾ ನಿಂತಿವೆ.

ಧೂಳು ತಿನ್ನುತ್ತಾ ಅನಾಥವಾಗಿವೇ ವಾಹನಳು: ಒಂದು ಡಂಪರ್‌ ಪ್ಲೆಸರ್‌ ವಾಹನದ ಬೆಲೆ ಸುಮಾರು 17.5 ಲಕ್ಷ ರೂಗಳಾಗಿದ್ದು, 35 ಲಕ್ಷ ರೂ ಬೆಲೆಯ ಎರಡು ವಾಹನಗಳು ನಿಂತಲ್ಲೆ ನಿಂತು ಕೊಳೆಯುತ್ತಿವೆ. ಇನ್ನು ಒಂದು ಟಾಟಾ ಏಸ್‌ ವಾಹನದ ಬೆಲೆ ಸುಮಾರು 4 ಲಕ್ಷ ರೂಗಳಾಗಿದ್ದು, 40 ಲಕ್ಷ ರೂ ಬೆಲೆಯ 10 ವಾಹನಗಳು ಕೇಳುವವರಿಲ್ಲದೇ ಸೊರಗುತ್ತಿವೆ. ಇದಲ್ಲದೇ ಸುಮಾರು 5 ಲಕ್ಷ ಬೆಲೆಯ ಒಂದು ಸಕ್ಕಿಂಗ್‌ ಯಂತ್ರ ಮತ್ತು ಸುಮಾರು 2 ಲಕ್ಷ ಬೆಲೆಯ ಆಟೋ ಟಿಪ್ಪರ್‌ ಮತ್ತು ಸುಮಾರು 5 ಲಕ್ಷ ಬೆಲೆಯ 2 ನೀರಿನ ಟ್ಯಾಂಕರ್‌ಗಳು ಧೂಳು ತಿನ್ನುತ್ತಾ ಅನಾಥವಾಗಿ ಬಿದ್ದಿವೆ.

ತಲೆನೋವಾದ ಕಸ ಸಂಗ್ರಹಣೆ ಕಾರ್ಯ: ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಕಸವನ್ನು ಸಂಗ್ರಹಿಸಲು ನಗರಸಭೆ ಬಳಿ ಇರುವ ಟಿಪ್ಪರ್‌, ಟ್ರಾಕ್ಟರ್‌ ಟ್ರಾಲಿಗಳು ನಿರ್ವಹಣೆ ಇಲ್ಲದೆ ಅವ ಧಿಗೂ ಮುನ್ನವೆ ತುಕ್ಕು ಹಿಡಿ ದಿದ್ದು, ಕಸ ಸಂಗ್ರಹಣೆಗೆ ಮತ್ತು ಸಾಗಾಟಕ್ಕೆ ಹರಸಾಹಸ ಪಡುವಂತಾಗಿದೆ. ನಗರದ 35 ವಾರ್ಡ್‌ಗಳಲ್ಲಿ 2 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಪ್ರತಿದಿನ ಕಸ ಸಂಗ್ರಹಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಸ ಸಂಗ್ರಹ ಡಬ್ಬ ಖರೀದಿಗೆ 70 ಲಕ್ಷ ವ್ಯಯ: ಕೇವಲ 5 ವರ್ಷಗಳ ಹಿಂದೆ ತೆಗೆದುಕೊಂಡಿರುವ ವಾಹನಗಳು ಗುಜರಿಗೆ ಹಾಕುವ ಹಂತಕ್ಕೆ ತಲುಪಿರುವುದನ್ನು ಕಂಡರೆ ನಗರಸಭೆ ಅಧಿ ಕಾರಿಗಳು ವಾಹನಗಳ ನಿರ್ವಹಣೆ ಯಾವ ರೀತಿಯಲ್ಲಿ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಗರದ ಎಲ್ಲಾ ವಾರ್ಡ್‌ಗಳಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಸಂಗ್ರಹಿಸಲು ಪ್ರತಿ ಮನೆಗೆ ಎರಡು ಪ್ಲಾಸ್ಟಿಕ್‌ ಬುಟ್ಟಿಗಳನ್ನು ನೀಡಿದ್ದಾರೆ. ಆದರೆ, ಯಾವು ದೇ ಮನೆಯಲ್ಲಿ ಕಸ ವನ್ನು ಹಸಿ ಮತ್ತು ಒಣ ಎಂದು ಬೇರ್ಪಡಿಸಿ ನೀಡುತ್ತಿರುವ ಉದಾಹರಣೆ ಇಲ್ಲ. ಆದರೆ, ಈ ಕಸದ ಬುಟ್ಟಿಗಳ ಖರೀದಿಗೆ ನಗರಸಭೆ ಅಧಿ ಕಾರಿಗಳು 70 ಲಕ್ಷ ರೂಪಾಯಿಗಳನ್ನು ವ್ಯಯ ಮಾಡಿದ್ದಾರೆ ಎನ್ನಲಾಗಿದ್ದು, ಫಲಿತಾಂಶ ಮಾತ್ರ ಶೂನ್ಯವಾಗಿದ್ದು, ಇಷ್ಟು ಮಾತ್ರಕ್ಕೆ ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನು ಪೋಲು ಮಾಡುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಇನ್ನಾದರೂ ನಗರಸಭೆ ಅ ಧಿಕಾರಿಗಳು ತುಕ್ಕು ಹಿಡಿದಿರುವ ವಾಹನಗಳನ್ನು ಹರಾಜು ಮಾಡಿ, ಹೊಸ ವಾಹನಗಳನ್ನು ಖರೀದಿಸಿ, ನಗರವನ್ನು ಕಸ ಮುಕ್ತವನ್ನಾಗಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Advertisement

ಹಳೆಯ ವಾಹನಗಳತ್ತ ಅಧಿಕಾರಿಗಳ ಅಸಡ್ಡೆ : ಇವುಗಳಲ್ಲಿನ ಕೆಲವು ವಾಹನಗಳು ಅನೇಕ ದಿನಗಳಿಂದ ನಿಂತಲ್ಲೇ ನಿಂತ ಕಾರಣಕ್ಕೆ ಬಿಡಿ ಭಾಗಗಳು ಕಣ್ಮರೆಯಾಗಿದ್ದರೆ, ಮತ್ತೆ ಕೆಲವು ವಾಹನಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿವೆ. ಹೊಸ ವಾಹನಗಳು ಬಂದ ತಕ್ಷಣ ಅಧಿ ಕಾರಿಗಳು ಹಳೆಯ ವಾಹನಗಳತ್ತ ಅಸಡ್ಡೆ ತೋರುತ್ತಾರೆ. ಅದರ ಬದಲು ವಾಹನಗಳು ಸುಸ್ಥಿತಿಯಲ್ಲಿರುವಾಗಲೇ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ವಾಹನ ಪರೀಕ್ಷಿಸಿ ವರದಿ ಪಡೆದು, ಅವರು ನಿಗದಿಪಡಿಸುವ ಬೆಲೆಗೆ ಹರಾಜು ಹಾಕಿದರೆ ತುಕ್ಕು ಹಿಡಿದು ವಿರೂಪಗೊಂಡ ವಾಹನಗಳಿಗಿಂತಲೂ ಹೆಚ್ಚಿನ ಆದಾಯ ಬರುತ್ತದೆ ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.

ಹಳೆಯ ವಾಹನಗಳ ವಿಲೇವಾರಿಗೆ ಈಗಾಗಲೇ ಆರ್‌ಟಿಒ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದು, ಅವರು ವಾಹನಗಳ ಪರಿಶೀಲನೆ ನಡೆಸಿ ವರದಿಯನ್ನು ನೀಡಿದ ಕೂಡಲೇ ಇ-ಹರಾಜು ಮೂಲಕ ವಾಹನಗಳನ್ನು ಹರಾಜು ಮಾಡಲಾಗುವುದು. ● ಮಂಜುನಾಥ್‌, ಪ್ರಭಾರಿ ಪೌರಾಯುಕ್ತರು, ನಗರಸಭೆ ಕೆಜಿಎಫ್‌

ನಾಗೇಂದ್ರ ಕೆ

Advertisement

Udayavani is now on Telegram. Click here to join our channel and stay updated with the latest news.

Next