Advertisement

ತ್ಯಾಜ್ಯ ಸಂಗ್ರಹ ವಾಹನಕ್ಕೂ ಮಹಿಳಾ ಸಾರಥಿಗಳು!

01:15 AM Nov 11, 2021 | Team Udayavani |

ಬಂಟ್ವಾಳ: ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಬಸ್‌, ಆಟೋ ಓಡಿಸುವುದನ್ನು ಕೂಡ ಗಮನಿಸಿದ್ದೇವೆ. ಇದೀಗ ದ.ಕ. ಜಿಲ್ಲೆಯಲ್ಲೇ ಮೊದಲ ಪ್ರಯೋಗವೆಂಬಂತೆ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾ.ಪಂ.ನ ಸ್ವಚ್ಛ ಸಂಕೀರ್ಣದ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಇಬ್ಬರು ಮಹಿಳೆಯರು ಸಾರಥಿಗಳಾಗಿದ್ದಾರೆ.

Advertisement

ರಾಜ್ಯದ ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲೂ ಸ್ವಚ್ಛ ಸಂಕೀರ್ಣ ನಿರ್ಮಿಸಿ ವಾಹನದ ಮೂಲಕ ತ್ಯಾಜ್ಯ ಸಂಗ್ರಹ ಕಡ್ಡಾಯಗೊಳಿಸಲಾಗುತ್ತಿದ್ದು, ಬಹುತೇಕ ಅನುಷ್ಠಾನಗೊಂಡಿದೆ. ದ.ಕ. ಜಿಲ್ಲೆಯಲ್ಲಿ ವಿವಿಧ ಮಹಿಳಾ ಒಕ್ಕೂಟಗಳು ಈ ಕಾರ್ಯವನ್ನು ಮಾಡುತ್ತಿವೆಯಾದರೂ ಮಹಿಳೆಯರೇ ವಾಹನ ಚಲಾಯಿಸುತ್ತಿರುವುದು ಮೊದಲು.

26 ಚಾಲಕಿಯರ ಗುರುತು
ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)- ಸಂಜೀವಿನಿ ಮೂಲಕ 28 ಗ್ರಾ.ಪಂ.ಗಳಲ್ಲಿ ತರಬೇತಾದ 59 ಮಹಿಳೆಯರೇ ಸ್ವಚ್ಛ ಸಂಕೀರ್ಣವನ್ನು ನಿರ್ವಹಿಸುತ್ತಿದ್ದಾರೆ. ಇನ್ನೂ 30 ಗ್ರಾ.ಪಂ.ಗಳಲ್ಲಿ ಸಂಜೀವಿನಿ ಒಕ್ಕೂಟಗಳ ಮೂಲಕ ಸ್ವಚ್ಛ ಸಂಕೀರ್ಣವನ್ನು ನಿರ್ವಹಿಸುವ ಕುರಿತು ಜಿ.ಪಂ. ಸಿದ್ಧತೆ ನಡೆಸುತ್ತಿದೆ.

ಕಡೇಶ್ವಾಲ್ಯ ಗ್ರಾ.ಪಂ. ಅನ್ನೇ ಮಾದರಿ ಯಾಗಿಟ್ಟು ಕೊಂಡು ಇತರ ಗ್ರಾ.ಪಂ.ಗಳಲ್ಲೂ ವಾಹನ ಚಾಲಕಿಯರನ್ನು ತಯಾರುಗೊಳಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಎನ್‌ಆರ್‌ಎಲ್‌ಎಂ ಘಟಕ ಸುಮಾರು 26 ಮಹಿಳೆಯರನ್ನು ಗುರುತಿಸಿದ್ದು, ತರಬೇತಿ ನೀಡಲಿದೆ. ಪುಣಚ ಗ್ರಾ.ಪಂ.ನಲ್ಲಿ ಈಗಾಗಲೇ ಮಹಿಳೆಗೆ ಚಾಲನಾ ಪರವಾನಿಗೆ ಸಿಕ್ಕಿದ್ದು, ಪೂರ್ಣ ಪ್ರಮಾಣದ ಕಾರ್ಯ ಆರಂಭಗೊಂಡಿಲ್ಲ.

ಮಾತೃ ಸಂಜೀವಿನಿ ಒಕ್ಕೂಟ
ಕಡೇಶ್ವಾಲ್ಯ ಗ್ರಾ.ಪಂ. ಹಾಗೂ ಅಲ್ಲಿನ ಮಾತೃ ಸಂಜೀವಿನಿ ಒಕ್ಕೂಟವು ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ವಹಿಸುವ ಒಡಂಬಡಿಕೆ ಮಾಡಿಕೊಂಡಿದ್ದು, ಪ್ರಾಯೋಗಿಕ ಕಾರ್ಯಾಚರಣೆ ಆರಂಭಗೊಂಡಿದೆ. ಆರಂಭಿಕ ಹಂತದಲ್ಲಿ ಒಕ್ಕೂಟಕ್ಕೆ ಗ್ರಾ.ಪಂ.ನಿಂದ ತಿಂಗಳಿಗೆ 30 ಸಾವಿರ ರೂ.ಗಳಂತೆ ನೀಡಲಾಗುತ್ತದೆ. ಜತೆಗೆ ತ್ಯಾಜ್ಯ ಸಂಗ್ರಹದ ಶುಲ್ಕ ಸಂಗ್ರಹವನ್ನೂ ಒಕ್ಕೂಟವೇ ಮಾಡಲಿದೆ. ಗ್ರಾಮದ ಬೊಳ್ಳಾರು ಮುಂಗೂರು ನಿವಾಸಿ ಪ್ರಮೀಳಾ ಹಾಗೂ ಪೆರ್ಲಾಪು ಮುಂಡಾಳ ನಿವಾಸಿ ಲಕ್ಷ್ಮೀ ಪ್ರಸ್ತುತ ತರಬೇತಿ ಪಡೆದು ಪೂರ್ಣ ಪ್ರಮಾಣದಲ್ಲಿ ಚಾಲನಾ ವೃತ್ತಿ ನಿರ್ವಹಿಸುತ್ತಿದ್ದಾರೆ.

Advertisement

ಇದನ್ನೂ ಓದಿ:ಮನೆಗಳ್ಳತನ ಪ್ರಕರಣ : ಆರು ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತುಗಳು ವಶ

ಪ್ರಾರಂಭದಲ್ಲಿ ಪ್ರೋತ್ಸಾಹ ಮೊತ್ತ
ನಮ್ಮ ಗ್ರಾ.ಪಂ. ಮಾತೃ ಸಂಜೀವಿನಿ ಒಕ್ಕೂಟದ ಜತೆ ಒಡಂಬಡಿಕೆ ಮಾಡಿಕೊಂಡು ಘಟಕವನ್ನು ನಿರ್ವಹಿಸಲಾಗುತ್ತಿದೆ. ಪ್ರಾರಂಭದಲ್ಲಿ ಅವರಿಗೆ ಪ್ರೋತ್ಸಾಹವಾಗಿ ಗ್ರಾ.ಪಂ.ನಿಂದ ತಿಂಗಳಿಗೆ 30 ಸಾವಿರ ರೂ.ನೀಡಲಿದ್ದು, ಸ್ವಚ್ಛ ಸಂಗ್ರಹಣ ವಾಹನಕ್ಕೆ ಮಹಿಳೆಯರೇ ಚಾಲಕರಿರುವುದು ವಿಶೇಷವಾಗಿದೆ ಎಂದು ಕಡೇಶ್ವಾಲ್ಯ ಗ್ರಾ.ಪಂ. ಪಿಡಿಒ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ತೃಪ್ತಿ ನೀಡಿದ ವೃತ್ತಿ
ಸ್ವ ಇಚ್ಛೆಯಿಂದ ಈ ಕಾರ್ಯದಲ್ಲಿ ತೊಡಗಿದ್ದು, ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರ ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಾವು ಇಬ್ಬರು ಚಾಲಕಿಯರು ಸೇರಿ ಒಟ್ಟು ನಾಲ್ವರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ತ್ಯಾಜ್ಯ ಸಂಗ್ರಹ ವಾಹನದ ಚಾಲನೆ ಕಷ್ಟ ಎನಿಸದೆ ತೃಪ್ತಿ ನೀಡಿದೆ.
– ಪ್ರಮೀಳಾ ಹಾಗೂ ಲಕ್ಷ್ಮೀ,
ಚಾಲಕಿಯರು

ಮಹಿಳಾ ಸಶಕ್ತೀಕರಣ ಕಲ್ಪನೆಯಲ್ಲಿ ಪುರುಷರಂತೆ ಮಹಿಳೆಯರು ಕೂಡ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಳ್ಳುವುದಕ್ಕೆ ಅವಕಾಶ ಇರುವುದರಿಂದ ಅವರ ಆರ್ಥಿಕ ಚಟುವಟಿಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ವಸಹಾಯ ಗುಂಪುಗಳ ಮೂಲಕ ಸ್ವಚ್ಛ ಸಂಕೀರ್ಣಗಳನ್ನು ನಿರ್ವಹಣೆಗೆ ನೀಡಲಾಗಿದ್ದು, ಚಾಲನಾ ತರಬೇತಿ ಪಡೆದಿರುವವರಿಗೆ ವಾಹನ ಚಾಲನೆಯ ಅವಕಾಶವನ್ನೂ ನೀಡಲಾಗಿದೆ.
– ಡಾ| ಕುಮಾರ್‌, ದ.ಕ. ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next