Advertisement

ತ್ಯಾಜ್ಯ ಸಂಗ್ರಹ: ನಿಗಾ ವಹಿಸಲು ಕ್ಯೂಆರ್‌ ಕೋಡ್‌

11:15 PM Feb 13, 2020 | Sriram |

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನು “ಸ್ಮಾರ್ಟ್‌’ ಆಗಿ ನಿರ್ವಹಿಸಲು “ಕ್ಯೂ ಆರ್‌ ಕೋಡ್‌’ ಬಳಕೆ ಆರಂಭಿಸಲಾಗಿದೆ. ಮನೆ ಮನೆಗಳಿಂದ ಕಸ ಸಂಗ್ರಹ ಗುತ್ತಿಗೆ ಪಡೆದಿರುವ ಸಂಸ್ಥೆಯ ಸಿಬಂದಿ ನಿಯಮಿತವಾಗಿ ಕಸ ಸಂಗ್ರಹಿ ಸುತ್ತಿ ದ್ದಾರೆಯೇ ಎಂಬುದನ್ನು ಪಾಲಿಕೆ ನೇರವಾಗಿ ಗಮನಿಸಲು ಈ ಕ್ಯೂಆರ್‌ ಕೋಡ್‌ ನೆರವಿಗೆ ಬರುತ್ತದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮಣ್ಣಗುಡ್ಡೆ ವಾರ್ಡ್‌ ನಲ್ಲಿ ಆರಂಭಿಸಲಾಗಿದ್ದು, ಇಲ್ಲಿರುವ ಎಲ್ಲ 2,000 ಮನೆ / ವಸತಿ ಸಂಕೀರ್ಣಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.

Advertisement

ಕಾರ್ಯನಿರ್ವಹಣೆ ಹೇಗೆ?
ಮಣ್ಣಗುಡ್ಡೆ ವಾರ್ಡ್‌ನ 500ಕ್ಕೂ ಅಧಿಕ ಮನೆಗಳ ಗೇಟು, ಗೋಡೆಗಳಲ್ಲಿ ಕ್ಯೂಆರ್‌ ಕೋಡ್‌ ಸ್ಟಿಕ್ಕರ್‌ಗಳನ್ನು ಈಗಾಗಲೇ ಲಗತ್ತಿಸಲಾಗಿದೆ. ಕಸ ಸಂಗ್ರಹಿಸುವ ಸಿಬಂದಿ ಕಸ ಸಂಗ್ರಹಕ್ಕಾಗಿ ಮನೆಗಳಿಗೆ ತೆರಳಿ ಅಲ್ಲಿ ಕಸ ಸಂಗ್ರಹವಾದ ಕೂಡಲೇ ತಮ್ಮ ಬಳಿ ಇರುವ ಮೊಬೈಲ್‌ನಲ್ಲಿ ಆ ಕ್ಯೂಆರ್‌ ಕೋಡ್‌ನ್ನು ಸ್ಕ್ಯಾನ್‌ ಮಾಡುತ್ತಾರೆ. ಇದು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾರ್ಯ ನಿರ್ವ ಹಿಸುತ್ತಿರುವ “ಇಂಟ ಗ್ರೇಟೆಡ್‌ ಕಮಾಂಡ್‌ ಕಂಟ್ರೋಲ್‌ ಸೆಂಟರ್‌’ಗೆ ಸಂದೇಶ ರವಾನಿಸುತ್ತದೆ. ಸೆಂಟರ್‌ ನಲ್ಲಿರುವ ಅಧಿಕಾರಿ/ಸಿಬಂದಿ ಇದನ್ನು ಗಮನಿಸುತ್ತಾರೆ. ಒಂದು ವೇಳೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡದೇ ಇದ್ದರೆ ಆ ಮನೆಯಿಂದ ಕಸ ಸಂಗ್ರಹಿಸಿಲ್ಲ ಎಂದು ತಿಳಿಯಲಾಗುತ್ತದೆ.

ಕಸ ಪ್ರತ್ಯೇಕಿಸಿ
ನೀಡದಿದ್ದರೂ ದಂಡ!
ಈಗ ಪ್ರತಿದಿನ ಹಸಿ ಕಸ, ವಾರಕ್ಕೊಮ್ಮೆ ಒಣ ಕಸ (ಡ್ರೈ ವೇಸ್ಟ್‌) ಸಂಗ್ರಹಿಸ ಲಾಗುತ್ತಿದೆ. ಮನೆಗಳಲ್ಲಿ (ಇಂಡಿ ವಿಜುವಲ್‌ ಹೌಸ್‌) ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ವರ್ಗೀಕರಿಸಿ (ಪ್ರತ್ಯೇಕಿಸಿ) ಕಸ ಸಂಗ್ರಹಿಸುವವರಿಗೆ ನೀಡುವುದನ್ನು ಈ ಹಿಂದೆಯೇ ಕಡ್ಡಾಯ ಮಾಡಲಾಗಿತ್ತು. ಇನ್ನು ಮುಂದೆ ಕಸ ವಿಂಗಡಣೆ ಮಾಡಿ ನೀಡದ ಮನೆಯವರಿಗೂ ದಂಡ ವಿಧಿಸಲಾಗುವುದು. ಹೆಚ್ಚು ತ್ಯಾಜ್ಯ ಉತ್ಪಾದಿಸುವ (ಬಲ್ಕ್ ವೇಸ್ಟ್‌ ಜನ ರೇ ಟರ್) ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣ, ಹೊಟೇಲ್‌ ಮೊದಲಾದವು ಗಳು ತಮ್ಮಲ್ಲಿಯೇ ತ್ಯಾಜ್ಯ ಸಂಸ್ಕ ರಣ ವ್ಯವಸ್ಥೆ ಮಾಡಿಕೊಳ್ಳುವುದನ್ನು ಈಗಾಗಲೇ ಕಡ್ಡಾಯ ಮಾಡಲಾಗಿದೆ. ಅಳವಡಿಸ ದಿದ್ದರೆ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಮನೆಗಳು(ಇಂಡಿವಿಜುವಲ್‌ ಹೌಸ್‌) ಕೂಡ ತ್ಯಾಜ್ಯ ಸಂಸ್ಕರಣ ವ್ಯವಸ್ಥೆ (ಘಟಕ) ಅಳವಡಿಸಿಕೊಂಡರೆ ಆಸ್ತಿ ತೆರಿಗೆ ಪಾವತಿಸುವಾಗ ಘನ ತ್ಯಾಜ್ಯ ವಿಲೇ ವಾರಿ ಕರದಲ್ಲಿ ಶೇ.50 ಸಬ್ಸಿಡಿ ನೀಡಲಾಗುವುದು. ಇದೇ ರೀತಿ ತ್ಯಾಜ್ಯ ಸಂಸ್ಕ ರಣ ವ್ಯವಸ್ಥೆ ಅಳವಡಿಸಿಕೊಳ್ಳುವ “ಹೆಚ್ಚು ಕಸ ಉತ್ಪಾದಿಸುವ ಸಂಸ್ಥೆಗಳಿಗೂ (ಬಲ್ಕ್ ವೇಸ್ಟ್‌ ಜನರೇಟರ್) ತೆರಿಗೆ ಸಬ್ಸಿಡಿ ದೊರೆಯುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಜ್ಯ ವಿಂಗಡಣೆ ಸವಾಲು
ಒಟ್ಟು 60 ವಾರ್ಡ್‌ಗಳ ಪೈಕಿ ಸುಮಾರು 15 ವಾರ್ಡ್‌ಗಳ ಮನೆಯವರು(ಇಂಡಿವಿಜುವಲ್‌ ಹೌಸ್‌) ಮಾತ್ರ ಕಸ ವಿಂಗಡಿಸಿ ನೀಡುತ್ತಿದ್ದಾರೆ. ಉಳಿದಲ್ಲಿ ನೀಡದಿರುವುದು ಇದು ಕೂಡ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಲು ತೊಡಕಾಗಿದೆ. ಹಾಗಾಗಿ ಇಂತಹ ಮನೆಗಳಲ್ಲಿ ಕಸ ವಿಂಗಡಣೆಯನ್ನು ಕಡ್ಡಾಯ ಗೊಳಿಸಲಾಗಿದ್ದು ಶೀಘ್ರದಲ್ಲೇ ದಂಡ ಕೂಡ ವಿಧಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ.
– ಮಧು ಮನೋಹರ್‌, ಪರಿಸರ ಎಂಜಿನಿಯರ್‌, ಮನಪಾ

ವರ್ಷಕ್ಕೆ 35 ಕೋಟಿ ರೂ. ಭಾರ !
ಕಸ ಸಂಗ್ರಹ, ನಿರ್ವಹಣೆ ಮಹಾನಗರ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣ ಮಿಸುತ್ತಿದೆ. ದಿನವೊಂದಕ್ಕೆ 350ರಿಂದ 370 ಟನ್‌ ಕಸ ಉತ್ಪಾದನೆಯಾಗುತ್ತಿದೆ. ವರ್ಷಕ್ಕೆ 35 ಕೋ.ರೂ.ಗಳನ್ನು ಕಸ ಸಂಗ್ರಹಕ್ಕಾಗಿ ವಿನಿಯೋಗಿಸಲಾಗುತ್ತಿದೆ. 120 ವಾಹನಗಳು ಕಸ ಸಂಗ್ರಹದಲ್ಲಿ ನಿರತವಾಗಿವೆ. 591 ಮಂದಿ ಹೊರಗುತ್ತಿಗೆ ಕಾರ್ಮಿಕರು, 220 ಮಂದಿ ಪೌರ ಕಾರ್ಮಿಕರು, 120 ಮಂದಿ ವಾಹನ ಚಾಲಕರು, 20 ಮಂದಿ ಸೂಪರ್‌ವೈಸರ್‌ಗಳು ಕಸ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಎಲ್ಲ ವಾರ್ಡ್‌ಗೆ ವಿಸ್ತರಣೆ
ಮೊದಲ ಹಂತದಲ್ಲಿ ಮಣ್ಣಗುಡ್ಡೆ ವಾರ್ಡ್‌ ನಲ್ಲಿ ಕ್ಯೂಆರ್‌ ಕೋಡ್‌ ನಿಗಾ ವ್ಯವಸ್ಥೆ ಅಳವಡಿಸಲಾಗಿದೆ. ಮುಂದೆ ಈ ವ್ಯವಸ್ಥೆಯನ್ನು ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸುವ ಯೋಜನೆ ಇದೆ. ಇದರಿಂದ ಕಸ ಸಂಗ್ರಹ ಮಾಹಿತಿ ಸಮರ್ಪಕವಾಗಿ ದೊರೆತು ಅಗತ್ಯ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.
 - ಮಹಮ್ಮದ್‌ ನಜೀರ್‌, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ ಸಿಟಿ ಯೋಜನೆ

-  ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next