ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹೇಮಾ ವತಿ ಯೋಜನೆಗೆ ಸೇರುವ ಕೊನೆಯ ಕೆರೆಯಾದ ಹುಳಿ ಯಾರು ಕೆರೆಗೆ ಹೇಮಾವತಿ ನೀರು ಹರಿಸಲು ತಿಮ್ಲಾಪುರ ಕೆರೆ ಕೋಡಿಗೆ ಮರಳ ಚೀಲ ಇಡಲಾಗಿದೆ. ಹೌದು, ಸಾಸಲು, ಶೆಟ್ಟಿಕೆರೆ ಹಾಗೂ ತಿಮ್ಲಾಪುರ ಕೆರೆಯ ಮೂಲಕ ಗುರುತ್ವಾಕರ್ಷಣೆಯಿಂದ ಹರಿಯುವ ಹೇಮಾವತಿ ಯೋಜನೆ ಕೊನೆಯ ಕೆರೆ ಹುಳಿಯಾರು ಕೆರೆ ಈ ಹುಳಿಯಾರು ಕೆರೆಗೆ ತಿಮ್ಲಾಪುರ ಕೆರೆಯಿಂದ ಕಾಲುವೆಯ ಮೂಲಕ ನೀರು ಹರಿಸಲಾಗುತ್ತದೆ. ಆದರೆ, ಈ ಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದರಿಂದ ನೀರು ಸರಾಗವಾಗಿ ಹರಿಯದೆ ತೊಡಕಾಗಿದೆ.
ಪರಿಣಾಮ ಹುಳಿಯಾರು ಕೆರೆಗೆ ನೀರಿನ ಹರಿವು ಕಡಿಮೆಯಾಗಿ ತಿಮ್ಲಾಪುರ ಕೆರೆಯ ಕೋಡಿ ಬಿದ್ದಿದೆ. ತಿಮ್ಲಾಪುರ ಕೆರೆಯಿಂದ ಕಾಲುವೆಯ ಮೂಲಕ ಹರಿಯುವ ನೀರಿನಿಂದ ಹುಳಿಯಾರು ಕೆರೆ ಪೂರ್ತಿ ಭರ್ತಿ ಮಾಡಲು ಸಾಧ್ಯವಾಗದಿದ್ದರೂ, ಕನಿಷ್ಠ ನಾಲೈದು ಅಡಿ ನೀರು ನಿಲ್ಲಿಸಬಹುದಾಗಿದೆ. ಇದರಿಂದ ಹುಳಿಯಾರು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಅಂತರ್ಜಲ ವೃದ್ಧಿಯಾ ಗುತ್ತದೆ. ಆದರೆ, ಈಗ ಹರಿಯುತ್ತಿರುವ ನೀರಿನ ಪ್ರಮಾಣ ದಿಂದ ಅರ್ಧ ಅಡಿ ನೀರು ನಿಲ್ಲುವಷ್ಟರಲ್ಲಿ ಹೇಮೆ ನೀರು ಸ್ಥಗಿತವಾಗುತ್ತದೆ.
ಇದನ್ನೂ ಓದಿ:- ಬಿಟ್ ಕಾಯಿನ್ ಪ್ರಕರಣದಲ್ಲಿ ಸಿದ್ದು ಹಿಟ್ ಆಂಡ್ ರನ್: ಎನ್. ರವಿಕುಮಾರ್
ಕೋಡಿಯ ಮೇಲೆ ಮರಳು ಚೀಲ: ಇದರಿಂದ ಆತಂಕಕ್ಕೊಳಗಾದ ಇಲ್ಲಿನ ಜನರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹುಳಿಯಾರು ಕೆರೆಗೆ ಸರಾಗವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಪರಿಣಾಮ ತಿಮ್ಲಾಪುರ ಕೆರೆಯ ಕೋಡಿಗೆ ಮರಳಿನ ಚೀಲವಿಟ್ಟು ನೀರಿನ ಹರಿವು ತಡೆದು ಹುಳಿಯಾರು ಕೆರೆಗೆ ಹರಿಸುವ ಪ್ರಯತ್ನಕ್ಕೆ ಸಚಿವರು ಮುಂದಾಗಿದ್ದಾರೆ. ಸಚಿವರ ಸೂಚನೆಯಂತೆ ಈಗ ಸಣ್ಣ ನೀರಾವರಿ ಇಲಾಖೆ ಜೆಸಿಬಿ ಮತ್ತು ಕಾರ್ಮಿಕರ ಸಹಾಯ ದಿಂದ ಕೋಡಿಯ ಮೇಲೆ ಮರಳು ಚೀಲವಿಡುತ್ತಿದ್ದಾರೆ.
ತಿಮ್ಲಾಪುರ ಕೆರೆಯ ಕೋಡಿ ಮೇಲೆ ಮರಳಚೀಲ ಇಡುವುದರಿಂದ ಕೋಡಿ ಮೇಲೆ ನೀರಿನ ಹರಿವು ಕಡಿಮೆ ಯಾಗಿದ್ದು, ಸಹಜವಾಗಿ ಹುಳಿಯಾರು ಕೆರೆಯ ಕಡೆ ನೀರು ನುಗ್ಗುತ್ತಿದೆ. ಇದು ಹುಳಿಯಾರು ನಿವಾಸಿಗಳ ಸಂತೋಷಕ್ಕೆ ಕಾರಣವಾದರೆ, ತಿಮ್ಲಾಪುರ ಕೆರೆಯ ಸುತ್ತಮುತ್ತಲಿನವರಿಗೆ ತಿಮ್ಲಾಪುರ ಕೆರೆ ಕೋಡಿ ಅಥವಾ ಏರಿ ಡ್ಯಾಮೇಜ್ ಆಗುವ ಆತಂಕ ಸೃಷ್ಟಿಸಿದೆ. ಆದರೆ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಮಾತ್ರ ತಿಮ್ಲಾ ಪುರ ಕೆರೆಗೆ ತೊಂದರೆಯಾಗುವುದಿಲ್ಲ ಆತಂಕಪಡಬೇಕಿಲ್ಲ ಎಂಬ ಅಭಯ ನೀಡಿದ್ದಾರೆ.
“ತಿಮ್ಲಾಪುರ ಕೆರೆಯಿಂದ ಕಾಲುವೆ ಮೂಲಕ ಹುಳಿಯಾರು ಕೆರೆಗೆ ನೈಸರ್ಗಿಕವಾಗಿ ನೀರು ಹರಿದರೂ ನಿಧಾನವಾಗಿ ಹೋಗುತ್ತದೆ. ಹಾಗಾಗಿ, ವೇಗ ನೀಡಲು ಮರಳಚೀಲ ಇಡಲಾಗುತ್ತಿದೆ. ಇದರಿಂದ ಏರಿಗೆ ಅಥವಾ ಕೋಡಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಮೂರು ಅಡಿ ಮರಳು ಚೀಲ ಇಟ್ಟರೂ ಕೆರೆಗೆ ಸಮಸ್ಯೆಯಾಗುವುದಿಲ್ಲ. ಆದರೆ, ನಾವು ಒಂದು ಕೋಡಿಯ ಕಡೆ 8 ಇಂಚು ಹಾಗೂ ಮತ್ತೂಂದು ಕೋಡಿಯ ಕಡೆ 4 ಇಂಚು ಮಾತ್ರ ಮರಳ ಚೀಲ ಇಡುತ್ತೇವೆ.”
– ಪ್ರಭಾಕರ್, ಇಇ, ಸಣ್ಣನೀರಾವರಿ ಇಲಾಖೆ.