Advertisement

ರಸ್ತೆ ಪಕ್ಕದಲ್ಲಿ ತ್ಯಾಜ್ಯದ ರಾಶಿ: ಸಾಂಕ್ರಾಮಿಕ ರೋಗ ಬಾಧಿಸುವ ಭೀತಿ!

06:05 PM Mar 01, 2022 | Suhan S |

ತೀರ್ಥಹಳ್ಳಿ: ತಾಲೂಕಿನಾದ್ಯಂತ ಕೊರೊನಾ ನಡುವೆ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳಿಂದ ಅನೇಕ ರೋಗಗಳು ಹರಡುತ್ತಿದ್ದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗೇಬೈಲು ಸಮೀಪ ರಸ್ತೆ ಅಕ್ಕ ಪಕ್ಕದಲ್ಲಿ ಮತ್ತು ಚರಂಡಿಯ ಅಕ್ಕ ಪಕ್ಕದಲ್ಲಿ ಎಲ್ಲೆಂದರಲ್ಲಿ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಕಂಡು ಬರುತ್ತಿರುವ ತ್ಯಾಜ್ಯದ ರಾಶಿ ರಾಶಿ ಕಂಡು ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

Advertisement

ಕೊಳೆತು ದುರ್ನಾತ ಬೀರುತ್ತಿರುವ ಈ ತ್ಯಾಜ್ಯವು ಹಿಂದಿನ ವರ್ಷ ಮಳೆಯ ನೀರಿನೊಂದಿಗೆ ಬೆರೆತು ರಸ್ತೆಯಲ್ಲಿ ಎಲ್ಲೆಂದರಲ್ಲಿ ಹರಿಯುತ್ತಿದ್ದು ಇದೆ ತ್ಯಾಜ್ಯದ ಕಲುಷಿತ ನೀರು ಹೆಗ್ಗೆಬೈಲು ಗದ್ದೆ ತೋಟ ಬಾವಿಗೆ ಸೇರಿದಂತೆ ತುಂಗಾ ನದಿಗೂ ಕೂಡ ಸೇರಿತ್ತು. ಇದರಿಂದ ಗ್ರಾಮದ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಎದುರಿಸುವಂತಾಗಿದೆ.

ಹಲವಾರು ಬಾರಿ ಗ್ರಾಮಸ್ಥರಿಂದಲೇ ಈ ತ್ಯಾಜ್ಯ ಹಾಕುತ್ತಿರುವುದರ ಬಗ್ಗೆ  ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಈ ಹಿಂದೆ ದೂರು ನೀಡಿದ ಒಂದೆರೆಡು ದಿನ ನೆಪ ಮಾತ್ರಕ್ಕೆ ತ್ಯಾಜ್ಯವನ್ನು ತೆಗೆದರಾದರೂ ಮತ್ತೆ ಅದೇ ಜಾಗದಲ್ಲಿ ಪುನಃ ಪುನಃ ತ್ಯಾಜ್ಯದ ರಾಶಿ ಕಂಡು ಬರುತ್ತಿದ್ದು ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತೆಯ ಬಗ್ಗೆ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಸ್ಥಳೀಯರು ಈ ತ್ಯಾಜ್ಯದಿಂದ ರಾಶಿಯಿಂದ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.  ಕುರುವಳ್ಳಿ- ಹರಳಿಮಠ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ  ಹೆಗ್ಗೆಬೈಲು ಸಮೀಪ ಬೀಟೆ ಮರದ ಹತ್ತಿರ  ಮೂಟೆಗಟ್ಟಲೆ ರಾಶಿ ರಾಶಿ ತ್ಯಾಜ್ಯವು ರಸ್ತೆಯ ಮೇಲೆಲ್ಲಾ ಹರಿದಾಡುತ್ತಿದೆ.

ಅದರ ಪಕ್ಕದಲ್ಲಿಯೇ ಕೂಗಳತೆಯ ದೂರದಲ್ಲಿ ಪಟ್ಟಣ ಪಂಚಾಯಿತಿಯ  ತ್ಯಾಜ್ಯ ವಿಲೇವಾರಿ ಘಟಕವಿದ್ದು ಈ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಸ ಹಾಕದೆ ರಾತ್ರಿಯ ಸಮಯದಲ್ಲಿ ಬೀಟೆ ಮರದ ಹತ್ತಿರ ಯಾರೋ ಕಸವನ್ನು ತಂದು  ಬಿಸಾಡುವುದು ಕಂಡು ಬರುತ್ತಿದೆ.  ಇದನ್ನು ನೋಡಿದ ಕೆಲವರು ತ್ಯಾಜ್ಯದ ಮೂಟೆಗಳನ್ನು ತಂದು ಪಕ್ಕದಲ್ಲಿಯೇ ಇರುವ ತುಂಬಡಿ ಹಳ್ಳಕ್ಕೆ ಎಸೆಯುತ್ತಿದ್ದಾರೆ ಎಂಬ ದೂರು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

Advertisement

ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್, ಮಕ್ಕಳ ಪ್ಯಾಡ್‌ ಮತ್ತಿತರ ಪದಾರ್ಥಗಳನ್ನು ಹಸುಗಳು ತಿಂದು ಸಾವನ್ನಪ್ಪಿದ ಘಟನೆಯೂ ಕೂಡ ಈ ಹಿಂದೆ ನಡೆದಿದೆ. ರಸ್ತೆಯ ಬದಿ ಅಲ್ಲಲ್ಲಿ ಕುರುವಳ್ಳಿಯಿಂದ ಘನ ತ್ಯಾಜ್ಯ ಘಟಕದವರೆಗೆ ಅನೇಕ ಕಡೆಗಳಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು ಈ ತ್ಯಾಜ್ಯ ದುರ್ನಾತ ಬೀರುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಬೀಟೆ ಮರದ ಬಳಿ ನಿರಂತರವಾಗಿ  ಕಸ ಎಸೆಯಲಾಗಿದ್ದು ಆ ಜಾಗ ಜನನಿಬಿಡವಾಗಿದ್ದು ಒಂದು ರೀತಿಯಲ್ಲಿ ಕಸ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ.

ಕುರುವಳ್ಳಿ ಗ್ರಾಮ ಪಂಚಾಯತಿಗೆ ಸಂಬಂಧ ಪಟ್ಟವರೇ ಅನೇಕರು ವಾಹನಗಳಲ್ಲಿ ಕಸ ಎಸೆದು ಬರುವುದು ಕಂಡು ಬರುತ್ತಿದ್ದು ಈ ಜಾಗಕ್ಕೆ ಗ್ರಾಮ ಪಂಚಾಯತಿ ವತಿಯಿಂದ ರಸ್ತೆಯ ಬದಿಯಲ್ಲಿ ಕಸ ಎಸೆಯದಂತೆ ನಾಮ ಫಲಕ ಅಳವಡಿಸಲಿ ಎಂಬ ಮಾತು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ರಸ್ತೆ ಅಕ್ಕ ಪಕ್ಕದಲ್ಲಿ ಕಸ ಎಸೆಯುವವರ ವಿರುದ್ಧ ದಂಡ ಹಾಕುವಂತಹ ಕಠಿಣ ಕ್ರಮ ಕೈಗೊಂಡರೆ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು ಎಂದು ಸ್ಥಳೀಯರಿಂದ ಮಾತು ಕೇಳಿ  ಬರುತ್ತಿದೆ.

ಮೂರು ನಾಲ್ಕು ವರ್ಷಗಳ ಹಿಂದೆ ನಿರ್ಮಲ ಗ್ರಾಮ ಪ್ರಶಸ್ತಿಗೆ ಪಾತ್ರವಾದ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆನ್ನಂಗಿ ಹಳ್ಳ, ತಿರಳೆಬೈಲು ಕೆರೆ ಸಮೀಪ, ಬುಕ್ಲಾಪುರ ಹಳ್ಳ ಸೇರಿದಂತೆ ಇಂದು ಎಲ್ಲೆಂದರಲ್ಲಿ ತ್ಯಾಜ್ಯ ಕಾಣುವಂತಾಗಿದೆ. ಸಾರ್ವಜನಿಕರು, ನಾಗರೀಕರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮುನ್ನವೇ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ  ಹಾಗೂ ತಾಲೂಕು ಆಡಳಿತ ಎಚ್ಚೆತ್ತು ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭಯ ಮುಕ್ತ ಜೀವನ ನಡೆಸಲು ಅನುವು ಮಾಡಕೊಡಲಿ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

-ಶ್ರೀಕಾಂತ್ ನಾಯಕ್,ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next