ಮುಂಬೈ: ಇವತ್ತು ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲೊಬ್ಬ. ಅವರು ಕ್ರಿಕೆಟ್ ಮೈದಾನಕ್ಕಿಳಿಯದೇ ಹೆಚ್ಚುಕಡಿಮೆ ಒಂದುವರ್ಷ ಕಳೆದಿದೆ. ಆದರೂ ಜಗತ್ತಿನ ಜನಪ್ರಿಯ ಕ್ರಿಕೆಟಿಗ. ಅಂತಹ ವ್ಯಕ್ತಿ ಮೊದಲು ಅಂತಾ ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದಾಗ ಮಹತ್ವಾಕಾಂಕ್ಷೆಗಳೇ ಇರಲಿಲ್ಲವಂತೆ! ಹೆಚ್ಚು ಅಂದರೆ ಒಂದು 30 ಲಕ್ಷ ರೂ. ಗಳಿಸಿದರೆ ಸಾಕು, ರಾಂಚಿಯಲ್ಲಿ ನೆಮ್ಮದಿಯಿಂದ ಬದುಕಿಬಿಡಬಹುದು ಎಂದು ಅಂದುಕೊಂಡಿದ್ದರಂತೆ. ಇದನ್ನು ಬಹಿರಂಗಪಡಿಸಿದ್ದು ದೇಶೀಯ ಕ್ರಿಕೆಟ್‌ನ ಖ್ಯಾತ ಬ್ಯಾಟ್ಸ್‌ಮನ್ ವಾಸಿಂ ಜಾಫರ್.
2004ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಮೇಲೆ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತು. ಅವರು ಸಕ್ರಿಯರಾಗಿ ಆಡುವವರೆಗೆ ಅವರೇ ಜಾಹೀರಾತು ಜಗತ್ತಿನ ದೊರೆಯಾಗಿದ್ದರು. ಜಗತ್ತಿನ ಶ್ರೀಮಂತ ಕ್ರಿಕೆಟಿಗರಾಗಿದ್ದರು. ಶ್ರೀಮಂತ ಕ್ರೀಡಾಪಟುಗಳ ಸಾಲಿನಲ್ಲೂ ಸ್ಥಾನ ಪಡೆದಿದ್ದರು.
ವಾಸಿಂ ಜಾಫರ್ ಇತ್ತೀಚೆಗಷ್ಟೇ ಎಲ್ಲ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಟ್ವೀಟರ್‌ನಲ್ಲಿ ಅಭಿಮಾನಿಗಳೊಂದಿಗೆ ಅವರು ಸಂವಾದ ನಡೆಸಿದ ವೇಳೆ, ಹಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಈ ರೀತಿಯ ಅಚ್ಚರಿಯ ಮಾಹಿತಿಯನ್ನು ನೀಡಿದರು.
ಧೋನಿಗಿಂತ ರೋಹಿತ್ ಬುದ್ಧಿವಂತ
ಟ್ವೀಟರ್ ಸಂಭಾಷಣೆಯಲ್ಲಿ ಜಾಫರ್ ನೀಡಿದ ಇನ್ನೊಂದು ಮಹತ್ವದ ಉತ್ತರವೆಂದರೆ, ಜಗತ್ತಿನ ಅತಿ ಬುದ್ಧಿವಂತ ಕ್ರಿಕೆಟಿಗ ಯಾರು ಎನ್ನುವುದು. ಸಾಮಾನ್ಯವಾಗಿ ಜನ ಈ ಪ್ರಶ್ನೆ ಬಂದರೆ, ಎಂ.ಎಸ್.ಧೋನಿ ಹೇಳಿ ಬಿಡುತ್ತಾರೆ. ಜಾಫರ್ ಪ್ರಕಾರ, ರೋಹಿತ್ ಶರ್ಮ ಅತ್ಯಂತ ಬುದ್ಧಿವಂತರಂತೆ. ರೋಹಿತ್ ನಾಯಕರಾಗಿದ್ದಾಗ ಅದನ್ನು ತೋರಿಸಿ ಕೊಂಡಿದ್ದಾರೆ ಕೂಡ ಎನ್ನುವುದನ್ನು ನಾವಿಲ್ಲಿ ಗಮನಿಸಬಹುದು.