ಮುಂಬೈ: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ, ದಿಗ್ಗಜ ಎಡಗೈ ವೇಗಿ ವಾಸೀಂ ಅಕ್ರಮ್ ಕ್ರಿಕೆಟ್ ನ ಅಗ್ರ ಐದು ಬ್ಯಾಟ್ಸಮ್ ಗಳನ್ನು ಹೆಸರಿಸಿದ್ದಾರೆ. ಅಕ್ರಮ್ ಟೆಸ್ಟ್ ಕ್ರಿಕಟ್ ನ ಐವರು ಶ್ರೇಷ್ಠ ದಾಂಡಿಗರನ್ನು ಹೆಸರಿಸಿದ್ದು, ಆದರೆ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಕೊನೆಯವರನ್ನಾಗಿ ಹೆಸರಿಸಿದ್ದಾರೆ.
ಮಾಜಿ ಸಹ ಆಟಗಾರ ಬಾಸಿತ್ ಅಲಿ ಜೊತೆ ಯೂಟ್ಯೂಬ್ ಮಾತುಕತೆಯಲ್ಲಿ ವಾಸೀಂ ಅಕ್ರಮ್ ಈ ಪಟ್ಟಿ ಮಾಡಿದ್ದಾರೆ.
ಅಕ್ರಮ್ ರ ಪಟ್ಟಿಯಲ್ಲಿ ಮೊದಲ ಸ್ಥಾನ ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ ಅವರಿಗೆ ನೀಡಿದ್ದಾರೆ. ಅವರ ಟೆಕ್ನಿಕ್, ಶೈಲಿಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಜನರ ಮೇಲೆ ಅವರಷ್ಟು ಯಾರೂ ಪ್ರಭಾವ ಬೀರಿಲ್ಲ ಎಂದು ಅಕ್ರಮ್ ಹೇಳಿದ್ದಾರೆ.
ಮಾಜಿ ಕಿವೀಸ್ ಆಟಗಾರ ಮಾರ್ಟಿನ್ ಕ್ರೋವ್ ಗೆ ಅಕ್ರಮ್ ಎರಡನೇ ಸ್ಥಾನ ನೀಡಿದ್ದಾರೆ. ರಿವರ್ಸ್ ಸ್ವಿಂಗ್ ಎಸೆತಗಳನ್ನು ಎದುರಿಸುವ ಬಗ್ಗೆ ಕ್ರಿಕೆಟ್ ಜಗತ್ತಿಗೆ ಯಾವುದೇ ಐಡಿಯಾ ಇರದ ಸಮಯದಲ್ಲಿ ಕ್ರೋವ್ ನನ್ನ ಮತ್ತು ವಾಕರ್ ಯೂನಸ್ ರ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದರು ಎಂದು ಹೇಳಿದ್ದಾರೆ.
ಮೂರನೇ ಸ್ಥಾನದಲ್ಲಿ ಬ್ರಿಯಾನ್ ಲಾರ ಇದ್ದರೆ ನಾಲ್ಕನೇ ಸ್ಥಾನದಲ್ಲಿ ಇಂಝಮಾಮ್ ಉಲ್ ಹಕ್ ಅವರಿಗೆ ನೀಡಿದ್ದಾರೆ. ಆದರೆ ಐದನೇ ಸ್ಥಾನವನ್ನು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗೆ ನೀಡಿದ್ದಾರೆ.
ಸಚಿನ್ ಗೆ ಐದನೇ ಸ್ಥಾನ ನೀಡಿರುವ ಅಕ್ರಮ್, ನಾನು ಟೆಸ್ಟ್ ಮಾದರಿಯಲ್ಲಿ ಸಚಿನ್ ಗೆ ಹೆಚ್ಚು ಬಾಲ್ ಹಾಕಿಲ್ಲ. 1989ರಲ್ಲಿ ಪಾಕಿಸ್ಥಾನದ ಟೆಸ್ಟ್ ಸರಣಿಗೆ ಬಂದ ಸಚಿನ್ ನಂತರ ಬಂದಿದ್ದು 1999ರಲ್ಲಿ ಹಾಗಾಗಿ ನಾನು ಹೆಚ್ಚು ಹೇಳಲಾರೆ ಎಂದಿದ್ದಾರೆ.