ಸಂಸಾರ ಬೋರ್ ಎನಿಸುವ ಮುಂಚೆಯೇ ಪತಿ- ಪತ್ನಿ ನಂಬಿಕೆಯನ್ನು ಪುನರ್ ಸ್ಥಾಪಿಸಬೇಕು. ಹೆಣ್ಣುಮಕ್ಕಳು ನಿರ್ಭಿಡೆಯಿಂದ ವರ್ತಿಸಿದರೆ, ಕೆಲ ಪುರುಷರು ಹೈಸ್ಕೂಲು ಹುಡುಗರಂತೆ ಬದಲಾಗುತ್ತಾರೆ! ಅವರಿಗೆ ಬೆಚ್ಚಗಿನ ಅನುಭವ. ತಾಯಿ ಈ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣುಮಕ್ಕಳು ಇನ್ನೊಬ್ಬರ ಸಂಸಾರದಲ್ಲಿ ತಮ್ಮ ಇತಿಮಿತಿಯನ್ನು ತಿಳಿಯಬೇಕು. ಅಸಹ್ಯ ಅನ್ನಿಸುವ ಸಂಬಂಧವಲ್ಲದಿದ್ದರೂ ಎಡವಟ್ಟಾದ ನಡವಳಿಕೆ ಬಾಂಧವ್ಯಗಳಲ್ಲಿ ಬೇಡ…
ಅಕ್ಕನ ಮಗಳು ನಿಕಿತಾಗೆ ತಾನಿರುವ ಊರಿನಲ್ಲಿ ಕೆಲಸ ಸಿಕ್ಕಿದಾಗ ಸೌಮ್ಯಾ ಬಹಳ ಹೆಮ್ಮೆಪಟ್ಟಿದ್ದಳು. ತನ್ನ ಮನೆಗೇ ನಿಕಿತಾಳನ್ನು ಆದರದಿಂದ ಬರಮಾಡಿಕೊಂಡು, ನಂತರ ಬಾಡಿಗೆ ಮನೆ ಮಾಡಿಕೊಟ್ಟು, ಬೇಕಾದ್ದನ್ನು ಕೊಡಿಸಿದ್ದಳು. ಹೊಸಾ ಬಟ್ಟೆ ಕೊಡಿಸಿದ್ದಳು. ನಿಕಿತಾ ಇದ್ದಷ್ಟು ದಿನ ಮನೆಯಲ್ಲಿ ಲವಲವಿಕೆ- ಖುಷಿ- ನಗು- ಸಂತಸ. ಎಲ್ಲರ ಮನ ಗೆದ್ದಿದ್ದ ನಿಕಿತಾ ಬೇರೆ ಹೋದಮೇಲೆ ಎಲ್ಲರಿಗೂ ಬೇಸರ. ರಜಾ ದಿನಗಳಲ್ಲಿ ಮಾತ್ರವೇ ಬಂದು ಹೋಗುತ್ತಿದ್ದಳು.
ಆಫೀಸಿನಲ್ಲೇ ಸ್ನೇಹಿತರು ಜಾಸ್ತಿಯಾದ ಮೇಲೆ ನಿಕಿತಾ ಮನೆಗೆ ಬರುವುದು ಕಡಿಮೆಯಾಗಿತ್ತು. ಹೇಗಾದರೂ ನಿಕಿತಾ ಜೊತೆಗಿರಲಿ ಎಂಬ ಕಾರಣಕ್ಕೆ ಸೌಮ್ಯಾಳ ಗಂಡ ಪ್ರವಾಸಗಳಿಗೆ/ ಚಾರಣಗಳಿಗೆ ಪ್ಲಾನ್ ಮಾಡುವುದು ಅಚಾನಕ್ ಜಾಸ್ತಿಯಾಯಿತು. ವಯಸ್ಸಿಗೆ ಬಂದ ನಿಕಿತಾ ಜೊತೆ ಸಲುಗೆಯಿಂದ ಗಂಡ ವರ್ತಿಸುವುದು ಸೌಮ್ಯಾಗೆ ಇಷ್ಟವಿಲ್ಲ. ನಿಕಿತಾ ಜೊತೆ ಸಿನಿಮಾಗಳನ್ನು ನೋಡುವ ಸಲುವಾಗಿ ಮಕ್ಕಳನ್ನೂ ಜೊತೆಗೆ ಕರಕೊಂಡು ಹೋಗಿ ಮಕ್ಕಳಿಗೆ ಸಿನಿಮಾ ಗೀಳು ಹಿಡಿದು, ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾದವು. ಮಕ್ಕಳ ಪ್ರಾಜೆಕ್ಟ್ಗೆ ಸಹಾಯವಿಲ್ಲ, ಆಟೋಟಗಳ ತರಬೇತಿಯಿಂದ ಹಿಂತೆಗೆತ ಮತ್ತು ಸಂಸಾರದ ಇನ್ನಿತರ ಕೆಲಸಗಳಿಗೆ ಗಂಡನ ಬೇಜವಾಬ್ದಾರಿ ಜಾಸ್ತಿಯಾಗಿ, ಸೌಮ್ಯಾಗೆ ಗಂಡನ ಮೇಲೆ ಸಿಟ್ಟು. ಜಗಳವಾಡಿದ್ದಾಳೆ. ಪ್ರಯೋಜನವಾಗಿಲ್ಲ.
ತನ್ನ ಗಂಡ ಮತ್ತು ನಿಕಿತಾ ನಡುವಿನ ಮೆಸೇಜುಗಳು ಸಭ್ಯತೆಯ ಎಲ್ಲೆಯನ್ನು ಮೀರುತ್ತಿವೆ ಎನಿಸಿದಾಗ ಸೌಮ್ಯಾ, ನಿಕಿತಾಗೆ ಸೂಕ್ಷ್ಮವಾಗಿ ಬುದ್ಧಿ ಹೇಳಿದಳು. ನಿಕಿತಾ ಬದಲಾಗಿದ್ದಳು. ಚಿಕ್ಕಮ್ಮನ ಮಾತುಗಳು ಸೌಖ್ಯವೆನಿಸಲಿಲ್ಲ. ಸೌಮ್ಯಾಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ತನ್ನ ಚಾರಿತ್ರ್ಯದ ಬಗ್ಗೆ ಚಿಕ್ಕಮ್ಮ ಅನುಮಾನಪಟ್ಟಳು ಎಂಬ ಅರ್ಥ ಬರುವ ಹಾಗೆ, ನಿಕಿತಾ ತನ್ನ ತಾಯಿಗೆ ಮತ್ತು ಸೌಮ್ಯಾ ಗಂಡನಿಗೆ ಚಾಡಿ ಹೇಳಿದ್ದಾಳೆ. ಮದುವೆಗೆ ಬಂದಿರುವ ಹುಡುಗಿಯ ಬಗ್ಗೆ ಚಿಕ್ಕಮ್ಮ ಅಸೂಯೆಯ ಮಾತುಗಳನ್ನಾಡಬಹುದೇ? ಎಂದು, ಸೌಮ್ಯಾಳ ಅಕ್ಕ, ಸೌಮ್ಯಾಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗಂಡ ತನ್ನ ತಪ್ಪನ್ನು ಮುಚ್ಚಿಹಾಕುವ ಸಲುವಾಗಿ, ಸೌಮ್ಯಾಳನ್ನು ಸಂಕುಚಿತ ಮನೋಭಾವದ ಗೌರಮ್ಮ ಎನ್ನುವಂತೆ ಬಿಂಬಿಸಿ ಇಡೀ ಕುಟುಂಬದಲ್ಲಿ ಸೌಮ್ಯಾಳಿಗೆ ಅವಮಾನ ಮಾಡಿದ್ದಾರೆ.
ಸಂಸಾರದಲ್ಲಿ ಊಟಕ್ಕೆ ಕೊರತೆಯಿಲ್ಲದಿದ್ದರೂ ನೆಮ್ಮದಿ ಹಾಳಾಗುವುದು ಹೀಗೆಯೇ. ಸಂಸಾರ ಬೋರ್ ಎನಿಸುವ ಮುಂಚೆಯೇ ಪತಿ- ಪತ್ನಿ ನಂಬಿಕೆಯನ್ನು ಪುನರ್ ಸ್ಥಾಪಿಸಬೇಕು. ಹೆಣ್ಣುಮಕ್ಕಳು ನಿರ್ಭಿಡೆಯಿಂದ ವರ್ತಿಸಿದರೆ, ಕೆಲ ಪುರುಷರು ಹೈಸ್ಕೂಲು ಹುಡುಗರಂತೆ ಬದಲಾಗುತ್ತಾರೆ! ಅವರಿಗೆ ಬೆಚ್ಚಗಿನ ಅನುಭವ. ತಾಯಿ ಈ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣುಮಕ್ಕಳು ಪರ- ಸಂಸಾರದಲ್ಲಿ ತಮ್ಮ ಇತಿಮಿತಿಯನ್ನು ತಿಳಿಯಬೇಕು. ಅಸಹ್ಯ ಅನ್ನಿಸುವ ಸಂಬಂಧವಲ್ಲದಿದ್ದರೂ ಎಡವಟ್ಟಾದ ನಡವಳಿಕೆ ಬಾಂಧವ್ಯಗಳಲ್ಲಿ ಬೇಡ. ಸಂಸಾರದ ಆದ್ಯತೆಯನ್ನು ಪುರುಷರು ಎಂದೂ ಪಕ್ಕಕ್ಕೆ ಸರಿಸಬಾರದು. ತಪ್ಪು ಯಾರದ್ದು ಅನ್ನುವುದಕ್ಕಿಂತ ಜವಾಬ್ದಾರಿ ಮುಂದಿಟ್ಟುಕೊಂಡು, ಬಾಂಧವ್ಯವನ್ನು ಸವಿಯಿರಿ. ಹಾಗೆ ಮಾಡಿದರಷ್ಟೇ, ಸಂಸಾರ ಒಡೆಯುವುದಿಲ್ಲ. ಮಾನಸಿಕ ವ್ಯಥೆ- ಖನ್ನತೆ- ಒತ್ತಡಗಳೂ ಇರುವುದಿಲ್ಲ.
ಡಾ. ಶುಭಾ ಮಧುಸೂದನ್
ಚಿಕಿತ್ಸಾ ಮನೋವಿಜ್ಞಾನಿ