Advertisement

ಕಠಿಣ ಕ್ರಮ ಅನಿವಾರ್ಯ

07:30 AM Mar 27, 2018 | Team Udayavani |

ಎದುರಾಳಿ ತಂಡವನ್ನು ಹೆಡೆಮುರಿಕಟ್ಟುವ ಆತುರದಲ್ಲಿ ಗೇಮ್‌ಪ್ಲಾನ್‌ ಬದಲಾಯಿಸಿ ವಿವಾದ ಮೈಮೇಲೆ ಎಳೆದುಕೊಳ್ಳುವ ಚಾಳಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಹೊಸದೇನೂ ಅಲ್ಲ. ಕ್ರಿಕೆಟ್‌ ಇತಿಹಾಸದಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳೂ ಸಿಗುತ್ತವೆ. ಎದುರಾಳಿ ಆಟಗಾರರನ್ನು ನಿಂದಿಸಿ, ಹೀಯಾಳಿಸಿ, ಸಿಟ್ಟು ನೆತ್ತಿಗೇರುವಂತೆ ಮಾಡಿ ಪಂದ್ಯದ ದಿಕ್ಕು ತಪ್ಪಿಸುವಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ. ಈಗ ಅದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಿಯಮ ಬಾಹಿರ ಕೃತ್ಯವೆಸಗಿದೆ ಆಸ್ಟ್ರೇಲಿಯಾ ತಂಡ. ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಚೆಂಡು ವಿರೂಪ (ball tampering)ಗೊಳಿಸಿದ ಪ್ರಕರಣ ಈಗ ಸಾಕಷ್ಟು ವಿವಾದಕ್ಕೀಡಾಗಿದೆ.  ಆದರೆ ಇದು “ಹತ್ತರ ಜತೆ ಇನ್ನೊಂದು’ ಎಂದು ನಿರ್ಲಕ್ಷಿಸುವ ಪ್ರಕರಣವಂತೂ ಅಲ್ಲವೇ ಅಲ್ಲ. ವಿಶ್ವ ಕ್ರಿಕೆಟ್‌ ವಲಯದಲ್ಲೇ ಆಸ್ಟ್ರೇಲಿಯಾ ಸೇರಿ ಉಳಿದ ಕ್ರಿಕೆಟ್‌ ರಾಷ್ಟ್ರಗಳ ಆಟಗಾರರು ಈ ಹಿಂದೆ ಮಾಡಿಕೊಂಡಿರುವ ವಿವಾದಗಳನ್ನೂ ಮತ್ತೂಮ್ಮೆ ನೆನಪಿಸಿದ ಕ್ರೀಡಾ ಕ್ಷೇತ್ರದ ಅಕ್ಷಮ್ಯ ಅಪರಾಧ ಇದು.

Advertisement

ಮೇಲ್ನೋಟಕ್ಕಂತೂ ಆಸ್ಟ್ರೇಲಿಯಾ ತನ್ನ ಗೇಮ್‌ಪ್ಲಾನ್‌ನಲ್ಲೇ ಚೆಂಡು ವಿರೂಪಗೊಳಿಸಿ ಆಡುವ ದುಸ್ಸಾಹಸಕ್ಕೆ ಮುಂದಾಗಿತ್ತೇ ಎನ್ನುವಷ್ಟರ ಮಟ್ಟಿಗೆ ಸಂಶಯ ಹುಟ್ಟಿಸಿದೆ ಈ ಪ್ರಕರಣ. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನ ಗಳಿಸಿ ಕೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ, ಐಸಿಸಿ ನಡೆಯೂ ಈಗ ಪ್ರಶ್ನಾರ್ಹ. ಇದೇ ಕಾರಣಕ್ಕಾಗಿಯೇ ಈಗ ಪ್ರಕರಣ ಇನ್ನಷ್ಟು ತೀವ್ರತೆ ಪಡೆದಿದೆ.ಕ್ರಿಕೆಟ್‌ ವಲಯದ ಅನೇಕ ಗಣ್ಯರು ಆಸ್ಟ್ರೇಲಿಯಾ ಕ್ರೀಡಾ ಮನೋಭಾವವನ್ನು ಬಹಿರಂಗವಾಗಿ ಪ್ರಶ್ನಿಸುವಂತೆ ಆಗಿದೆ. ಆಟಗಾರರ ವಿರುದ್ಧ ಕಿಡಿ ಹೊತ್ತಿಕೊಂಡಿದೆ. ಅಚ್ಚರಿ ವ್ಯಕ್ತವಾಗಿದೆ.  

ನಾಯಕ ಸ್ಟೀವ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ಸಮ್ಮುಖದಲ್ಲೇ, 25ರ ವಯಸ್ಸಿನ ಆಟಗಾರ ಕ್ಯಾಮರಾನ್‌ ಬ್ಯಾನ್‌ಕ್ರಾಫ್ಟ್ ಇಂಥದ್ದೊಂದು ಅಪರಾಧಕ್ಕೆ ಹುಂಬ ಧೈರ್ಯ ತೋರಿರುವುದು ಸ್ವತಃ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್‌ ಟರ್ನ್ಬುಲ್‌ ಅವರನ್ನೂ ಬೆಚ್ಚಿಬೀಳಿಸಿದೆ. ನಾಯಕತ್ವ ಪ್ರಶ್ನಿಸುವಂತೆ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶವನ್ನು ಪ್ರತಿನಿಧಿಸುವ ತಂಡದ ಆಟಗಾರನೊಬ್ಬನಿಂದ ಇಂಥ ಕಾನೂನು ಬಾಹಿರ ಕೃತ್ಯ ನಡೆದಾಗ ಅದು ದೇಶದ ಘನತೆಗೆ ಧಕ್ಕೆ ಉಂಟುಮಾಡುವುದು ಸ್ಪಷ್ಟ. ಇಲ್ಲಿ ಆಸೀಸ್‌ ಪ್ರಧಾನಿ ಅವರ ತೀಕ್ಷ್ಣ ಪ್ರತಿಕ್ರಿಯೆಯ ಹಿಂದಿನ ಉದ್ದೇಶವೂ ಅದೆ. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯಾಗಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯಾಗಲಿ ಈ ಪ್ರಕರಣವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಯಾಕೆ? ಪ್ರಶ್ನೆ ಉದ್ಭವಿಸುವುದು ಸಹಜ. ಜತೆಗೆ ಸದಸ್ಯ ರಾಷ್ಟ್ರಗಳೂ ಐಸಿಸಿ ಕ್ರಮವನ್ನು ತಕ್ಷಣಕ್ಕೆ ಪ್ರಶ್ನಿಸಿಲ್ಲ ಅಥವಾ ತೀವ್ರ ಆಕ್ಷೇಪ ವ್ಯಕ್ತಪಡಿಸಿಯೂ ಇಲ್ಲ. ಬಹುಶಃ ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗದೇ, ಎದುರಾಳಿ ದಕ್ಷಿಣ ಆಫ್ರಿಕಾವೂ ಪ್ರಶ್ನಿಸದೇ, ಸಿಟಿಂಗ್‌ (ಕ್ಯಾಮೆರಾ) ಅಂಪೈರ್‌ ಕೂಡ ಗಮನಿಸದೇ ಇದ್ದಿದ್ದರೆ ಬೆಳಕಿಗೇ ಬರುತ್ತಿರಲಿಲ್ಲವೇನೋ.

2008ರಂದು ಸಿಡ್ನಿ ಅಂಗಣದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ ಸೈಮಂಡ್ಸ್‌ ಮತ್ತು ಹರ್ಭಜನ್‌ ಸಿಂಗ್‌ ನಡುವಿನ “ಮಂಕಿಗೇಟ್‌’ ಪ್ರಕರಣದಲ್ಲಿ ತೋರಿದ್ದ ಆಸಕ್ತಿಯನ್ನು ಐಸಿಸಿ ಇಲ್ಲಿಯೂ ತೋರಬೇಕಾಗುತ್ತದೆ. ಯಾವುದೇ ತಾರತಮ್ಯ ಇಲ್ಲದೇ, ನಿರ್ದಾಕ್ಷಿಣ್ಯ ಕ್ರಮಕ್ಕೂ ಮುಂದಾಗಬೇಕಾಗುತ್ತದೆ. ಕೇವಲ ಒಂದು ಪಂದ್ಯ ನಿಷೇಧ, ಒಂದಿಷ್ಟು ದಂಡ ವಿಧಿಸಿ ಸಮಾಧಾನ ಪಡಿಸುವುದಾದರೆ ವಿಶ್ವ ಕ್ರಿಕೆಟ್‌ಗೆ ಹೋಗುವ ಸಂದೇಶವೇ ಬೇರೆಯಾಗಿರುತ್ತದೆ. ಹಾಗೇ, ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಂಗಣಕ್ಕೆ ಪ್ರವೇಶಿಸುವ ಮೊದಲೇ ಗಟ್ಟಿಯಾದ ವಸ್ತುವೊಂದನ್ನು ಕೊಂಡೊಯ್ಯು ವುದರ ಹಿಂದಿನ ಉದ್ದೇಶ ಏನಿತ್ತು? ಚೆಂಡನ್ನು ವಿರೂಪಗೊಳಿಸುವ ನಿರ್ಧಾರದ ಹಿಂದೆ ಯಾರೆಲ್ಲ ಇದ್ದಾರೆ? ನಾಯಕನಿಗೆ ಗೊತ್ತಿಲ್ಲದೇ ನಡೆಯಿತೇ? ಅಥವಾ ಗೊತ್ತಿದ್ದೂ ಮೌನವಹಿಸಿದ್ದೇಕೆ? ಎನ್ನುವುದೂ ಗೊತ್ತಾಗಬೇಕಿದೆ. ಇದರ ಆಧಾರದ ಮೇಲೆ ಐಸಿಸಿ ತನ್ನ ನಿಯಮದಡಿ ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಪ್ರಾಮಾಣಿಕತೆ, ಪಾರದರ್ಶಕತೆ ತೋರಿ “ಜಂಟ್ಲಮನ್‌’ ಕ್ರೀಡೆ ಕ್ರಿಕೆಟ್‌ನ ಗೌರವ ಉಳಿಸಿಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next