Advertisement
ರಾಜ್ಯ ಸಚಿವ ಸಂಪುಟದ ವಿಸ್ತರಣೆ ಇಲ್ಲವೇ ಪುನಾರಚನೆ ಮಾತುಗಳು ಕೇಳಿ ಬರುತ್ತಿದ್ದಂತೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ದೊರೆಯುತ್ತದೆಯೇ ಇಲ್ಲವೇ ಎಂಬ ವಿಚಾರ ಮುನ್ನೆಲೆಗೆ ಬರುತ್ತದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 6 ಜನ ಶಾಸಕರು ಆಯ್ಕೆಯಾಗಿದ್ದರು. (ಜಿ. ಕರುಣಾಕರ ರೆಡ್ಡಿ ಇದೀಗ ಬಳ್ಳಾರಿ ಜಿಲ್ಲೆಯ ಶಾಸಕರಾಗಿದ್ದಾರೆ). ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಇದ್ದಂತಹ ಇಬ್ಬರು ಕಾಂಗ್ರೆಸ್ ಶಾಸಕರಲ್ಲಿ ಹಿರಿತನ, ರಾಜಕೀಯ ಅನುಭವದ ಆಧಾರದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು.
Related Articles
Advertisement
ಇದನ್ನೂ ಓದಿ:ಸಚಿವ ಶ್ರೀಪಾದ ನಾಯಕ್ ಆರೋಗ್ಯ ಸುಧಾರಿಸುತ್ತಿದೆ: ಗೋವಾ ಸಿಎಂ ಪ್ರಮೋದ್ ಸಾವಂತ್
ಯಡಿಯೂರಪ್ಪ ಪರವಾಗಿ ಅಷ್ಟೊಂದು ಬ್ಯಾಟಿಂಗ್ ಮಾಡುವ ರೇಣುಕಾಚಾರ್ಯಗೆ ಈಗಲಾದರೂ ಸಚಿವ ಸ್ಥಾನ ದೊರೆಯುವುದರ ಮೂಲಕ ದಾವಣಗೆರೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ಆರು ಬಿಜೆಪಿ ಶಾಸಕರಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಎಸ್.ಎ. ರವೀಂದ್ರನಾಥ ಹೊರತುಪಡಿಸಿದರೆ ಎಲ್ಲರಿಗೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಾಗಾಗಿ ಸಚಿವ ಸ್ಥಾನಕ್ಕೆ ರವೀಂದ್ರನಾಥ, ರೇಣುಕಾಚಾರ್ಯ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ ಇದೆ.
ಹೈಕಮಾಂಡ್‌ನಿಂದ ಸಿಗುತ್ತಾ ಗ್ರೀನ್ ಸಿಗ್ನಲ್ ?
ಶಿರಾ ಉಪ ಚುನಾವಣೆ ನಂತರ ಯಡಿಯೂರಪ್ಪ ಪಾಳಯಕ್ಕೆ ಮತ್ತಷ್ಟು ಹತ್ತಿರವಾಗಿರುವ ರೇಣುಕಾಚಾರ್ಯ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಿಂದಿನಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರವೇ ಆಂತಿಮ ಎನ್ನುವ ರಾಜಕೀಯ ವಾತಾವರಣ ಇದ್ದಲ್ಲಿ ರೇಣುಕಾಚಾರ್ಯರ ಪ್ರಯತ್ನಕ್ಕೆ ಇಷ್ಟೊತ್ತಿಗಾಗಲೇ ಸಿಕ್ಕಿರುತ್ತಿತ್ತು. ಆದರೆ ಈಗ ಅಂತಹ ವಾತಾವರಣ ಇಲ್ಲ. ಪ್ರತಿಯೊಂದಕ್ಕೂ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಅಣತಿಯಂತೆ ಯಡಿಯೂರಪ್ಪ ಸಹ ನಡೆದುಕೊಳ್ಳಲೇಬೇಕಾದ ವಾತಾವರಣ ಇದೆ. ಹಾಗಾಗಿ ರೇಣುಕಾಚಾರ್ಯಗೆ ಸಚಿವ ಸ್ಥಾನಕ್ಕೆ ಹಸಿರು ನಿಶಾನೆ ದೊರೆಯುವುದೇ ಎಂಬ ಕುತೂಹಲದ ಪ್ರಶ್ನೆಗೆ ಬುಧವಾರ ಖಚಿತ ಉತ್ತರ ದೊರೆಯಲಿದೆ.
ರಾ. ರವಿಬಾಬು