ಅಹ್ಮದಾಬಾದ್ : ಗುಜರಾತ್‌ನಲ್ಲಿ ಆಳುವ ಬಿಜೆಪಿಯನ್ನು ಸೇರಲು ನನಗೆ 1 ಕೋಟಿ ರೂ. ಆಮಿಷ ಒಡ್ಡಲಾಗಿತ್ತು ಎಂದು ಪತಿದಾರ್ ಆಂದೋಲನದ ನಾಯಕ ನರೇಂದ್ರ ಪಟೇಲ್ ಆರೋಪಿಸಿದ್ದಾರೆ.
ಉತ್ತರ ಗುಜರಾತ್‌ನ ಪತಿದಾರ್ ನಾಯಕ ಹಾಗೂ ಮೆಹಸಾನಾದ ಪತಿದಾರ್ ಅನಾಮತ್ ಆಂದೋಲನ್ ಸಮಿತಿಯ (ಪಿಎಎಸ್) ಸಂಚಾಲಕರಾಗಿರುವ ಪಟೇಲ್ ಅವರು ನಿನ್ನೆ ಭಾನುವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಸೇರಲು ತನಗೆ ಅಮಿಷ ಒಡ್ಡಿ ಕೊಡಲಾಗಿದ್ದ 10 ಲಕ್ಷ ರೂ. ಕರೆನ್ಸಿ ನೋಟುಗಳನ್ನು ಪತ್ರಕರ್ತರ ಮುಂದೆ ಪ್ರದರ್ಶಿಸಿದರು.
ನರೇಂದ್ರ ಪಟೇಲ್ ಅವರು ಬಿಜೆಪಿ ಸೇರಲಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಭಾನುವಾರ ಅವರು ತಮ್ಮ ರಾಗ ಬದಲಾಯಿಸಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಕುದುರೆ ವ್ಯಾಪಾರದ ಆರೋಪ ಮಾಡಿದರು.
ನರೇಂದ್ರ ಪಟೇಲ್ ಅವರು ಕಳೆದ ತಿಂಗಳಲ್ಲಿ ಹಾರ್ದಿಕ್ ಪಟೇಲ್ ಮತ್ತು ಅವರ ಮೂವರು ಬೆಂಬಲಿಗರ ವಿರುದ್ಧ ಉತ್ತರ ಗುಜರಾತ್‌ನ ಪಟಾನ್‌ನಲ್ಲಿ ಎಫ್ಐಆರ್ ದಾಖಲಿಸಿದ್ದರು. ಆದರೆ ಅನಂತರ ಅದನ್ನು ಹಿಂಪಡೆದುಕೊಂಡಿದ್ದರು.
“ಕಳೆದ ಶನಿವಾರ ಬಿಜೆಪಿ ಸೇರಿಕೊಂಡಿದ್ದ ಪತಿದಾರ್ ನಾಯಕ ವರುಣ್ ಪಟೇಲ್ ನನ್ನನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಜಿತೂಭಾಯಿ ವಘಾನಿ ಮತ್ತು ಇತರ ನಾಯಕರನ್ನು ಭೇಟಿ ಮಾಡಿಸಿದ್ದರು. ಅವರು ಮೊದಲು ನನಗೆ 10 ಲಕ್ಷ ರೂ. ಕೊಟ್ಟು ಉಳಿದ 90 ಲಕ್ಷ ರೂ.ಗಳನ್ನು ನಾನು ಬಿಜೆಪಿಗೆ ಸೇರಿದ ಬಳಿಕ ಕೊಡುವುದಾಗಿ ಆಮಿಷ ಒಡ್ಡಿದರು’ ಎಂದು ನರೇಂದ್ರ ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಬಿಜೆಪಿ ನಾಯಕರು ನನಗೆ ಪಕ್ಷವನ್ನು ಸೇರಲು 1 ಕೋಟಿ ರೂ. ಕೊಡುವ ಆಮಿಷ ಒಡ್ಡಿದರು. ಆದರೆ ನಾನು ಇಡಿಯ ರಿಸರ್ವ್ ಬ್ಯಾಂಕನ್ನು ನನಗೆ ಕೊಟ್ಟರೂ ನನ್ನನ್ನು ನೀವು ಖರೀದಿಸಲಾರಿರಿ; ಪತಿದಾರ್ ಹೋರಾಟದಲ್ಲಿ ನಾನು ಮಡಿದರೂ ಕೂಡ ನಾನು ಬಿಜೆಪಿ ಸೇರುವುದಿಲ್ಲ ಎಂದು ಜಿತೂಭಾಯಿ ವಘಾನಿ ಮತ್ತು ಇತರ ನಾಯಕರಿಗೆ ನಾನು ನೇರವಾಗಿ ಹೇಳಿದೆ’ ಎಂದು ಪಟೇಲ್ ತಿಳಿಸಿದರು.