ಬೆಂಗಳೂರು: ಕರ್ನಾಟಕದಲ್ಲಿ 2+1 ಫಾರ್ಮುಲಾ ಸರ್ಕಾರ ವಿದೆ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ.
ಸಂತೇಮಾರಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ‘ಕರ್ನಾಟಕದಲ್ಲಿ 2+1 ಸರ್ಕಾರವಿದೆ. ಸಿದ್ದರಾಮಯ್ಯ ಅವರಿಗೆ 2 ಕ್ಷೇತ್ರ, ಅವರ ಮಗನಿಗೆ 1 ಕ್ಷೇತ್ರ, ಇನ್ನುಳಿದ ಸಚಿವರಿಗೆ 1+1 ಫಾರ್ಮುಲಾ’ ಎಂದು ಟೀಕಿಸಿದ್ದರು.
ಮೋದಿ ಭಾಷಣದ ಬೆನ್ನಲ್ಲೇ ಟ್ವೀಟ್‌ಗಳ ಮೂಲಕ ಸಿದ್ದರಾಮಯ್ಯ ಅವರು ಪ್ರಧಾನಿಗೆ ದಿಟ್ಟ ತಿರುಗೇಟು ನೀಡಿದ್ದಾರೆ.
‘ನೀವು ವಾರಣಾಸಿ ಮತ್ತು ವಡೋದರಾ 2 ಕ್ಷೇತ್ರಗಳಿಂದ ಸ್ಪರ್ಧಿಸಿದ್ದಿರಲ್ಲ ಅದು ಹೆದರಿಕೆಯಿಂದಲೋ? ಅಂದಹಾಗೆ ನೀವು 56 ಇಂಚು ಎದೆ ಇರುವ ವ್ಯಕ್ತಿ . ನೀವು ಬುದ್ದಿವಂತಿಕೆಯಿಂದ ವಿವರಣೆ ನೀಡ ಬಲ್ಲಿರಿ..2 ಕ್ಷೇತ್ರ ಬಿಟ್ಟು ಬಿಡಿ ಸರ್, ನಿಮ್ಮ ಪಕ್ಷ 60 ರಿಂದ 70 ಸಂಖ್ಯೆಯನ್ನೂ ದಾಟುವುದಿಲ್ಲ ಅದರ ಬಗ್ಗೆ ಚಿಂತೆ ಮಾಡಿ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ
‘ರೆಡ್ಡಿ ಸಹೋದರರ ವಿರುದ್ಧ ಇದ್ದ ಸಿಬಿಐ ಪ್ರಕರಣಗಳನ್ನು ಮುಚ್ಚಿ ಹಾಕುವಲ್ಲಿ ಅವರ ಪಾತ್ರದ ಬಗ್ಗೆ ಮಾತನಾಡುವುದನ್ನು ಪ್ರಧಾನಿ ತಪ್ಪಿಸಿದರು. ಬದಲಾಗಿ 2+1 ಫಾರ್ಮುಲಾದ ಬಗ್ಗೆ ಮಾತನಾಡಿದರು. 2+1 ಅಂದರೆ, 2 ರೆಡ್ಡಿಗಳು + 1 ಯೆಡ್ಡಿ’ ಎಂದು ಬರೆದಿದ್ದಾರೆ.