Advertisement

ಬೆಂಗಳೂರಿನಿಂದ ತಿಹಾರ್‌ ಜೈಲಿನ ವರೆಗಿನ ಕಗ್ಗತ್ತಲೆಯ ಕತೆ

11:20 PM Nov 02, 2022 | Team Udayavani |

ಮುಂದೊಂದು ದಿನ ದೇಶದ ಎಲ್ಲಾ ವಿಧದ ಮಾಧ್ಯಮಗಳಲ್ಲಿ ಹೈಲೈಟ್‌ ಆಗಿ ಪ್ರಕಟವಾಗುತ್ತೇನೋ ಇಲ್ಲವೋ ಎಂಬ ಬಗ್ಗೆ ಆತನಿಗೆ ಗೊತ್ತಿತ್ತೋ ಇಲ್ಲವೋ? 17 ವರ್ಷಕ್ಕೇ ಬೆಂಗಳೂರು ಪೊಲೀಸ್‌ ಆಯುಕ್ತರ ಪತ್ರವನ್ನೇ ನಕಲು ಮಾಡಿದ್ದ ಈತ. ಈತ ಬೆಂಗಳೂರಿನ ವಂಚಕ, ಸದ್ಯ ನವದೆಹಲಿಯ ತಿಹಾರ್‌ ಜೈಲಲ್ಲಿ ಇರುವ ಸುಕೇಶ್‌ ಚಂದ್ರಶೇಖರ್‌. ಹಲವಾರು ವಂಚನೆಗಳನ್ನು ಮಾಡಿ ಜೈಲು ಸೇರಿರುವ ಈತ ಈಗ ಮತ್ತೆ ಹೊಸದಾಗಿ ಸುದ್ದಿಯಲ್ಲಿದ್ದಾನೆ. ದೆಹಲಿಯ ಮಾಜಿ ಸಚಿವ ಸತ್ಯೇಂದರ್‌ ಜೈನ್‌ಗೆ 10 ಕೋಟಿ ರೂ. ಕೊಟ್ಟಿದ್ದೇನೆ ಎಂದು ಹೇಳಿ ಶಾಕ್‌ ನೀಡಿದ್ದಾನೆ.

Advertisement

ಹತ್ತನೇ ಕ್ಲಾಸ್‌ ಫೇಲು
ಬೆಂಗಳೂರಿನಲ್ಲಿ ಶಾಲೆಗೆ ಹೋದದ್ದು ಎಂದರೆ ಬೇರೆ ಹೇಳಬೇಕಾಗಿಯೇ ಇಲ್ಲ. ನಿಶ್ಚಿತವಾಗಿಯೂ ಇಂಗ್ಲಿಷ್‌ ಮೀಡಿಯಂನಲ್ಲಿಯೇ 10ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದ ಸುಕೇಶ್‌ ಚಂದ್ರಶೇಖರ್‌. ವಿದ್ಯೆ ತಲೆಗೆ ಹತ್ತಲಿಲ್ಲವೋ ಅಥವಾ ಇನ್ನೇನಾಯಿತೋ ಗೊತ್ತಿಲ್ಲ ಅಂತೂ ಅಲ್ಲಿಯ ವರೆಗೆ ಶಿಕ್ಷಣ ಪಡೆದ ಬಳಿಕ ಶಿಕ್ಷಣ ಸಂಸ್ಥೆ ಎಂಬ ಪೂಜನೀಯ ಸ್ಥಳಕ್ಕೆ ಆತ ಬೆನ್ನು ಹಾಕಿದ್ದ. ಫೇಲೂ ಆಗಿದ್ದ ಅನ್ನಿ.

ಶ್ರೀಮಂತ ಕುಟುಂಬದವನಲ್ಲ
ಸಿಬಿಐ, ಇ.ಡಿ. ಕಂದಾಯ ಗುಪ್ತಚರ ನಿರ್ದೇಶನಾಲಯ, ದೆಹಲಿ ಪೊಲೀಸ್‌ ವಿಭಾಗದ ಆರ್ಥಿಕ ಅಪರಾಧಗಳ ವಿಭಾಗ… ಹೀಗೆ ಪ್ರಮುಖ ತನಿಖಾ ಸಂಸ್ಥೆಗಳ ಕೇಸ್‌ ಡೈರಿಯಲ್ಲಿ ಅಗ್ರೇಸರನಾಗಿ ಉಲ್ಲೇಖಗೊಂಡಿರುವ ಸುಕೇಶ್‌ ಚಂದ್ರಶೇಖರ್‌ ಶ್ರೀಮಂತ ಕುಟುಂಬಕ್ಕೆ ಸೇರಿದವನಲ್ಲ ಎಂದರೆ ನಿಮಗೆ ಅಚ್ಚರಿಯಾದೀತು.

ಹೌದು ಸ್ವಾಮಿ! ಪೊಲೀಸ್‌ ಮೂಲಗಳ ಪ್ರಕಾರ ಆತ ಮಧ್ಯಮ ವರ್ಗಕ್ಕೆ ಸೇರಿದವ. ಆತನ ತಂದೆ ಗುತ್ತಿಗೆದಾರನಾಗಿದ್ದರು ಮತ್ತು ಬಿಡುವಿನ ವೇಳೆಯಲ್ಲಿ ಮೆಕ್ಯಾನಿಕ್‌ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಮಗ ಕಲಿತು ಉನ್ನತ ಹುದ್ದೆಗೆ ಹೋಗಲಿ ಎಂಬ ಸದಾಶಯದಿಂದ ಅವರು ಪ್ರತಿಷ್ಠಿತ ಶಾಲೆಗೆ ದಾಖಲಿಸಿದರು.
ಅಲ್ಲಿಗೆ ಬರುತ್ತಿದ್ದವರೆಲ್ಲ ಸರ್ಕಾರದ ಉನ್ನತ ಇಲಾಖೆಗಳ ಅಧಿಕಾರಿಗಳ, ಉದ್ಯಮಿಗಳ ಪುತ್ರರಾಗಿದ್ದರು. ಅವರು ಐಷಾರಾಮಿ ಕಾರುಗಳಲ್ಲಿ ಬರುತ್ತಿರುವುದನ್ನು ನೋಡಿ ನನಗೂ ಅಂಥ ಕಾರುಗಳು ಬೇಕು ಎಂಬ ಹಂಬಲ ಸುಕೇಶ್‌ನ ಮನಸ್ಸಿನಲ್ಲಿ ಮೂಡಿತು.

ಅಂದ ಹಾಗೆ ಈತನಿಗೆ ಕಾರು-ಬೈಕುಗಳ ಹುಚ್ಚು ಇತ್ತು. 17ನೇ ವರ್ಷಕ್ಕೇ ಬೆಂಗಳೂರು ಪೊಲೀಸ್‌ ಆಯುಕ್ತರ ಪತ್ರವನ್ನೇ ನಕಲು ಮಾಡಿ ಅಸಲಿಯಂತೇ ಕಾಣುವಂತೆ ಮಾಡಿ ಕರ್ನಾಟಕದಾದ್ಯಂತ ಅದ್ಧೂರಿ ವಾಹನಗಳಲ್ಲಿ ಓಡಾಡಿ ಖುಷಿಪಟ್ಟುಗೊಂಡಿದ್ದನಂತೆ. 2007ರಲ್ಲಿ ಕರ್ನಾಟಕದ ಪ್ರಮುಖ ನಾಯಕರೊಬ್ಬರ “ಫ್ಯಾಮಿಲಿ ಫ್ರೆಂಡು’ ಎಂದು ಹಳಿ ಇಲ್ಲದ ರೈಲು ಬಿಟ್ಟು ಹಿರಿಯ ನಾಗರಿಕರೊಬ್ಬರಿಗೆ ಸೇರಿದ್ದ ಬಹುಕೋಟಿ ರೂ. ಮೌಲ್ಯದ ನಿವೇಶನ ಸರ್ಕಾರಿ ಸಂಸ್ಥೆಯೊಂದರ ವಶದಿಂದ ಬಿಡಿಸಿಕೊಡುವುದಾಗಿ ಮೋಸ ಮಾಡಿದ್ದ. 2007ರಲ್ಲಿ ಇದೇ ಪ್ರಕರಣದಲ್ಲಿ ಆತನನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತು.

Advertisement

ಪ್ರಮುಖರ ಹೆಸರಲ್ಲೇ ಮೋಸ
ಕರ್ನಾಟಕದ ಮತ್ತೂಬ್ಬ ಪ್ರಮುಖ ನಾಯಕರ ಹೆಸರಲ್ಲಿ ಸುಕೇಶ್‌ ಚಂದ್ರಶೇಖರ್‌ ತಮಿಳುನಾಡಿನ ಉದ್ಯಮಿಗಳಿಗೆ ಮೋಸ ಮಾಡಿದ್ದ. ಗುತ್ತಿಗೆ ಕೊಡಿಸುವ ನೆಪದಲ್ಲಿ ಆತ ಕೋಟ್ಯಂತರ ರೂ. ಮೊತ್ತವನ್ನು ಅವರಿಂದ ಪೀಕಿದ್ದ. ಆ ಮೊತ್ತದಿಂದಲೇ ಅದ್ಧೂರಿ ಪಾರ್ಟಿ ಕೊಡುತ್ತಿದ್ದ. ಹೈಎಂಡ್‌ ಕಾರುಗಳು, ದುಬಾರಿ ವಾಚುಗಳನ್ನು ಖರೀದಿಸಿದ್ದ. ನಿವೃತ್ತ ಡಿಸಿಪಿ ಡಿ.ದೇವರಾಜ್‌ 2011ರ ಏಪ್ರಿಲ್‌ನಲ್ಲಿ ಆತನನ್ನು ಬಂಧಿಸಿದ್ದರು.

ವಿ.ಕೆ.ಶಶಿಕಲಾ, ಟಿ.ಟಿ.ವಿ.ದಿನಕರನ್‌ಗೆà ಮೋಸ
ಆ ಸಂದರ್ಭ ತಮಿಳುನಾಡಿನಲ್ಲಿ ಎಐಎಡಿಎಂಕೆಯಲ್ಲಿ ನಾಯಕತ್ವ ಯಾರದ್ದು ಎಂಬ ವಿಚಾರದ ಬಗ್ಗೆ ಭಿನ್ನಮತ ಉಂಟಾಗಿತ್ತು. ವಿ.ಕೆ.ಶಶಿಕಲಾ ಮತ್ತು ಅವರ ಸೋದರ ಸಂಬಂಧಿ ಟಿ.ಟಿ.ವಿ.ದಿನಕರನ್‌ ಎಐಎಡಿಎಂಕೆಯ ನಾಯಕತ್ವಕ್ಕಾಗಿ ಪನ್ನೀರ್‌ಸೆಲ್ವಂ ಮತ್ತು ಎಡಪ್ಪಾಡಿ ಕೆ.ಪಳನಿಸಾಮಿ ಜತೆಗೆ ಕಾನೂನು ಸಮರ ನಡೆಸುತ್ತಿದ್ದರು. ಇಂಥ ಸಂದರ್ಭದಲ್ಲಿ ವಂಚಕ ಭಾರತದ ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಎಂಬಂತೆ ನಟಿಸಿ, ಪಕ್ಷದ ಚುನಾವಣಾ ಚಿಹ್ನೆಯಾಗಿರುವ ಎರಡು ಎಲೆಗಳನ್ನು ಶಶಿಕಲಾ ಪರವಾಗಿ ನೀಡುವ ಬಗ್ಗೆ 50 ಕೋಟಿ ರೂ. ಲಂಚ ಕೇಳಿದ್ದ ಆರೋಪಕ್ಕೆ ಗುರಿಯಾಗಿದ್ದ. ಆ ಕೇಸಿನಲ್ಲಿ ಬಂಧನಕ್ಕೂ ಒಳಗಾಗಿದ್ದ. ಅದೇ ಸಂದರ್ಭದಲ್ಲಿ ಆರ್‌.ಕೆ.ನಗರ ಕ್ಷೇತ್ರಕ್ಕೆ ನಡೆಯಬೇಕಾಗಿದ್ದ ಚುನಾವಣೆ ಅಕ್ರಮದ ಹಿನ್ನೆಲೆಯಲ್ಲಿ ರದ್ದುಗೊಂಡಿತ್ತು. ಅದರ ತನಿಖೆ ನಡೆಯುವ ಸಂದರ್ಭದಲ್ಲಿ ಸುಕೇಶ್‌ ಚಂದ್ರಶೇಖರನ್‌ನ ರಹಸ್ಯ ಜಾಲ ಬೆಳಕಿಗೆ ಬಂದಿತ್ತು. ಈ ಹೊತ್ತಿಗಾಗಲೇ ಹಲವರಿಗೆ ಮೋಸ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಹೆತ್ತವರೂ ಬಂಧನ
ಸಾಮಾನ್ಯವಾಗಿ ಹೆತ್ತವರು ಮಕ್ಕಳ ಅಭ್ಯುದಯಕ್ಕಾಗಿ ಬಹಳಷ್ಟು ಆಸೆ ಪಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ಎಲ್ಲವೂ ಉಲ್ಟಾ. ಇಲ್ಲಿ ಆತನ ಹೆತ್ತವರಾದ ಚಂದ್ರಶೇಖರ್‌ ಮತ್ತು ಮಾಲಾ ಕೂಡ 2007 ಮತ್ತು 2011ರಲ್ಲಿ ಬಂಧನಕ್ಕೆ ಒಳಗಾಗಿದ್ದರು.

ಗೆಳತಿ ಸಿಕ್ಕಿದ್ದಳು…
ಪ್ರಭಾವಿಗಳ ಹೆಸರು ಹೇಳಿ ಮೋಸ ಮಾಡುವ ಸಂದರ್ಭದಲ್ಲಿ ಆತನಿಗೆ 2009ರಲ್ಲಿ ಲೀನಾ ಮರಿಯಾ ಪೌಲ್‌ ಎಂಬಾಕೆಯ ಪರಿಚಯವಾಯಿತು. ಮುಂದಿನ ದಿನಗಳಲ್ಲಿ ಆಕೆಯೇ ಆತನ ಪತ್ನಿಯಾದಳು. ಜತೆಗೆ ಹಲವು ವಂಚನೆಯ ಪ್ರಕರಣಗಳಲ್ಲಿ ಆಕೆ ಸಹಭಾಗಿಯಾಗಿ, ಸಹ ಆರೋಪಿಯಾಗಿಯೂ ಸದ್ಯ ತಿಹಾರ್‌ ಜೈಲಿನಲ್ಲಿ ಇದ್ದಾಳೆ.

ಬಾಲಿವುಡ್‌ ನಟಿ ಕತ್ರಿನಾ ಕೈಫ್ ಹೆಸರಲ್ಲಿ ಮೋಸ…
ಕೊಚ್ಚಿಯಲ್ಲಿರುವ ಜನಪ್ರಿಯ ಜವಳಿ ಕಂಪನಿಗೆ ತೆರಳಿ, ಅವರ ಕಂಪನಿಯ ಪ್ರಚಾರಕ್ಕೆ ಬಾಲಿವುಡ್‌ ನಟಿ ಕತ್ರೀನಾ ಕೈಫ್ ಅವರನ್ನು ಕರೆಸಲು ನೆರವಾಗುವ ಬಗ್ಗೆ ಮರಳು ಮಾತುಗಳಿಂದ 20 ಲಕ್ಷ ರೂ. ಮೊತ್ತವನ್ನು ಸುಕೇಶ್‌ ಮತ್ತು ಆತನ ಗೆಳತಿ ಲೀನಾ ಮರಿಯಾ ಪೀಕಿಸಿದ್ದರು. ಆ ಕಂಪನಿ ಅವರ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಅವರು ಕೇರಳದ ನಗರವನ್ನು ತೊರೆಯಬೇಕಾಯಿತು.

ಕೆನರಾ ಬ್ಯಾಂಕ್‌ ಶಾಖೆಗೆ ವಂಚನೆ
ಚೆನ್ನೈನಲ್ಲಿ ಇರುವ ಕೆನರಾ ಬ್ಯಾಂಕ್‌ನ ಶಾಖೆಗೆ 19 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ವಂಚಕನನ್ನು ಕೋಲ್ಕತಾದಲ್ಲಿ ಮತ್ತು ಆತನ ಪತ್ನಿ ಲೀನಾಳನ್ನು ನವದೆಹಲಿಯಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಬ್ಬರು ಕರ್ನಾಟಕ ಸರ್ಕಾರದ ಅಧಿಕಾರಿಗಳು ಎಂದು ವಂಚಿಸಿದ್ದರು. ಅವರು ಹೊಂದಿರುವ ಕಂಪನಿಯ ಮೂಲಕ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವ ಮಷಿನ್‌ ಅನ್ನು ವಿತರಿಸಲು ಮುಂದಾಗಿದ್ದಾರೆ ಎಂದು ಹೇಳಿಕೊಂಡಿದ್ದರು.

ದೊಡ್ಡ ಕಂಪನಿ ಮಾಲೀಕರಿಗೇ ನಾಮ!
ವಂಚನೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿ ಇರುವ ಫೋರ್ಟಿಸ್‌ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಅವರಿಗೆ ವ್ಯಕ್ತಿಯೊಬ್ಬ “ಕಾನೂನು ಕಾರ್ಯದರ್ಶಿ’ ಎಂಬ ಸೋಗು ಹಾಕಿ 200 ಕೋಟಿ ರೂ. ವಂಚಿಸಿದ್ದ ಎಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಪತಿಗೆ ನೆರವು ನೀಡುವ ನಿಟ್ಟಿನಲ್ಲಿ ಆತನ ಸಹಾಯವನ್ನು ಅದಿತಿ ಸಿಂಗ್‌ ಬಯಸಿದ್ದರು. ಆತ ಲ್ಯಾಂಡ್‌ಲೈನ್‌ ನಂಬರ್‌ನಿಂದ ಕರೆ ಮಾಡಿದ್ದಾಗ ಆತನ ಹೆಸರು ಟ್ರೂ ಕಾಲರ್‌ನಲ್ಲಿ ಪ್ರಧಾನಮಂತ್ರಿ ಕಚೇರಿಯ ಹಿರಿಯ ಅಧಿಕಾರಿ ಎಂದು ಕಂಡಿತ್ತು. ಕರೆಯ ಸಂದರ್ಭದಲ್ಲಿ ನಾರ್ತ್‌ ಬ್ಲಾಕ್‌ ಅಥವಾ ಪಕ್ಷದ ಕಚೇರಿಗೆ ಬಂದು ಕೇಂದ್ರದ ಕಾನೂನು ಖಾತೆ ಮಾಜಿ ಸಚಿವರನ್ನು ಭೇಟಿ ಮಾಡುವಂತೆ ಆತ ಸೂಚಿಸಿದ್ದ. ಈ ಪ್ರಕರಣ ಆತನಿಗೆ ಬಲವಾಗಿ ಕಾಡಿತ್ತು. ದೆಹಲಿ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ )ದಲ್ಲಿ ಸುಲಿಗೆಯ ಪ್ರಕರಣ ದಾಖಲಿಸಲಾಯಿತು. ನಂತರ ಆತನನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು.

ಸ್ಪೆಷಲ್‌ ಬ್ಯಾರೆಕ್‌ಗೆ ಕೊಟ್ಟಿದ್ದ 1.5 ಕೋಟಿ ರೂ.
ಎಲ್ಲರಿಗೂ ಪಂಗನಾಮ ಹಾಕಿದ್ದ ಸುಕೇಶ್‌ ಚಂದ್ರಶೇಖರ್‌ ನವದೆಹಲಿಯ ರೋಹಿಣಿಯ ಜೈಲಧಿಕಾರಿಗಳನ್ನೇ ಆತನ ಬುಟ್ಟಿಗೆ ಹಾಕಿಕೊಂಡಿದ್ದ. ಪ್ರತ್ಯೇಕ ಬ್ಯಾರೆಕ್‌ ಒಂದನ್ನು ಖರೀದಿಸಿಯೇ ಬಿಟ್ಟಿದ್ದ. ಅದಕ್ಕಾಗಿ ಆತ ಎಲ್ಲಾ ಹಂತದ ಅಧಿಕಾರಿಗಳಿಗೆ 1.5 ಕೋಟಿ ರೂ. ಕೊಟ್ಟಿದ್ದ. ಮೊಬೈಲ್‌ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿದ್ದ. ದೆಹಲಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದಾಗ ಲಭ್ಯವಾದ ದಾಖಲೆಗಳಿಂದ ಆತನ ಕಾರಾಗೃಹ ವೈಭೋಗದ ಹಗರಣ ಬಯಲಾಯಿತು. 82 ಮಂದಿ ಜೈಲಧಿಕಾರಿಗಳು, ವಂಚಕನ ಮೇಲೆ ಕೇಸು ಎಫ್ಐಆರ್‌ ದಾಖಲಿಸಲಾಯಿತು ಮತ್ತು ಎಂಟು ಮಂದಿ ಅಧಿಕಾರಿಗಳನ್ನು ಬಂಧಿಸಲಾಯಿತು.

ದಂಗು ಬಿದ್ದಿದ್ದರು ಅಧಿಕಾರಿಗಳು…
ವಂಚಕನ ಕಾರ್ಯಜಾಲದ ಬಗ್ಗೆ ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿದ್ದ ದೇವರಾಜ್‌ ಹೇಳುವುದು ಹೀಗೆ, “ಆತ ಖುದ್ದಾಗಿ ಜನರ ಹತ್ತಿರ ಮಾತನಾಡುತ್ತಿದ್ದದ್ದೇ ವಿರಳ’. ಇಂಟರ್‌ನೆಟ್‌ನಲ್ಲಿ ಸರ್ಕಾರದ ಗುತ್ತಿಗೆಗಳನ್ನು ನೋಡಿ ಫೋನ್‌ ಮೂಲಕವೇ ಮಾತುಕತೆ ನಡೆಸುತ್ತಿದ್ದ’ ಎಂದು ಮತ್ತೊಬ್ಬ ಹಿರಿಯ ಅಧಿಕಾರಿಯ ಮಾತು.
ಚೆನ್ನೈನಲ್ಲಿ ಆತ ಹೊಂದಿದ್ದ ಅರಮನೆಯನ್ನು ಹೋಲುವ ಅದ್ಧೂರಿ ಬಂಗಲೆ ನೋಡಿದ್ದ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ಹೇಳುವುದು ಹೀಗೆ, “ನಾನು ಹಲವು ದಾಳಿಯ ವೇಳೆ ಅದ್ಧೂರಿಯ ಮನೆಗಳನ್ನು ನೋಡಿದ್ದೆ. ಆದರೆ, ಮನೆಯ ಒಳಾಂಗಣ ವಿನ್ಯಾಸಕ್ಕೆ ಮಾಡಿದ ವೆಚ್ಚ, ಆ ನಿಟ್ಟಿನಲ್ಲಿ ವಹಿಸಿದ್ದ ಶ್ರಮ ಮತ್ತು ಇತರ ಅಂಶಗಳನ್ನು ಕಂಡು ಬೆರಗಾಗಿ ಹೋದೆ. ಅಲ್ಲಿ ಬಳಕೆ ಮಾಡಲಾಗಿದ್ದ ಲೈಟ್‌ಗಳು ಮತ್ತು ಇತರ ವಸ್ತುಗಳನ್ನು ಲೆಕ್ಕ ಹಾಕಲು ಆಗಲೇ ಇಲ್ಲ. ಕಲಾಕೃತಿಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಕೈಗೆಕಲಾರದ ಬೆಲೆಯವೇ ಆಗಿದ್ದವು. ತಾಮ್ರದಲ್ಲಿಯೇ ಕೆತ್ತಲಾಗಿದ್ದ ಕುದುರೆ ಇತ್ತು. ಮನೆಯಲ್ಲಿ ರೇಸ್‌ಗೆ ಬಳಕೆ ಮಾಡಲಾಗುವ ಕಾರ್‌ನ ಕೆತ್ತನೆ, ಸರ್‌ ಸ್ಟರ್ಲಿಂಗ್‌ ಮೋಸ್‌ ತಮ್ಮ ಖ್ಯಾತ 1955 ಮಿಲಿ ಮಿಗಾಲಿಯಾ ರೇಸ್‌ನಲ್ಲಿ ಕೆತ್ತಲಾಗಿರುವ 777 ನಂಬರ್‌ ಮಾದರಿಯಲ್ಲಿ ಆತ ಹೊಂದಿದ್ದ ಮರ್ಸೆಡೆಸ್‌ ಬೆಂಜ್‌ 300 ಎಸ್‌ಎಲ್‌ಆರ್‌ ಕಾರ್‌ನಲ್ಲಿ ಅದೇ ಸಂಖ್ಯೆಯನ್ನು ಹೊಂದಿದ್ದ

ಖ್ಯಾತ ನಾಮರ ಹೆಸರಲ್ಲಿ ವಂಚನೆ
ದಕ್ಷಿಣ ಭಾರತದ ರಾಜ್ಯಗಳ ಪ್ರಮುಖ ರಾಜಕಾರಣಿಗಳ ನಿಕಟವರ್ತಿ, ಸಂಬಂಧಿ… ಹೀಗೆ ಹತ್ತು ಹಲವು ಕತೆಗಳನ್ನು ಕಟ್ಟಿ ಮೋಸದಾಟ ಆಡಿದ್ದಾನೆ. 2007ರ ಬಳಿಕ ಬೆಂಗಳೂರು, ಚೆನ್ನೈ, ಕೊಯಮತ್ತೂರು, ನವದೆಹಲಿ, ಕೋಲ್ಕತಾ ಮತ್ತು ಮುಂಬೈನಲ್ಲಿ ಆತ ಹತ್ತು ಹಲವು ರೀತಿಯಲ್ಲಿ ವಂಚನೆ ಎಸಗಿದ್ದಾನೆ.

 

Advertisement

Udayavani is now on Telegram. Click here to join our channel and stay updated with the latest news.

Next