Advertisement

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾರ್‌ ರೂಮ್‌

12:03 PM Apr 17, 2021 | Team Udayavani |

ಬೆಂಗಳೂರು: ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಿಧಾ ನಸಭಾ ಕ್ಷೇತ್ರವಾರು ಕೋವಿಡ್‌ ವಾರ್‌ರೂಮ್‌ ಪ್ರಾರಂಭಿಸಲಾಗುವುದು ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

Advertisement

ನಗರದ ಪೂರ್ವ ವಲಯ ಮತ್ತು ಗೋವಿಂದರಾಜ ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕು ನಿಯಂತ್ರಣ, ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ವಿ. ಸೋಮಣ್ಣ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿ, ನಗರದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ತುರ್ತು ಸ್ಪಂದಿಸಲು ಹಾಗೂ ಸೋಂಕಿತರಿಗೆ ವೇಗವಾಗಿ ಪ್ರತಿಕ್ರಿಯಿಸುವ ಉದ್ದೇಶ ದಿಂದ ವಿಧಾನಸಭಾ ಕ್ಷೇತ್ರವಾರು ವಾರ್‌ರೂಮ್‌ ಸ್ಥಾಪಿಸಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಇರುವ ಚರಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ 150 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಡಾ.ಬಿ ಆರ್‌ ಅಂಬೇಡ್ಕರ್‌ ಮೆಡಿಕಲ್‌ ಕಾಲೇಜಿಗೆ ಸರ್ಕಾರದಿಂದ 10 ವೆಂಟಿಲೇಟರ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಜ್ವರ ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಜ್ವರ ತಪಾಸಣಾ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.

ಬಿಯು ಸಂಖ್ಯೆಗಾಗಿ ಕಾಯಬೇಕಿಲ್ಲ:

ಸೋಂಕಿತರು ಹಾಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವವರು ಬಿಯು ಸಂಖ್ಯೆಗಾಗಿ ಕಾಯುವ ಅವಶ್ಯಕತೆ ಇಲ್ಲ. ಅದೇ ರೀತಿ ಆಸ್ಪತ್ರೆಗಳೂ ತುರ್ತು ಚಿಕಿತ್ಸೆ ಅವಶ್ಯಕತೆ ಇರುವವರಿಗೆ ಬಿಯು ಸಂಖ್ಯೆ ಇಲ್ಲದಿದ್ದರೂ ಕೂಡಲೇ ಸ್ಪಂದಿಸಬೇಕು. ಈ ಕುರಿತು ಆಯುಕ್ತರು ನಿರ್ದೇಶನ ನೀಡಲಿದ್ದಾರೆ ಎಂದು ಹೇಳಿದರು.
ಸ್ಯಾನಿಟೈಸಿಂಗ್‌: ಈ ಹಿಂದೆ ನಗರದಲ್ಲಿ ಸ್ಯಾನಿಟೈಸರ್‌ ಮಾಡುತ್ತಿದ್ದ ಮಾದರಿಯಲ್ಲೇ ಮತ್ತೆ ಸ್ಯಾನಿಟೈಸರ್‌ ಪ್ರಾರಂಭಿಸಲಾಗುವುದು. ಈ ಸಂಬಂಧ ಜಲಮಂಡಳಿ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಮಾತನಾಡಿ ಶನಿವಾರದಿಂದಲೇ ನಗರದಲ್ಲಿ ಸ್ಯಾನಿಟೈಸರ್‌ ಪ್ರಾರಂಭಿಸಲಾಗುವುದು ಎಂದರು.

Advertisement

ಲಾಕ್‌ಡೌನ್‌ಗೆ ಸರ್ಕಾರ ಒಲವು ಇಲ್ಲ: ಲಾಕ್‌ ಡೌನ್‌ ಕುರಿತು ತಜ್ಞರ ಸಲಹೆ ಜತೆಗೆ ಸಾಮಾನ್ಯ ಜನರ ಜೀವನದ ಬಗ್ಗೆಯೂ ಚಿಂತಿಸಬೇಕಿದೆ. ಹೀಗಾಗಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ವಿರೋಧ ಪಕ್ಷಗಳು ಎಲ್ಲವನ್ನೂ ವಿರೋ ಧಿಸಬಾರದು. ಕಠಿಣ ಸಂದರ್ಭದಲ್ಲಿ ಸರ್ಕಾರಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದರು. ಕೋವಿಡ್‌ ಲಸಿಕೆಯಲ್ಲಿ ಸಣ್ಣಪುಟ್ಟ ಏರುಪೇರು ಆಗಿದೆ.

ನಗರಕ್ಕೆ ಅಗತ್ಯವಿರುವಷ್ಟು ಕೋವಿಡ್‌ ಲಸಿಕೆ ನೀಡುವಂತೆ ಮನವಿ ಮಾಡಲಾಗಿದೆ. ರಾಜ್ಯಕ್ಕೆ 10 ಲಕ್ಷ ಕೋವಿಡ್‌ ಲಸಿಕೆ ಬರಲಿದ್ದು, ಇದರಲ್ಲಿ ಮೂರು ಲಕ್ಷ ಕೋವಿಡ್‌ ಲಸಿಕೆ ನಗರಕ್ಕೆ ನೀಡುವಂತೆ ಮನವಿ ಮಾಡಲಾಗಿದೆ ಎಂದರು. ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಕೆ.ಜೆ. ಜಾರ್ಜ್‌. ಎನ್‌.ಎ ಹ್ಯಾರಿಸ್‌, ರಿಜ್ವಾನ್‌ ಹರ್ಷದ್‌, ಬಿ.ಎಸ್‌. ಸುರೇಶ್‌, ಅಖಂಡ ಶ್ರೀನಿವಾಸ್‌ಮೂರ್ತಿ, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ವಲಯ ಆಯುಕ್ತರಾದ ಮನೋಜ್‌ ಜೈನ್‌, ಬಸವರಾಜು ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next