Advertisement

ಯೋಧರು, ಜಡ್ಜ್ ಗಳು, ಜೈಲುಗಳು…. ಆ 10 ದಿನಗಳು

05:50 PM Aug 06, 2019 | Team Udayavani |

ಸರಿಯಾಗಿ 10 ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯವು ಒಂದು ಡೆಡ್‌ಲೈನ್‌ ವಿಧಿಸಿತ್ತು.

Advertisement

ಆ ಡೆಡ್‌ಲೈನ್‌ ಬೇರೇನೂ ಅಲ್ಲ- ಆಗಸ್ಟ್‌ 5, 2019. ಈ ಗಡುವಿನೊಳಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಸಮರೋಪಾದಿಯಲ್ಲಿ ಕೆಲವೊಂದು ಸಿದ್ಧತೆಗಳು ನಡೆಯಬೇಕು ಎಂದು ಸೂಚಿಸಲಾಗಿತ್ತು. ಭಾರೀ ಪ್ರಮಾಣದ ಭದ್ರತಾ ಪಡೆಗಳು ಈ ದಿನದೊಳಗೆ ಕಣಿವೆ ರಾಜ್ಯವನ್ನು ತಲುಪಿರಬೇಕು ಎಂದೂ ನಿರ್ದೇಶಿಸಲಾಗಿತ್ತು. ಗೃಹ ಇಲಾಖೆ ಅಂದುಕೊಂಡಂತೆಯೇ ಎಲ್ಲವೂ ನಡೆಯುತ್ತಾ ಬಂತು. ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ, ಯಾಕೆ ಈ ಮಟ್ಟದ ಭದ್ರತೆ ಏರ್ಪಡಿಸಲಾಗುತ್ತಿದೆ ಎಂದು ಜನರು ಊಹಿಸುವುದಕ್ಕೂ ಸಾಧ್ಯವಾಗದಂತೆ ಒಂದೊಂದೇ ಕ್ರಮಗಳನ್ನು ಕೈಗೊಳ್ಳಲಾಯಿತು. ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲದೇ, ಇಡೀ ದೇಶದಲ್ಲೇ ಗೊಂದಲ ಸೃಷ್ಟಿಯಾಗುವಂತೆ ಮಾಡಿ, ಕೊನೆಗೆ ಡೆಡ್‌ಲೈನ್‌ನ ದಿನ ಅಂದರೆ ಸೋಮವಾರ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ತನ್ನ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿತು.

27 ಜುಲೈ ಭದ್ರತೆಯ ನೆಪ ಹೇಳಿ ಏಕಾಏಕಿ 10,000 ಅರೆಸೇನಾ ಪಡೆ ಸಿಬಂದಿಯನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಲಾಯಿತು
01 ಆಗಸ್ಟ್‌ ಮತ್ತೆ ಹೆಚ್ಚುವರಿ 28,000 ಸೇನಾ ಸಿಬಂದಿಯನ್ನು ಕಣಿವೆ ರಾಜ್ಯಕ್ಕೆ ರವಾನಿಸಲಾಯಿತು.
02 ಆಗಸ್ಟ್‌ ಏಕಾಏಕಿ ಸುದ್ದಿಗೋಷ್ಠಿ ಕರೆದ ಸೇನೆ, “ಪಾಕ್‌ ಉಗ್ರರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ರೂಪಿಸಿದ್ದ ಸಂಚು ವಿಫ‌ಲಗೊಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
-ಅದರ ಬೆನ್ನಲ್ಲೇ ಅಮರನಾಥ ಯಾತ್ರೆಯನ್ನು ರದ್ದು ಮಾಡಿ ಆದೇಶ ಹೊರಡಿಸಲಾಯಿತು. ಎಲ್ಲ ಯಾತ್ರಿಕರೂ ಕೂಡಲೇ ರಾಜ್ಯ ತೊರೆಯುವಂತೆ ಸೂಚಿಸಲಾಯಿತು .
-ಕಣಿವೆ ರಾಜ್ಯಕ್ಕೆ ಬಂದ ಪ್ರವಾಸಿಗರಿಗೂ ಇದೇ ರೀತಿಯ ನಿರ್ದೇಶನ ನೀಡಲಾಯಿತು. ಆತಂಕಕ್ಕೊಳಗಾದ ಯಾತ್ರಿಕರು ಮತ್ತು ಪ್ರವಾಸಿಗರು ಪ್ರಯಾಸ ಪಟ್ಟು ತಮ್ಮ ತಮ್ಮ ಊರುಗಳಿಗೆ ಮರಳಿದರು
03 ಆಗಸ್ಟ್‌ ಮಾಚಿಲ್‌ ಯಾತ್ರೆಯನ್ನೂ ರದ್ದುಗೊಳಿಸಲಾಯಿತು. ಎನ್‌ಐಟಿ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ತರಗತಿಗಳನ್ನು ಸ್ಥಗಿತಗೊಳಿಸಿ, ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ತೊರೆಯುವಂತೆ ನಿರ್ದೇಶಿಸಲಾಯಿತು
-ಅಮರನಾಥ ಯಾತ್ರಿಕರು ಹಾಗೂ ಪ್ರವಾಸಿಗರು ರಾಜ್ಯ ತೊರೆದ ಬೆನ್ನಲ್ಲೇ ಎಲ್ಲ ಅತಿಥಿಗೃಹಗಳಿಗೂ ಬೀಗಮುದ್ರೆ ಹಾಕಲಾಗಿತ್ತು.
-ಈ ಎಲ್ಲ ಬೆಳವಣಿಗೆಗಳು ಸ್ಥಳೀಯ ನಾಗರಿಕರನ್ನು ಆತಂಕಕ್ಕೆ ದೂಡಿದವು. ಇದೆಲ್ಲ ಯಾತಕ್ಕೆ ನಡೆಯುತ್ತಿದೆ ಎಂದು ಗೊತ್ತಾಗದೇ ಗೊಂದಲಕ್ಕೊಳಗಾದರು. ಮಾಧ್ಯಮಗಳು ಹಲವು ಊಹೆಗಳನ್ನು ಪ್ರಕಟಿಸಿದವು.
04 ಆಗಸ್ಟ್‌ ಸ್ಥಳೀಯ ರಾಜಕೀಯ ಪಕ್ಷಗಳಿಗೆ ಸಣ್ಣ ಮಟ್ಟಿಗೆ ಅನುಮಾನವೂ ಮೂಡಿತು. ಹಾಗಾಗಿ ರವಿವಾರ ಸಂಜೆ ಸ್ಥಳೀಯ ಪಕ್ಷಗಳು ಮಾಜಿ ಸಿಎಂ ಮೆಹಬೂಬಾ ಮುಫ್ತಿ ನಿವಾಸದಲ್ಲಿ ಸರ್ವಪಕ್ಷಗಳ ಸಭೆಯನ್ನೂ ನಡೆಸಿ ಚರ್ಚಿಸಿದವು.
-ರವಿವಾರ ರಾತ್ರಿ ಏಕಾಏಕಿ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಎನ್‌ಸಿ ನಾಯಕ ಒಮರ್‌ ಅಬ್ದುಲ್ಲಾರನ್ನು ಗೃಹಬಂಧನದಲ್ಲಿ ಇರಿಸಲಾಯಿತು
-ಮಧ್ಯರಾತ್ರಿಯೇ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಸೇವೆ, ಮೊಬೈಲ್‌ ಸಂಪರ್ಕಗಳೆಲ್ಲ ಕಡಿತಗೊಂಡವು. ಸೋಮವಾರ ಮುಂಜಾನೆ 4ರ ವೇಳೆಗೆ ಲ್ಯಾಂಡ್‌ಲೈನ್‌ಗಳ ಸೇವೆಯೂ ಸ್ಥಗಿತವಾದವು.
-ಭದ್ರತಾ ಪಡೆಗಳ ಸಿಬಂದಿಗೆ ವ್ಯಾಪಕವಾಗಿ ಸ್ಯಾಟಲೈಟ್‌ ಫೋನ್‌ಗಳನ್ನು ವಿತರಿಸಲಾಯಿತು. ವೈರ್‌ಲೆಸ್‌ ಸಂವಹನ ವ್ಯವಸ್ಥೆಯ ಮೂಲಕ ಮಾತ್ರವೇ ಪರಸ್ಪರ ಸಂಪರ್ಕ ಸಾಧಿಸುವಂಥ ಸ್ಥಿತಿ ನಿರ್ಮಾಣ ಮಾಡಲಾಯಿತು.
-ಕಾನೂನು-ಸುವ್ಯವಸ್ಥೆಗೆ ದೊಡ್ಡ ಮಟ್ಟದ ಧಕ್ಕೆ ಬಂದರೆ, ಅದನ್ನು ನಿಭಾಯಿಸಲೆಂದೇ 60 ಹೆಚ್ಚುವರಿ ವಿಶೇಷ ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಲಾಯಿತು. ಇವರನ್ನು “ಮೊಬೈಲ್‌ ಮ್ಯಾಜಿಸ್ಟ್ರೇಟ್‌ಗಳು’ ಎಂದು ಕರೆಯುತ್ತಾರೆ. ಹಿಂಸಾಚಾರ ಆರಂಭವಾದಾಗ ತ್ವರಿತ ಬಂಧನಗಳಿಗೆ ಆದೇಶಿಸುವ ಮತ್ತು ಭದ್ರತಾ ಪಡೆಗಳಿಗೆ ಸಹಾಯ ಮಾಡುವ ಕೆಲಸಕ್ಕೆಂದೇ ಇವರನ್ನು ನಿಯೋಜಿಸಲಾಗುತ್ತದೆ.
-ದೊಡ್ಡ ಮಟ್ಟದ ಬಂಧನಗಳು ಆಗುವ ಸಾಧ್ಯತೆಯಿರುವ ಕಾರಣ, ಶ್ರೀನಗರದಲ್ಲಿ ಬಂಧಿತರಾಗುವವರನ್ನು ಇಡಲೆಂದೇ 6 ತಾತ್ಕಾಲಿಕ ಜೈಲುಗಳನ್ನು ಸಿದ್ಧಪಡಿಸಿಡಲಾಗಿತ್ತು.
-ರಾಜ್ಯದ ಎಲ್ಲ ಸರಕಾರಿ ವೈದ್ಯರಿಗೆ ಸನ್ನದ್ಧರಾಗಿರುವಂತೆ ಸೂಚಿಸಲಾಗಿತ್ತು. ರಜೆಯಲ್ಲಿ ಹೋದವರನ್ನೂ ವಾಪಸ್‌ ಕರೆಸಲಾಗಿತ್ತು.
-ಶ್ರೀನಗರದಾದ್ಯಂತ ರವಿವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ(ಸೆಕ್ಷನ್‌ 144) ಜಾರಿ ಮಾಡಲಾಗಿತ್ತು. ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ, ಶಾಲೆ-ಕಾಲೇಜುಗಳಿಗೆ ರಜೆ, ಸಾರ್ವಜನಿಕ ಸಭೆ, ರ್ಯಾಲಿಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಲಾಯಿತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಯಿತು.

ಯುದ್ಧದ ಸಂದರ್ಭದಲ್ಲೂ ಹೀಗಾಗಿರಲಿಲ್ಲ!
ರವಿವಾರ ಸಂಜೆಯ ವೇಳೆಗೆ ಬರೋಬ್ಬರಿ 43,000 ಸಿಆರ್‌ಪಿಎಫ್ ಯೋಧರು ಕಣಿವೆ ರಾಜ್ಯ ತಲುಪಿ, ಮುಂದಿನ ಆಗುಹೋಗುಗಳಿಗೆ ಸನ್ನದ್ಧರಾಗಿದ್ದರು. ಈ ಪೈಕಿ ಹೆಚ್ಚಿನ ಯೋಧರನ್ನು ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್‌ ಸಾರಿಗೆ ವಿಮಾನಗಳಲ್ಲಿ ಕರೆತರಲಾಗಿತ್ತು. ಒಂದು ವಾರದ ಅವಧಿಯಲ್ಲಿ ನೂರಕ್ಕೂ ಹೆಚ್ಚು ವಿಮಾನಗಳ ಹಾರಾಟವು ಒಂದು ರೀತಿಯಲ್ಲಿ ಯುದ್ಧ ಸನ್ನಿವೇಶವನ್ನು ನೆನಪಿಸುತ್ತಿತ್ತು ಎನ್ನುತ್ತಾರೆ ಐಎಎಫ್ ಅಧಿಕಾರಿಗಳು. 1971ರ ಬಳಿಕ ಅಂದರೆ ಭಾರತ-ಪಾಕಿಸ್ಥಾನ ಯುದ್ಧದ ನಂತರ ಇಂಥದ್ದೊಂದು ಸನ್ನಿವೇಶವನ್ನು ನಾವು ನೋಡಿಯೇ ಇರಲಿಲ್ಲ ಎಂದೂ ಅವರು ಹೇಳುತ್ತಾರೆ.

ಈಗ ಮಿಜೋರಾಂನಲ್ಲಿ ಭೀತಿ ಶುರು!
ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂಪಡೆದಿ ರುವುದರಿಂದ ಮಿಜೋರಾಂನಲ್ಲಿ ಭೀತಿ ಹುಟ್ಟಿಕೊಂಡಿದೆ. ಮಿಜೋರಾಂನಲ್ಲೂ ವಿಶೇಷ ಸ್ಥಾನಮಾನವಿದ್ದು, ನಂತರದ ಹಂತದಲ್ಲಿ ಮಿಜೋರಾಂನ ವಿಶೇಷ ಸ್ಥಾನಮಾನವನ್ನೂ ಹಿಂಪಡೆಯಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ. ಮಿಜೋರಾಂಗೆ 371 ಜಿ ವಿಧಿ ಅಡಿ ಯಲ್ಲಿ ವಿಶೇಷ ಸ್ಥಾನಮಾನವಿದೆ. ಮಿಜೋರಾಂ ಜನರ ಧಾರ್ಮಿಕ ಮತ್ತು ಸಾಮಾಜಿಕ ಅನುಸರಣೆಗಳ ಮೇಲೆ, ನಾಗರಿಕ ಮತ್ತು ಅಪರಾಧ ಕಾನೂನು, ಭೂಮಿ ಮಾಲೀಕತ್ವ ವರ್ಗಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವಂತಿಲ್ಲ ಎಂಬ ವಿಶೇಷ ಸ್ಥಾನಮಾನವನ್ನು ರಾಜ್ಯಕ್ಕೆ ಒದಗಿಸಲಾಗಿದೆ.

Advertisement

ಕಾಶ್ಮೀರದಲ್ಲಿ ಈ ಸ್ಥಾನಮಾನವನ್ನು ತೆಗೆದುಹಾಕಿರುವುದು ಮಿಜೋರಾಂನ ಚಿಂತಕರಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ವಿಶೇಷ ಸ್ಥಾನಮಾನ ಮಹತ್ವದ್ದಾಗಿದ್ದು, ಇದನ್ನು ರದ್ದುಗೊಳಿಸಲು ಬಿಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸದ್ಯದಲ್ಲೇ ದೋವಲ್‌ ಮತ್ತೆ ಕಾಶ್ಮೀರಕ್ಕೆ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಜಮ್ಮು ಕಾಶ್ಮೀರಕ್ಕೆ ಸದ್ಯದಲ್ಲೇ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಅವಲೋಕಿಸಲಿದ್ದಾರೆ ಎಂದು ಹೇಳಲಾಗಿದೆ. ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಕೇಂದ್ರದ ಕ್ರಮದ ಹಿನ್ನೆಲೆಯಲ್ಲಿ ಅಲ್ಲಿ ಸಂಭವಿಸಬಹುದಾದ ಹಿಂಸಾಚಾರಗಳನ್ನು ತಡೆಯಲು ಭಾರತೀಯ ಸೇನೆಯು ಕಣಿವೆ ರಾಜ್ಯದಲ್ಲಿ ಹದ್ದಿನ ಕಣ್ಣಿಟ್ಟಿದೆ. ಇದರ ನಡುವೆಯೇ, ದೋವಲ್‌ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಕಳೆದ ವಾರವೂ, ದೋವಲ್‌ ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಬಂದ ಬೆನ್ನಲ್ಲೇ ಅಲ್ಲಿ ಹೆಚ್ಚುವರಿ ಸೇನೆಯನ್ನು ಜಮಾವಣೆಗೊಳಿಸಲಾಗಿತ್ತು.

ಪಂಚ ರಾಷ್ಟ್ರಗಳಿಗೆ ಮಾಹಿತಿ
ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆದ ಕುರಿತು ಭಾರತದ ಐದು ಆಪ್ತ ದೇಶಗಳಿಗೆ ಮಾಹಿತಿ ನೀಡಲಾಗಿದೆ. ಅಮೆರಿಕ, ಇಂಗ್ಲೆಂಡ್‌, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ಗೆ ಈ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ. ಈ ದೇಶಗಳ ನಾಯಕ ರಲ್ಲಿ ತಪ್ಪು ತಿಳಿವಳಿಕೆಯನ್ನು ದೂರ ಮಾಡುವುದು ಮತ್ತು ಒಟ್ಟು ಪ್ರಕ್ರಿಯೆಯ ವಿವರಣೆ ನೀಡುವ ನಿಟ್ಟಿನಲ್ಲಿ ಈ ಮಾಹಿತಿ ನೀಡಲಾಗಿದೆ. ವಿದೇಶಾಂಗ ಸಚಿವಾಲಯಗಳು ರಾಯಭಾರ ಕಚೇರಿ ಮೂಲಕ ಈ ಮಾಹಿತಿಯನ್ನು ರವಾನಿಸಿ ದ್ದಾರೆ. ಈಗಾಗಲೇ ಕೆಲವು ದಿನಗಳ ಹಿಂದೆಯೇ ಇಂಗ್ಲೆಂಡ್‌, ಜರ್ಮನಿ ಸೇರಿದಂತೆ ಹಲವು ದೇಶಗಳು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡದಂತೆ ತಮ್ಮ ನಾಗರಿಕರಿಗೆ ಸೂಚನೆ ನೀಡಿದ್ದನ್ನು ಸ್ಮರಿಸಬಹುದು. ಅಲ್ಲದೆ, ಈ ಹಿಂದೆ ಪಾಕಿಸ್ತಾನದ ಬಾಲಕೋಟ್‌ನಲ್ಲಿ ವಾಯುಪಡೆ ದಾಳಿ ನಡೆಸಿದ ಸಂದರ್ಭದಲ್ಲೂ ಈ ರಾಷ್ಟ್ರಗಳಿಗೆ ನಮ್ಮ ಸರ್ಕಾರ ಮುಂಚಿತವಾಗಿಯೇ ಮಾಹಿತಿ ನೀಡಿತ್ತು.

ಎಡ ಪಕ್ಷಗಳಿಂದ ಪ್ರತಿಭಟನೆ
370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಎಡ ಪಕ್ಷಗಳು ಪ್ರತಿಭಟನೆ ನಡೆಸಿವೆ. ಎಡಪಕ್ಷಗಳ ಪ್ರಮುಖ ಮುಖಂಡರಾದ ಸೀತಾರಾಮ್‌ ಯೆಚೂರಿ, ಪ್ರಕಾಶ್‌ ಕಾರಟ್‌, ಡಿ.ರಾಜ, ದೀಪಂಕರ್‌ ಭಟ್ಟಾಚಾರ್ಯ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಂತರ್‌ ಮಂತರ್‌ನಿಂದ ಸಂಸತ್‌ ಭವನಕ್ಕೆ ತೆರಳುವ ಮಧ್ಯೆ ಸಂಸತ್‌ ಭವನದ ರಸ್ತೆಯಲ್ಲೇ ಪೊಲೀಸರು ಇವರನ್ನು ತಡೆದಿದ್ದಾರೆ. ಮೋದಿ ಪ್ರತಿಕೃತಿಯನ್ನೂ ಪ್ರತಿಭಟನಾಕಾರರು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next