ನವದೆಹಲಿ: ಗಡಿಯಲ್ಲಿ ಶತ್ರುಗಳ ಜತೆಯಲ್ಲಿ ಹೋರಾಡುವ ನಮ್ಮ ಯೋಧರೇ ಭಾರತೀಯ ಸೇನೆಯ ನಿಜವಾದ ವಿಐಪಿಗಳು ಎಂದು ಭೂಸೇನೆಯ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ. ಮಂಗಳವಾರ ಸೇನಾ ದಿನದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಸೇನೆಯಲ್ಲಿ ಶ್ರೇಣೀಕೃತ ವ್ಯವಸ್ಥೆಯಿದ್ದರೂ, ಗಡಿಯಲ್ಲಿ ಶತ್ರು ರಾಷ್ಟ್ರದ ದಾಳಿಗೆ ಮೊದಲು ಎದೆಯೊಡ್ಡುವ ನಮ್ಮ ಸೈನಿಕರೇ ನಮ್ಮ ವಿಐಪಿಗಳು. ನಮ್ಮ ಯೋಧರನ್ನು, ನಮ್ಮ ದೇಶವನ್ನು ಗುರಿಯಾಗಿಸಿ ಶತ್ರು ರಾಷ್ಟ್ರವು ಮಾಡುವ ಯಾವುದೇ ದಾಳಿಗೆ ಅಥವಾ ಕುತಂತ್ರಗಳಿಗೆ ಆ ದೇಶ ದೊಡ್ಡ ಬೆಲೆ ತೆರಲೇಬೇ ಕಾಗುತ್ತದೆ” ಎಂದು ಪಾಕಿಸ್ತಾನದ ಹೆಸರೆತ್ತದೇ ಆ ದೇಶಕ್ಕೆ ರಾವತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
”ಗಡಿ ನಿಯಂತ್ರಣ ರೇಖೆಯಲ್ಲಿ ಆ ದೇಶ ಮಾಡುವ ಪ್ರತಿ ಕುತಂತ್ರಕ್ಕೂ ಸೂಕ್ತ ಉತ್ತರ ನೀಡು ವಲ್ಲಿ ಭಾರತ ಎಂದೆಂದಿಗೂ ಹಿಂಜರಿಯುವುದಿಲ್ಲ. ಶತ್ರುಗಳಿಗಿಂತ ನಾವು ನೈತಿಕವಾಗಿ ಪ್ರಬಲ ರಾಗಿದ್ದೇವೆ” ಎಂದರು. ಅಲ್ಲದೆ, ”ಜಮ್ಮು ಕಾಶ್ಮೀರದ ಯುವಕರು ಬಲವಂತವಾಗಿ ಬಂದೂಕನ್ನು ಹಿಡಿಯುವುದು ನಮಗೆ ಇಷ್ಟವಿಲ್ಲ” ಎಂದರು. ಆನಂತರ, ಚೀನಾವನ್ನು ಪರೋಕ್ಷವಾಗಿ ಉದ್ದೇಶಿಸಿ ಮಾತನಾಡಿದ ರಾವತ್, ”ಪೂರ್ವ ಭಾಗದ ನೆರೆರಾಷ್ಟ್ರದ ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಲು ಪ್ರಯತ್ನಿಸ ಲಾಗುತ್ತಿದೆ. ಆದರೆ, ನಮ್ಮ ಕರ್ತವ್ಯದಲ್ಲಿ ಯಾವು ದೇ ರಾಜಿಯಿಲ್ಲ” ಎಂದರು.
ನಂತರ, ಈಶಾನ್ಯ ರಾಜ್ಯಗಳಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳಲ್ಲಿನ ಪರಿಸ್ಥಿತಿ ಹತೋಟಿಗೆ ಬಂದಿದೆ. ಅಕ್ರಮ ಒಳ ನುಸುಳುವಿಕೆ ಮಟ್ಟ ಹಾಕುವಲ್ಲಿ ಸೇನೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ಯೋಧರು, ಸೇನಾಧಿಕಾರಿಗಳ ಕುಟುಂಬದವರು ಮೂಲಭೂತವಾದಿಗಳು ಸಾಮಾಜಿಕ ಜಾಲತಾ ಣಗಳಲ್ಲಿ ಬಿತ್ತರಿಸುವ ಸಂದೇಶಗಳ ಬಗ್ಗೆ ಎಚ್ಚರದಿಂದಿರಬೇಕು ಎಂಬ ಕಿವಿಮಾತು ಹೇಳಿದರು.
•ಯೋಧರಲ್ಲಿ ಉತ್ಸಾಹ ತುಂಬುವ ಮಾತನ್ನಾಡಿದ ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
•ಗಡಿಯಲ್ಲಿ ಭಾರತವನ್ನು ಗುರಿಯಾಗಿಸಿ ನಡೆಸುವ ಎಲ್ಲಾ ದಾಳಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ: ಪಾಕ್‌ಗೆ ಎಚ್ಚರಿಕೆ