Advertisement

ತಲೆ ಎತ್ತದ ಯೋಧ ಫೂಲಚಂದ ಸ್ಮಾರಕ ಸೌಧ

12:37 PM Sep 17, 2019 | Team Udayavani |

ಕುಷ್ಟಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಹೈದ್ರಾಬಾದ್‌ ಕರ್ನಾಟಕ ವಿಮೋಚನೆಗಾಗಿ ರಜಾಕರ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇಲ್ಲಿನ ಸ್ವಾತಂತ್ರ್ಯ ಸೇನಾನಿ, ದೇಶಪ್ರೇಮಿ ಫೂಲಚಂದ ಚುನಿಲಾಲ್ ತಾಲೇಡ್‌ (ಜೈನ್‌) ಅವರ ದೇಶ ಸೇವೆಯ ನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಸ್ವಾತಂತ್ರ್ಯ ಸೌಧ 5 ವರ್ಷ ಕಳೆದರೂ ಇನ್ನೂ ತಲೆ ಎತ್ತಿಲ್ಲ!

Advertisement

ತಾಲೂಕಿನ ಸ್ವಾತಂತ್ರ್ಯ ಯೋಧರ ಸ್ಮರಣೆಗಾಗಿ ಪಟ್ಟಣದ ಹೊರವಲಯದ ಟೆಂಗುಂಟಿ ರಸ್ತೆಯ ಅಮರಚಂದ್‌ ಜೈನ್‌ ಅವರ ಲೇಔಟಿನಲ್ಲಿ 30×50 ಅಳತೆಯ ನಿವೇಶನ ಕಾಯ್ದರಿಸಲಾಗಿದೆ. ಸದರಿ ನಿವೇಶನವನ್ನು ಸ್ವಾತಂತ್ರ್ಯ ಸೇನಾನಿ ಫೂಲಚಂದ ಚುನಿಲಾಲ್ ತಾಲೇಡ್‌ ಪುತ್ರರಾದ ಮೋಹನಲಾಲ್ ಜೈನ್‌ ಹಾಗೂ ಅಮರಚಂದ್‌ ಜೈನ್‌ ಅವರು ತಮ್ಮ ತಂದೆಯ ಸ್ಮರಣಾರ್ಥ ಟ್ರಸ್ಟ್‌ ನಿಂದ ಉಚಿತವಾಗಿ 30×50 ಅಳತೆಯ ನಿವೇಶನ ನೀಡಿದ್ದಾರೆ. ರಾಷ್ಟ್ರೀಯ ಚತುಷ್ಪಥ ಹೆದ್ದಾರಿಗೆ ಕೂಗಳತೆ ದೂರದಲ್ಲಿದ್ದು, ಟೆಂಗುಂಟಿ ರಸ್ತೆಯ ಚಿಕ್ಕ ಹೆಸರೂರು-ಮುಂಡರಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ.

ವಾಗ್ಧಾನದಂತೆ ಸದರಿ ನಿವೇಶನದ ದಾನಪತ್ರವನ್ನು ತಹಶೀಲ್ದಾರ್‌ಗೆ ಹಸ್ತಾಂತರಿಸಿದ್ದಾರೆ. ಸದರಿ ನಿವೇಶನ 16-9-2014ರಂದು ರಾಜ್ಯಪಾಲರ ಹೆಸರಿಗೆ ನೋಂದಣಿಯಾಗಿದೆ. ಅಂದಿನ ತಹಶೀಲ್ದಾರರು ಕೃತಜ್ಞತೆಗಾದರೂ ಸ್ವೀಕೃತಿ ಪತ್ರ ನೀಡಿಲ್ಲ. ಆಗಿನ ಶಾಸಕ ದೊಡ್ಡನಗೌಡ ಪಾಟೀಲ ಅವರು ಈ ಸ್ವಾತಂತ್ರ್ಯ ಸೌಧಕ್ಕಾಗಿ 10 ಲಕ್ಷ ರೂ. ಅನುದಾನದ ಭರವಸೆ ನೀಡಿದ್ದರು. ಆದರೆ ಐದು ವರ್ಷಗಳಾದರೂ ಸ್ವಾತಂತ್ರ್ಯ ಸೌಧ ನಿರ್ಮಾಣವಾಗುವ ಯಾವುದೇ ಲಕ್ಷಣಗಳಿಲ್ಲ. ಸ್ವಾತಂತ್ರ್ಯ ಸೇನಾನಿ ಫೂಲಚಂದ ಚುನಿಲಾಲ್ ತಾಲೇಡ್‌ ಅವರ ಮಕ್ಕಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ. ಅವರ ಸ್ವಾತಂತ್ರ್ಯ ಸೇವೆಗೆ ಬೆಲೆ ಕಟ್ಟಲಾಗದು. ಅವರ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ಸೇವೆ ಯುವ ಪೀಳಿಗೆಗೂ ವಿಸ್ತಾರವಾಗಲಿ ಎನ್ನುವ ಹಂಬಲದೊಂದಿಗೆ ಲಕ್ಷಾಂತರ ರೂ. ಮೌಲ್ಯದ ನಿವೇಶನ ನೀಡಿದ್ದೇವೆ. ಆದರೂ ಸರ್ಕಾರ ಸ್ವಾತಂತ್ರ್ಯ ಸೌಧ ನಿರ್ಮಾಣ ಮಾಡಲು ಮೀನಮೇಷ ಮಾಡುತ್ತಿರುವುದು ಬೇಸರವೆನಿಸಿದೆ ಎನ್ನುತ್ತಾರೆ ಮೋಹನಲಾಲ್ ಜೈನ್‌ ಹಾಗೂ ಅಮರಚಂದ್‌ ಜೈನ್‌.

ಫೂಲಚಂದ್‌ ಸ್ವಾತಂತ್ರ್ಯ ಚಳವಳಿ: ಫೂಲಚಂದ ಚುನಿಲಾಲ್ ತಾಲೇಡ್‌ ಅವರು ಮೂಲತಃ ರಾಜಸ್ಥಾನ ಪಾಲಿ ಜಿಲ್ಲೆಯ ಚಾವುಂಡಿಯಾ ಗ್ರಾಮದವರು. 125 ವರ್ಷಗಳ ಹಿಂದೆ ಬಟ್ಟೆ ವ್ಯಾಪಾರಕ್ಕಾಗಿ ಕುಷ್ಟಗಿ ತಾಲೂಕಿನ ಗೊಲ್ಲರಹಳ್ಳಿ (ಈಗಿನ ಯಲಬುರ್ಗಾ ತಾಲೂಕು) ವಲಸೆ ಬಂದಿದ್ದರು. ಸದರಿ ಗೊಲ್ಲರಹಳ್ಳಿ ಗ್ರಾಮದಲ್ಲಿ 26-1-2019ರಲ್ಲಿ ಜನಿಸಿದ್ದ ಫೂಲಚಂದ ಅವರು 6 ವರ್ಷದಿಂದ 14 ವರ್ಷದವರೆಗೂ ತಮ್ಮ ತಂದೆಯ ಸಹೋದರ ನೆಲೆಸಿದ್ದ ಮದ್ರಾಸ್‌ನಲ್ಲಿ ಬಾಲ್ಯದ ಜೀವನ ಕಳೆದರು. ನಂತರ ಕುಷ್ಟಗಿಗೆ ಬಂದಾಗ ರಜಾಕರು ಫೂಲಚಂದ ಅವರ ಮನೆಯಲ್ಲಿನ ಚಿನ್ನಾಭರಣ ಲೂಟಿ ಮಾಡಿದ್ದರು. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮಾಹಿತಿ ಸಂವಹನಕ್ಕಾಗಿ ಸೈಕಲ್ಗಳನ್ನು ನೀಡಿದ್ದರು. 30ನೇ ವರ್ಷಕ್ಕೆ ಸಕ್ರಿಯ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮಕಿದರು. 1946ರಲ್ಲಿ ಬ್ರಿಟಿಷರ ವಿರುದ್ದ ಧಂಗೆ ಎದ್ದಿದ್ದರಿಂದ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ 2 ವರ್ಷ 9 ತಿಂಗಳು ಕಳೆದರು. ಇವರೊಂದಿಗೆ ರಮಾನಂದ ತೀರ್ಥರು, ವೀರೇಂದ್ರ ಪಾಟೀಲ, ಬಿ.ಡಿ. ಜತ್ತಿ, ಶಿವಮೂರ್ತಿ ಅಳವಂಡಿ, ಜಗನ್ನಾಥರಾವ್‌ ಪದಕಿ ಬುಡಕುಂಟಿ ಸೆರೆಮನೆವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಸೇನಾನಿ ಭೀಮಜ್ಜ ಮುರುಡಿ ನೇತೃತ್ವದ ಗಜೇಂದ್ರಗಡ ಶಿಬಿರದಲ್ಲಿ ಪುಂಡಲೀಕಪ್ಪ ಜ್ಞಾನಮೋಠೆ, ಜಗನ್ನಾಥರಾವ್‌ ಪದಕಿ, ಫೂಲಚಂದ ಚುನಿಲಾಲ್ ತಾಲೇಡ್‌ ಮುಂಚೂಣಿಯಲ್ಲಿದ್ದರು.

 

Advertisement

•ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next