ಕಲಬುರಗಿ: ಛತ್ತಿಸ್‌ಘಡದ ಬಿಜಾಪುರ್ ಜಿಲ್ಲೆಯ ಕೇಶುಕುಟಲ್ ಪ್ರದೇಶದಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪಡೆಯ ಎಎಸ್‌ಐ ಮಹಾದೇವಪ್ಪ ಪೊಲೀಸ್ ಪಾಟೀಲ ಹುತಾತ್ಮರಾಗಿದ್ದು, ಹುಟ್ಟೂರು ಮರಗುತ್ತಿಯಲ್ಲಿ ನೀರವ ಮೌನ ಆವರಿಸಿದೆ.
ಕಳೆದ 29 ವರ್ಷದಿಂದ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾದೇವಪ್ಪ ಅವರು ಶುಕ್ರವಾರ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಕ್ಸಲ್‌ರ ದಾಳಿಗೊಳಗಾಗಿದ್ದು, ಇದೇ ಸಂದರ್ಭ ಉತ್ತರ ಪ್ರದೇಶ ಹಾಗೂ ಕೇರಳದ ಇಬ್ಬರು ಯೋಧರೂ ಹುತಾತ್ಮರಾಗಿದ್ದಾರೆ.
ಮಹಾದೇವಪ್ಪ ಪೊಲೀಸ್ ಪಾಟೀಲ ಕಲಬುರಗಿ ತಾಲೂಕಿನ ಮರಗುತ್ತಿ ಗ್ರಾಮದವರು. ಜುಲೈ 1ರಂದು ಮಗಳ ಸೀಮಂತ ಕಾರ್ಯಕ್ರಮವಿತ್ತು. ಹೀಗಾಗಿ ಎರಡು ದಿನದೊಳಗೆ ರಜೆ ಮೇಲೆ ಮರಗುತ್ತಿಗೆ ಬರುವವರಿದ್ದರು. ಆದರೆ ವಿಧಿಯಾಟ ಅವಕಾಶ ನೀಡಲಿಲ್ಲ.
ಗ್ರಾಮಕ್ಕೆ ಪಾರ್ಥಿವ ಶರೀರ: ಪಾರ್ಥಿವ ಶರೀರ ಶನಿವಾರ ಬೆಳಗ್ಗೆ ಹೈದ್ರಾಬಾದ್‌ಗೆ ಬರಲಿದೆ ಎಂಬುದಾಗಿ ಭದ್ರತಾ ಪಡೆಯಿಂದ ಸಂದೇಶವೊಂದು ಬಂದಿದ್ದು, ಕುಟುಂಬ ವರ್ಗದವರಲ್ಲಿ ಕೆಲವರು ಶುಕ್ರವಾರ ಮಧ್ಯಾಹ್ನವೇ ಹೈದ್ರಾಬಾದ್‌ಗೆ ತೆರಳಿದ್ದಾರೆ. ಶನಿವಾರ ಸಂಜೆ ಹೊತ್ತಿಗೆ ಮರಗುತ್ತಿಯಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಹಾದೇವಪ್ಪ ಅವರ ಮನೆ ಹೈದ್ರಾಬಾದ್‌ನಲ್ಲಿದ್ದು, ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಪತ್ನಿ ಮಲ್ಲಮ್ಮ, ಪುತ್ರಿ ಜ್ಯೋತಿ, ಪುತ್ರರಾದ ಸಂದೀಪ ಹಾಗೂ ಕುಲದೀಪ ಹುತಾತ್ಮ ಸುದ್ದಿ ನಂಬುತ್ತಿಲ್ಲ. ಇನ್ನೂ ಜೀವಂತವಿದ್ದಾರೆ ಎನ್ನುತ್ತಿದ್ದಾರೆ.