Advertisement

ಆರಕ್ಷಕರಿಗೆ ವಾರಿಯರ್ ಸಹಕಾರ

12:28 PM Apr 12, 2020 | mahesh |

ಬೆಂಗಳೂರು: ನಗರದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಅನಗತ್ಯವಾಗಿ ಸಂಚರಿಸುವವರನ್ನು ನಿಯಂತ್ರಿಸಲು ನಗರದ ದಕ್ಷಿಣ ವಲಯದ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ “ಕೋವಿಡ್-19 ವಾರಿಯರ್’ ಇತರೆ ಹೆಸರಿನಲ್ಲಿ ಸ್ಥಳೀಯ ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ.

Advertisement

ಪೊಲೀಸರೊಂದಿಗೆ ಕಾರ್ಯ ನಿರ್ವಹಿಸಬೇಕಾದ “ಕೋವಿಡ್-19 ವಾರಿಯರ್’ ಪೊಲೀಸರಿಲ್ಲದ ಸಂದರ್ಭದಲ್ಲೂ ಸಾರ್ವಜನಿಕರನ್ನು ತಡೆದು ವಿಚಾರಿಸುವುದು ಕೆಲವೆಡೆ ಗೊಂದಲಕ್ಕೆ ಕಾರಣವಾಗಿದೆ. ಜನರ ಅನಗತ್ಯ ಸಂಚಾರವನ್ನು ತಡೆಯುವ ಕಾರ್ಯದಲ್ಲಿ ಸ್ವಯಂಸೇವಕರ ಪಾತ್ರ ಸಹಕಾರಿಯಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದು, ಯೋಜಿತ ರೀತಿಯಲ್ಲಿ ಸೇವೆ ಬಳಸಿಕೊಳ್ಳುವತ್ತ ಗಮನ ಹರಿಸಬೇಕೆಂಬ ಮಾತು ಕೇಳಿಬಂದಿದೆ. ಕೊರೊನಾ ಸೋಂಕು ತಡೆಗಾಗಿ ಲಾಕ್‌ಡೌನ್‌ ಜಾರಿಯಾಗಿದ್ದು, ಸಾರ್ವಜನಿಕರು ಮನೆಗಳಲ್ಲೇ ಇದ್ದು, ಸಹಕರಿಸುವಂತೆ ಸರ್ಕಾರ ಮನವಿ ಮಾಡುತ್ತಿದೆ. ಅಗತ್ಯ ವಸ್ತುಗಳ ಖರೀದಿ, ತುರ್ತು ಕಾರ್ಯಕ್ಕಷ್ಟೇ ಹೊರ ಬಂದು ತ್ವರಿತವಾಗಿ ಹಿಂದಿರುಗುವಂತೆಯೂ ಕೋರುತ್ತಿದೆ. ಇಷ್ಟಾದರೂ ಅನಗತ್ಯ ಕಾರಣಕ್ಕೆ ನಗರದಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಮುಖ್ಯಮಂತ್ರಿಗಳ ಅಸಮಾಧಾನ: ಜನ ಅನಗತ್ಯವಾಗಿ ಓಡಾಡುತ್ತಿರುವುದು ಸ್ವತಃ ಮುಖ್ಯಮಂತ್ರಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ಶೇ. 20ರಷ್ಟು ಜನ ಅನಗತ್ಯವಾಗಿ ಓಡಾಡುತ್ತಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 15,000ಕ್ಕೂ ಹೆಚ್ಚು ವಾಹನ ಜಪ್ತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ
ಬಿ.ಎಸ್‌.ಯಡಿಯೂರಪ್ಪ ಇತ್ತೀಚೆಗೆ ಹೇಳಿದ್ದರು. ನಗರದ ದಕ್ಷಿಣ ವಿಭಾಗದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ “ಕೊರೊನಾ ವಾರಿಯರ್’ ಹೆಸರಿನಲ್ಲಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಉತ್ತಮ ಚಾರಿತ್ರ್ಯ, ಪೂರ್ವಪರ ಹೊಂದಿರುವ ಹಾಗೂ ಸ್ವಯಂಪ್ರೇರಿತರವಾಗಿ ಸೇವೆ ಸಲ್ಲಿಸಲು ಉತ್ಸುಕರಾಗಿರುವವರನ್ನು ಗುರುತಿಸಲಾಗಿದೆ. ಈ ಸ್ವಯಂ ಸೇವಕರು ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವವರನ್ನು ತಡೆದು ವಿಚಾರಣೆ ನಡೆಸು ವ ಪೊಲೀಸರಿಗೆ ನೆರವಾಗಲಿದ್ದಾರೆ. ಸಂಚಾರದ ಉದ್ದೇಶ, ಅದರ ಅಗತ್ಯತೆ, ಪಾಸ್‌… ಇತರೆ ಪರಿಶೀಲನೆಗೂ ಸಹಕರಿಸುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

“ಕೋವಿಡ್-19 ವಾರಿಯರ್’ ಸ್ವಯಂಸೇವಕರನ್ನು ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಬಳಸಿಕೊಳ್ಳುತ್ತಿಲ್ಲ. ಬದಲಿಗೆ ಸಣ್ಣಪುಟ್ಟ ರಸ್ತೆಗಳು, ಬಡಾವಣೆಯ ಪ್ರಮುಖ ಮಾರ್ಗಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಪೊಲೀಸರೊಂದಿಗೆ ವ್ಯವಹರಿಸಲು ಹಿಂಜರಿಯುವವರು ಸ್ವಯಂಸೇವಕರೊಂದಿಗೆ ಉತ್ತಮವಾಗಿ ವ್ಯವಹರಿಸಲು ಅನುಕೂಲವಾಗುತ್ತಿದೆ. ಇದರಿಂದ ಅನಗತ್ಯ ಸಂಚಾರಕ್ಕೆ ಬ್ರೇಕ್‌ ಹಾಕಲು ಸಹಾಯಕವಾಗುತ್ತಿದೆ ಎಂದು ಹೇಳಿದರು.

ಕೆಲವೆಡೆ ಗೊಂದಲ: ಪೊಲೀಸ್‌ ಸಿಬ್ಬಂದಿ ಸಮ್ಮುಖದಲ್ಲಿ “ಕೊರೊನಾ ವಾರಿಯರ್’ ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರು ಸ್ಪಂದಿಸುತ್ತಾರೆ. ಆದರೆ ಹಲವೆಡೆ ಪೊಲೀಸ್‌ ಸಿಬ್ಬಂದಿ ಇಲ್ಲದ ಕಡೆ “ಕೋವಿಡ್-19 ವಾರಿಯರ್’ ಸಾರ್ವಜನಿಕರನ್ನು ತಡೆದು ವಿಚಾರಣೆ ನಡೆಸುತ್ತಿರುವುದು, ವಾಪಸ್‌ ಹೋಗುವಂತೆ ತಾಕೀತು ಮಾಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. “ಕೊರೊನಾ ವಾರಿಯರ್’ ಎಂದು ಕರೆದುಕೊಳ್ಳುವ ಸ್ವಯಂಸೇವಕರ ಬಳಿ ಯಾವುದೇ ಗುರುತಿನ ಚೀಟಿ ಇಲ್ಲ. ಅವರಿಗೆ ವಹಿಸಿರುವ ಜವಾಬ್ದಾರಿ ಬಗ್ಗೆಯೂ ಸರಿಯಾಗಿ ವಿವರ ನೀಡುವುದಿಲ್ಲ. ಹೀಗಿರುವಾಗ ಅವರು ಪ್ರಶ್ನಿಸುವುದು, ದಾಖಲೆಗಳನ್ನು ಕೇಳುವುದು, ವಾಪಾಸ್‌ ಹೋಗುವಂತೆ ಸೂಚಿಸುವುದು ಸರಿಯಲ್ಲ. ಈ ರೀತಿಯ ಗೊಂದಲ ತಡೆಗೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

Advertisement

ರಾತ್ರಿ ಪಾಳಿಯಲ್ಲೂ ಸೇವೆ
ಲಾಕ್‌ಡೌನ್‌ ಅವಧಿಯಲ್ಲಿ ಸಾರ್ವಜನಿಕರ ಅನಗತ್ಯ ಸಂಚಾರ ತಡೆ ಹಾಗೂ ಮನವರಿಕೆ ಕಾರ್ಯಕ್ಕೆ ಪೊಲೀಸರೊಂದಿಗೆ ಸ್ಥಳೀಯರನ್ನೂ “ಕೊರೊನಾ ವಾರಿಯರ್’ ಇತರೆ ಹೆಸರಿನಲ್ಲಿ ಸ್ವಯಂ ಸೇವಕರನ್ನಾಗಿ ಬಳಸಿ ಕೊಳ್ಳಲಾಗುತ್ತಿದೆ. ಸ್ವಯಂಸೇವಕರಿಂದಾಗಿ ಹೆಚ್ಚಿನ ಬಲ ಬಂದಂತಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ “ಉದಯವಾಣಿ’ಗೆ ತಿಳಿಸಿದರು. ದಕ್ಷಿಣ ವಿಭಾಗ ವ್ಯಾಪ್ತಿಯ ಪೊಲೀಸ್‌ ಠಾಣೆಗಳ ಮಿತಿಯೊಳಗೆ ಆಸಕ್ತ ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಆಯಾ ಠಾಣೆಗೆ ಸೀಮಿತವಾಗಿ ವಾಟ್ಸಾಪ್‌ ಗ್ರೂಪ್‌ ರಚಿಸಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಒಬ್ಬ ಪೊಲೀಸ್‌ ಸಿಬ್ಬಂದಿ ಚೆಕ್‌ಪೋಸ್ಟ್‌ ಬಳಿ ತಪಾಸಣೆ ನಡೆಸುವಾಗ ಅವರೊಂದಿಗೆ ಕೆಲ ಸ್ವಯಂ ಸೇವಕರು ಜೊತೆಗೂಡಿ ಸಹಕರಿಸುತ್ತಿದ್ದಾರೆ ಎಂದು ಹೇಳಿದರು. ಆಯಾ ಠಾಣೆ ವ್ಯಾಪ್ತಿಯಲ್ಲಿರುವ ಸ್ವಯಂ ಸೇವಕರನ್ನೇ ಗುರುತಿ ಸಲಾಗಿದೆ. ಅವರು ಪೊಲೀಸರಿಗೆ ನೆರವಾಗುತ್ತಿದ್ದು, ಹಲವೆಡೆ ರಾತ್ರಿ ಪಾಳಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಪೊಲೀಸ್‌ ಬಲಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ. ಗೊಂದಲವಿಲ್ಲದಂತೆ ಕಾರ್ಯ ನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next