Advertisement

ವಾರೆನ್‌ ವಾರ್ನಿಂಗ್!‌

04:58 AM Jun 01, 2020 | Lakshmi GovindaRaj |

ಆರ್ಥಿಕ ಮಹಾ ಕುಸಿತ ಇರಬಹುದು, ಸುನಾಮಿಯಂಥ ಪ್ರಾಕೃತಿಕ ವಿಕೋಪ ಎದುರಾದ ಸಮಯದಲ್ಲೇ ಇರಬಹುದು; ಆ ಎಲ್ಲಾ ಸವಾಲುಗಳನ್ನು ಮೆಟ್ಟಿ, ದೇಶಗಳ ಆರ್ಥಿಕತೆ ಬೆಳೆದಿದೆ. ಈಗಲೂ ಹಾಗೆಯೇ ಆಗುತ್ತದೆ.

Advertisement

ಜಗತ್ತಿನ ನಾಲ್ಕನೇ ಆಗರ್ಭ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾದವರು, ವಾರೆನ್‌ ಬಫೆಟ್‌ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಝಕರ್‌ಬರ್ಗ್‌ ರಂಥವರಿಗೆ, ಇವರು ಹಿತೈಷಿ ಕೂಡಾ ಹೌದು. ಹೂಡಿಕೆಯ ವಿಷಯದಲ್ಲಿ ವಾರೆನ್‌ ಬಫೆಟ್‌ ಹೇಳುವ ಮಾತುಗಳೇ ಅಂತಿಮ ಎಂದು ನಂಬುವವರ ದಂಡೇ  ಇದೆ. ಷೇರುಪೇಟೆಯಲ್ಲಿ ಹುಲ್ಲುಕಡ್ಡಿ ಅಲುಗಾಡಿದರೂ ಅದು ವಾರೆನ್‌ಗೆ ಕೇಳಿಸುತ್ತದೆ ಎನ್ನುವುದು, ಉದ್ಯಮವಲಯದಲ್ಲಿ ಚಾಲ್ತಿಯಲ್ಲಿರುವ ಮಾತು. ಇಂತಿಪ್ಪ ವಾರೆನ್‌ ಬಫೆಟ್‌, ಕೊರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೆಲ ಸಲಹೆಗಳನ್ನು ನೀಡಿದ್ದಾರೆ.

ಕೆಟ್ಟ ಪರಿಸ್ಥಿತಿಗೆ ಸಿದ್ಧರಾಗಿರಿ: ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ, ನಾಳೆ ಏನಾಗುತ್ತದೆಯೋ ಎಂದು ಹೇಳುವುದು ಕಷ್ಟ. ಹೀಗಾಗಿ, ಎಂಥ ಪ್ರತಿಕೂಲ ಪರಿಣಾಮ ಎದುರಾದರೂ ಅದನ್ನು ಎದುರಿಸಲು ಸಿದ್ಧರಿರಬೇಕು. ನಾಳಿನ  ಕಷ್ಟಕರ ಸಂದರ್ಭಗಳಿಗೆ ತಯಾರಾಗುವ ಉತ್ತಮ ಮಾರ್ಗ  ಎಂದರೆ, ಆರೋಗ್ಯ ವಿಮೆ ಮತ್ತು ಜೀವ ವಿಮೆ ಮಾಡಿಸುವುದು. ಈಗಿನ ದಿನದಲ್ಲಿ, ಯಾವುದೇ ವಿಮಾ ಪಾಲಿಸಿಯ ವಿವರ ಮತ್ತು ಅದು ನೀಡುವ ರಿಟರ್ನ್ಸ್‌ಗಳ ಕುರಿತಾದ  ಮಾಹಿತಿಯನ್ನು, ಇಂಟರ್‌ನೆಟ್‌ನಲ್ಲಿ ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ತಮಗೆ ಸರಿಹೊಂದುವ ವಿಮಾ ಪಾಲಿಸಿ ಆರಿಸಿಕೊಂಡರೆ, ಮುಂದೆ ಎದುರಾಗಬಹುದಾದ ಆಸ್ಪತ್ರೆ ಖರ್ಚಿನ ಚಿಂತೆ ಇಲ್ಲವಾಗುತ್ತದೆ. ವಾರ್ಷಿಕ 10,000 ರೂ.  ಪ್ರೀಮಿಯಂಗೆ, 5 ಲಕ್ಷದ ಕವರೇಜ್‌ ಅನ್ನು ಹೊಂದಬಹುದು.

ಕ್ರೆಡಿಟ್‌ ಕಾರ್ಡ್‌ ಸಾಲ ಮಾಡಬೇಡಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಒಬ್ಬರು, ವಾರೆನ್‌ ಬಫೆಟ್‌ ಬಳಿ ಸಲಹೆ ಕೇಳಲು ಬಂದಿದ್ದರಂತೆ. ವಿಚಾರಿಸಲಾಗಿ, ಅದರಲ್ಲಿ ಕ್ರೆಡಿಟ್‌ ಕಾರ್ಡ್‌ ಸಾಲದ ಪಾಲೇ ಸಾಕಷ್ಟಿತ್ತು. ಈ ಬಗ್ಗೆ ವಾರೆನ್‌  ಹೇಳುವುದಿಷ್ಟು: ತಮ್ಮ ಬಳಿ ಅಷ್ಟಿಷ್ಟು ಹಣ ಉಳಿದಿದ್ದರೆ, ಮೊದಲು ಅದನ್ನು ಕ್ರೆಡಿಟ್‌ ಕಾರ್ಡ್‌ ಸಾಲ ತೀರಿಸಲು ಬಳಸಿ. ಕ್ರೆಡಿಟ್‌ ಕಾರ್ಡ್‌ ಸಾಲ ಹೆಚ್ಚಿದ್ದಾಗ, ಅದನ್ನು ಪರ್ಸನಲ್‌ ಲೋನ್‌ ಆಗಿ ಮಾರ್ಪಡಿಸಿಕೊಳ್ಳಿ. ಏಕೆಂದರೆ, ಪರ್ಸನಲ್‌ ಲೋನ್‌ ಬಡ್ಡಿ, ಕ್ರೆಡಿಟ್‌ ಕಾರ್ಡ್‌ ಸಾಲದ ಬಡ್ಡಿಗಿಂತ ಕಡಿಮೆ ಇರುತ್ತದೆ. ಯಾವ ಕಾರಣಕ್ಕೂ ಕ್ರೆಡಿಟ್‌ ಕಾರ್ಡ್‌ ಸಾಲವನ್ನು ಉಳಿಸಿಕೊಳ್ಳಬೇಡಿ.

ದೂರದೃಷ್ಟಿ ಇರಲಿ: ಭವಿಷ್ಯತ್ತಿನ ಬಗ್ಗೆ ಚಿಂತನೆ ನಡೆಸಲು, ಒಳ್ಳೆಯ ಸಮಯ ಎಂಬುದು ಇರುವುದಿಲ್ಲ. ಹೆಚ್ಚಿನವರು ಸದ್ಯದ ಸುದ್ದಿಗಳು, ವಿದ್ಯಮಾನಗಳನ್ನು ಆಧರಿಸಿ ಭವಿಷ್ಯದ ಕಲ್ಪನೆ ಮಾಡುತ್ತಾರೆ. ಅದರ ಪ್ರಕಾರವೇ  ನಿರ್ಧಾರಗಳನ್ನುಕೈಗೊಳ್ಳುತ್ತಾರೆ. ಹಾಗೆ ನೋಡಿದರೆ ವಿಶ್ವ ಮಹಾಯುದ್ಧ ಇರಬಹುದು, ಆರ್ಥಿಕ ಮಹಾ ಕುಸಿತದ ಸಂದರ್ಭವಿರಬಹುದು, ಸುನಾಮಿಯಂಥ ಪ್ರಾಕೃತಿಕ ವಿಕೋಪ ಎದುರಾದ ಸಮಯದಲ್ಲೇ ಇರಬಹುದು;  ಆ ಎಲ್ಲಾ ಸವಾಲುಗಳನ್ನು ಮೆಟ್ಟಿ, ದೇಶಗಳ ಆರ್ಥಿಕತೆ ಬೆಳೆದಿದೆ. ಈಗಲೂ ಹಾಗೆಯೇ ಆಗುತ್ತದೆ. ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ, ನಮ್ಮೆಲ್ಲಾ ನಿರ್ಧಾರಗಳು ಸದಾ ದೂರದೃಷ್ಟಿತ್ವವನ್ನು ಹೊಂದಿರಬೇಕು ಅನ್ನುತ್ತಾರೆ ಬಫೆಟ್‌  ಹೀಗಾಗಿ  ಪ್ರಸ್ತುತ ವಿದ್ಯಮಾನಗಳು ಎಂಥ ಕೆಟ್ಟ ಸುದ್ದಿಯನ್ನು ತಂದರೂ, ಭವಿಷ್ಯದ ಬಗೆಗಿನ ಪ್ಲಾನಿಂಗ್‌ ಮರೆಯಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next