ಬೆಳಗಾವಿ: ನಗರಲ್ಲಿ ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದರೆ ನಿಮಗೆ ಇನ್ನು ಮುಂದೆ ದೊಡ್ಡ ಪ್ರಮಾಣದ ದಂಡ ಬೀಳುವುದು ಖಚಿತ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದರೆ ಟೋವಿಂಗ್ ವಾಹನ ಬಂದು ಎತ್ತಿಕೊಂಡು ಹೋಗುವುದು ಗ್ಯಾರಂಟಿ.
ಎತ್ತಿಕೊಂಡು ಒಯ್ತಾರೆ ಎಚ್ಚರ: ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಿ ಪೊಲೀಸರಿಗೆ ಭಾರೀ ಕಿರಿಕಿರಿಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರ ಜೊತೆಗೆ ವಾಗ್ವಾದಕ್ಕೂ ಕಾರಣವಾಗಿದೆ. ದಂಡ ಹಾಕಿದರೆ ವಾಹನ ಸವಾರರು ಪೊಲೀಸರೊಂದಿಗೆ ಜಗಳ ಮಾಡಿ ಉದಾಹರಣೆಗಳೂ ಉಂಟು. ಈ ಎಲ್ಲ ಜಗಳ, ವಾಗ್ವಾದಕ್ಕೆ ಇತಿಶ್ರೀ ಹೇಳಲು ಟೋವಿಂಗ್ ವಾಹನಗಳು ನಗರಕ್ಕೆ ಬಂದಿದ್ದು, ನೋ ಪಾರ್ಕಿಂಗ್‌ನಲ್ಲಿದ್ದ ದ್ವಿಚಕ್ರ ವಾಹನವನ್ನು ಟೋವಿಂಗ್‌ನಲ್ಲಿ ಕ್ರೇನ್ ಮೂಲಕ ಎತ್ತಿಹಾಕಿ ನೇರವಾಗಿ ಪೊಲೀಸ್ ಠಾಣೆಗೆ ಒಯ್ಯಲಾಗುತ್ತದೆ.
ದಂಡ ಮೊತ್ತವೇ ಜಾಸ್ತಿ: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಅತಿ ಹೆಚ್ಚಿನ ದಂಡದ ಮೊತ್ತ ತೆರಬೇಕಾಗುತ್ತದೆ. ಕಳೆದ 15 ದಿನಗಳ ಹಿಂದೆಯಷ್ಟೇ ದಂಡ ಪರಿಷ್ಕೃತ ಆಗಿದೆ. ಈ ನಿಟ್ಟಿನಲ್ಲಿ ನೋ ಪಾರ್ಕಿಂಗ್‌ನಲ್ಲಿ ನಿಂತ ವಾಹನಗಳಿಗೆ ಒಂದು ಸಾವಿರ ರೂ. ದಂಡ ಇದೆ. ಟೋವಿಂಗ್‌ನಲ್ಲಿ ಹಾಕಿಕೊಂಡು ಹೋದರೆ 1650 ರೂ. ನೀಡಬೇಕಾಗುತ್ತದೆ. ಈ ದಂಡದ ಮೊತ್ತದಲ್ಲಿ 1 ಸಾವಿರ ರೂ. ದಂಡ, 400 ರೂ. ಸರ್ಕಾರಿ ಶುಲ್ಕ ಹಾಗೂ ಇನ್ನುಳಿದ ಹಣ ಟೋವಿಂಗ್ ವಾಹನದವರಿಗೆ ಜಮಾ ಆಗುತ್ತದೆ.
ಎಲ್ಲೆಲ್ಲಿ ಕಾರ್ಯಾಚರಣೆ: ಸುಮಾರು 10-12 ದಿನಗಳಿಂದ ಟೋವಿಂಗ್ ವಾಹನಗಳು ಕಾರ್ಯಾಚರಣೆ ನಡೆಸಿವೆ. ಈವರೆಗೆ 40-50 ವಾಹನಗಳನ್ನು ಟೋವಿಂಗ್ ಮಾಡಿ ಎತ್ತಿಕೊಂಡು ಹೋಗಲಾಗಿದೆ. ನಗರದ ಖಡೇಬಜಾರ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಾಲೇಜು ರಸ್ತೆ, ಸಮಾದೇವಿ ಗಲ್ಲಿ, ರಾಮದೇವ ಗಲ್ಲಿ, ಕಿರ್ಲೋಸ್ಕರ್ ರೋಡ್ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಟೋವಿಂಗ್ ಕಾರ್ಯಾಚರಣೆ ಮಾಡುತ್ತಿದೆ.
Advertisement
ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಜನದಟ್ಟಣೆ ಕಡಿಮೆ ಮಾಡಲು ಮಹಾನಗರ ಪೊಲೀಸ್ ಕಮೀಷನರೇಟ್ ಎಷ್ಟೇ ಶ್ರಮ ವಹಿಸಿದರೂ, ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿದರೂ ಇದಕ್ಕೆ ತೀಲಾಂಜಲಿ ಹೇಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಈಗ ಸಂಚಾರ ದಟ್ಟಣೆ ಪ್ರಮಾಣ ಇಳಿಸಲು ಟೋವಿಂಗ್ ವಾಹನಗಳನ್ನು ಟೆಂಡರ್ ಮೂಲಕ ಕರೆಯಿಸಿದ್ದು, ಸದ್ಯ ಬೆಳಗಾವಿ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಎರಡು ವಾಹನಗಳು ಕಾರ್ಯಾಚರಣೆ ನಡೆಸಿವೆ.
Related Articles
Advertisement
ಜಾಗವೇ ಇಲ್ಲ, ನಿಲ್ಲಿಸೋದು ಎಲ್ಲಿ?: ನಗರದ ಬಹುತೇಕ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಅಂತೂ ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ತಮ್ಮ ಅಂಗಡಿಗಳ ಮುಂದೆ ಪಾರ್ಕಿಂಗ್ ಮಾಡಿರುತ್ತಾರೆ. ಆದರೆ ಮಾರುಕಟ್ಟೆಗೆ ಬರುವ ವಾಹನ ಸವಾರರು ವಾಹನಗಳನ್ನು ಎಲ್ಲಿ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆ ಆಗಿದೆ. ಹೀಗಾಗಿ ಪೊಲೀಸರು ಹಾಗೂ ವಾಹನ ಸವಾರರ ಮಧ್ಯೆ ಗುದ್ದಾಟಕ್ಕೆ ಕಾರಣವಾಗಿದೆ.
ಟೋವಿಂಗ್ ವಾಹನಗಳು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಮಾರುಕಟ್ಟೆ ಪ್ರದೇಶಗಳಲ್ಲಿ ಮೊದಲಿನಂತೆ ರಸ್ತೆ ಮೇಲೆ, ಎಲ್ಲೆಂದರಲ್ಲಿ ವಾಹನಗಳು ನಿಲ್ಲುತ್ತಿಲ್ಲ. ಪಾರ್ಕಿಂಗ್ ಇರದಿದ್ದರೂ ದೂರದ ಜಾಗಕ್ಕೆ ಹೋಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಮಹಾನಗರ ಪಾಲಿಕೆ ಕೂಡಲೇ ಆಯಾ ಸ್ಥಳಗಳಲ್ಲಿ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಸಂಚಾರ ದಟ್ಟಣೆ ತಡೆಯಲು ಟೋವಿಂಗ್ ವಾಹನಗಳ ಕಾರ್ಯಾಚರಣೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ನಗರದ ಬಹುತೇಕ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಲು ಜಾಗವೇ ಇಲ್ಲ. ಮಾರುಕಟ್ಟೆ ಪ್ರದೇಶಗಳಿಗೆ ಬರುವ ಜನರು ವಾಹನಗಳನ್ನು ಎಲ್ಲಿ ನಿಲ್ಲಿಸುವುದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮಹಾನಗರ ಪಾಲಿಕೆಯವರು ಸೂಕ್ತ ಸ್ಥಳಾವಕಾಶ ಮಾಡಬೇಕು. • ಡಾ| ನಾರಾಯಣ ನಾಯ್ಕ, ನಗರ ನಿವಾಸಿ
ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಬೀಳುವುದು ಗ್ಯಾರಂಟಿ. ಈಗಾಗಲೇ ದಂಡದ ಮೊತ್ತ ಪರಿಷ್ಕರಣೆ ಆಗಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಟೋವಿಂಗ್ ವಾಹನಗಳು ಕಾರ್ಯಾಚರಣೆ ನಡೆಸುತ್ತವೆ. ಹೀಗಾಗಿ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಿ, ನಗರದಲ್ಲಿ ಜನ ದಟ್ಟಣೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಸಹಕರಿಸಬೇಕು. • ಬಿ.ಎಸ್. ಲೋಕೇಶಕುಮಾರ, ಪೊಲೀಸ್ ಕಮೀಷನರ್
•ಭೈರೋಬಾ ಕಾಂಬಳೆ