Advertisement

ಜಿಲ್ಲಾಧಿಕಾರಿ ಭವನದ ತಡೆಗೋಡೆ ಅವೈಜ್ಞಾನಿಕ: ಶಾಸಕದ್ವಯರ ಅಸಮಾಧಾನ

12:59 AM Jul 20, 2022 | Team Udayavani |

ಮಡಿಕೇರಿ: ಜಿಲ್ಲಾಡಳಿತದ ಭವನಕ್ಕೆ ನಿರ್ಮಿಸಿರುವ ತಡೆಗೋಡೆ ಅವೈಜ್ಞಾನಿಕವಾಗಿದ್ದು, ನಮ್ಮ ವಿರೋಧದ ನಡುವೆಯೂ ಎಂಜಿನಿಯರ್‌ಗಳು ಈ ಯೋಜನೆಯನ್ನು ಪೂರ್ಣಗೊಳಿಸಿರುವುದೇ ಅನಾಹುತಕ್ಕೆ ಕಾರಣ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮತ್ತು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಅಪಾಯದಂಚಿನಲ್ಲಿರುವ ತಡೆಗೋಡೆಯನ್ನು ಪರಿಶೀಲಿಸಿದ ಅವರು ಶೀಘ್ರ ದುರಸ್ತಿ ಕಾರ್ಯ ನಡೆಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸೂಚನೆ ನೀಡಿದರು.

ಅಪ್ಪಚ್ಚು ರಂಜನ್‌ ಮಾತನಾಡಿ, ಕಾಮಗಾರಿ ಆರಂಭದ ಸಂದರ್ಭ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸ ಲಾಗಿತ್ತು. ಆದರೆ ದಿಲ್ಲಿಯಿಂದ ವಿನ್ಯಾಸಕರನ್ನು ಕರೆಸಿ ಸ್ಲ್ಯಾಬ್ ಮಾದರಿಯಲ್ಲಿ ತಡೆಗೋಡೆ ಮಾಡಿದ್ದಾರೆ. ಸ್ಲ್ಯಾಬ್ ಮಾದರಿಯ ತಡೆಗೋಡೆ ಕೊಡಗು ಜಿಲ್ಲೆಯ ಮಣ್ಣಿಗೆ ಸರಿಹೊಂದುವುದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಎಂಜಿನಿಯರ್‌ಗಳಿಗೆ ತಿಳಿಸಿದರೂ ಸಹ ಕಿವಿಗೊಡಲಿಲ್ಲ ಎಂದರು.

ಕಳಪೆ ಕಾಮಗಾರಿಯಾಗಿರುವುದು ಕಂಡು ಬಂದಲ್ಲಿ ಗುತ್ತಿಗೆದಾರರನ್ನು ಬ್ಲ್ಯಾಕ್‌ ಲಿಸ್ಟ್‌ಗೆ ಹಾಕಲಾಗುವುದು ಮತ್ತು ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ರೀತಿ ಆದಲ್ಲಿ ಸಾರ್ವಜನಿಕರು ಓಡಾಡುವುದು ಹೇಗೆ ಎಂದು ಎಂಜಿನಿಯರ್‌ಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಎರಡು ದಿನದಲ್ಲಿ ತಡೆಗೋಡೆಯನ್ನು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳ‌ಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಬೋಪಯ್ಯ ಮಾತನಾಡಿ, 9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮಣ್ಣು ಪರೀಕ್ಷೆ ಮಾಡಲಾಗಿದೆಯೇ? ಮಡಿಕೇರಿ ಮಳೆಗೆ ಸೂಕ್ತ ವಿನ್ಯಾಸ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಎಂಜಿನಿಯರ್‌ಗಳು ಸಾಮಾನ್ಯ ಜ್ಞಾನ ಇಲ್ಲದೆ ತಡೆಗೋಡೆ ನಿರ್ಮಿಸಿರುವುದರಿಂದ ದೊಡ್ಡ ಮೊತ್ತದ ಹಣ ನೀರು ಪಾಲಾಗಿದೆ, ಈ ಕಾಮಗಾರಿ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಗೋವಿಂದರಾಜು, ಕಾರ್ಯಪಾಲಕ ಎಂಜಿನಿಯರ್‌ ನಾಗರಾಜು, ಜೂನಿಯರ್‌ ಎಂಜಿನಿಯರ್‌ಗಳಾದ ದೇವರಾಜು, ಸತೀಶ್‌, ಚೆನ್ನಕೇಶವ ಇತರರು ಇದ್ದರು.

ಸಂಚಾರಕ್ಕೆ ಪರ್ಯಾಯ ಮಾರ್ಗ
ಮಡಿಕೇರಿ: ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಹಾಗೂ ಮೇಕೇರಿ ತಾಳತ್ತಮನೆ ನಡುವೆ ಹೆದ್ದಾರಿ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಡಿಕೇರಿ-ಮಂಗಳೂರು ನಡುವೆ ಸಂಚರಿಸುವ ವಾಹನಗಳು ಮಡಿಕೇರಿ, ವೀರಾಜಪೇಟೆ ರಸ್ತೆ ಮೂಲಕ ಮೇಕೇರಿ, ತಾಳತ್‌ಮನೆ, ಸಂಪಾಜೆ ಮಾರ್ಗದಲ್ಲಿ ದ್ವಿಮುಖವಾಗಿ ಸಂಚರಿಸುವುದು.

ಮೈಸೂರು ಮಾರ್ಗ-ಸಂಪಾಜೆ, ಕಾಟಕೇರಿ, ಬೆಟ್ಟಗೇರಿ, ಕೊಟ್ಟಮುಡಿ, ನಾಪೋಕ್ಲು, ಮೂರ್ನಾಡು, ವೀರಾಜಪೇಟೆ ಮೂಲಕ ದ್ವಿಮುಖ ಸಂಚಾರ. ಮಡಿಕೇರಿ ಮಾರ್ಗ-ಸಂಪಾಜೆ, ಕಾಟಕೇರಿ, ಬೆಟ್ಟಗೇರಿ, ಕೊಟ್ಟಮುಡಿ, ನಾಪೋಕ್ಲು, ಮೂರ್ನಾಡು ಮೂಲಕವೂ ದ್ವಿಮುಖ ಸಂಚಾರ ಮಾಡಬಹುದೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next