ಬೆಂಗಳೂರು: ದೇಶದ ಪ್ರತಿಷ್ಠಿತ ದೂರಶಿಕ್ಷಣ ವಿವಿಗಳ ನಕಲಿ ಅಂಕಪಟ್ಟಿ ನೀಡುವ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ವಿವಿಧ ವಿಶ್ವವಿದ್ಯಾಲಯಗಳ 30ಕ್ಕೂ ಹೆಚ್ಚು ನಕಲಿ ಅಂಕಪಟ್ಟಿ, ವಿಶ್ವವಿದ್ಯಾಲಯಗಳ ಸ್ಟಾಂಪ್‌ಗ್ಳು, ಅಂಕಪಟ್ಟಿ ತಯಾರಿಗೆ ಬಳಸುತ್ತಿದ್ದ ಕಂಪ್ಯೂಟರ್ ಸೇರಿ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿ. ಶ್ರೀನಿವಾಸ ರೆಡ್ಡಿ (42)ಬಂಧಿತ ಆರೋಪಿ. ಮಹಾಲಕ್ಷ್ಮೀ ಲೇಔಟ್‌ನಲ್ಲಿ ವಿ.ಎಸ್.ಎಸ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನಲ್ ರೀಸರ್ಚ್ ಅಂಡ್ ವೆಂಕಟೇಶ್ವರ ಇಂಟರ್ ನ್ಯಾಷನಲ್ ಎಜುಕೇಶನಲ್ ಸೊಸೈಟಿ ನಡೆಸುತ್ತಿದ್ದಾನೆ. ಆರೋಪಿ ಬಳಿ ಡೆಲ್ಲಿ ಅಕಾಡೆಮಿಕ್ ಕೌನ್ಸಿಲ್‌ಫಾರ್ ಎಜುಕೇಶನ್, ಹಿಮಾಚಲ ಪ್ರದೇಶದ ಮಾನ್ವ ಭಾರತಿ ವಿವಿ, ಬಿಲಾಸ್‌ಪುರ್‌ನ ಡಾ. ಸರ್ ಸಿ.ವಿ ರಾಮನ್ ವಿ.ವಿ, ತಿರುಪತಿಯ ವೆಂಕಟೇಶ್ವರ ವಿವಿ ಸೇರಿದಂತೆ ಹತ್ತಾರು ದೂರಶಿಕ್ಷಣ ವಿವಿಗಳ ಅಂಕಪಟ್ಟಿಗಳು ಪತ್ತೆಯಾಗಿವೆ.
ಅಂಕಪಟ್ಟಿ ಅಗತ್ಯ ಇರುವವರನ್ನು ಸಂಪರ್ಕಿಸಿ ದೂರಶಿಕ್ಷಣ ಕೊಡಿಸುವುದಾಗಿ ನಂಬಿಸುತ್ತಿದ್ದ ಆರೋಪಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಎಂಫಿಲ್, ಎಂಟೆಕ್, ಬಿಫಾರ್ಮ್, ಎಂ ಫಾರ್ಮ್, ಬಿಎಡ್, ಎಂಎಡ್ ಕೋರ್ಸ್‌ಗಳಿಗೆ ದಾಖಲು ಮಾಡಿಕೊಳ್ಳುತ್ತಿದ್ದ ಬಳಿಕ ಅವರಿಗೆ ತನ್ನದೇ ಸಂಸ್ಥೆಯಲ್ಲಿ ಪರೀಕ್ಷೆ ಬರೆಸುತ್ತಿದ್ದ. ಪರೀಕ್ಷೆ ಬರೆದವರಿಂದ 40 ಸಾವಿರ ರೂ.ಗಳಿಂದ 2ಲಕ್ಷ ರೂ.ಗಳವರೆಗೆ ಹಣ ಪಡೆದು ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2ನೇ ಬಾರಿ ಆರೋಪಿ ಪೊಲೀಸರ ಅತಿಥಿ!: ಆರೋಪಿ ಶ್ರೀನಿವಾಸ ರೆಡ್ಡಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ಸಂಬಂಧ 2018ರಲ್ಲಿಯೂ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಕಳೆದ ವರ್ಷ ಜನವರಿಯಲ್ಲೂ ವೆಂಕಟೇಶ್ವರ ಎಜುಕೇಶನಲ್ ಸೊಸೈಟಿ ಹೆಸರಿನಲ್ಲಿಯೇ ದಂಧೆ ನಡೆಸುತ್ತಿದ್ದ, ಈ ವೇಳೆ ಆತನ ಸಹಚರನೂ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಶ್ರೀನಿವಾಸ ರೆಡ್ಡಿ ಪುನ: ದಂಧೆ ಆರಂಭಿಸಿದ್ದಾನೆ. ಈ ಕುರಿತು ಮಾಹಿತಿ ಆಧರಿಸಿ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಶ್ರೀನಿವಾಸ ರೆಡ್ಡಿಯನ್ನು ಬಂಧಿಸಿದೆ. ಆತನ ಇನ್ನಿತರೆ ವ್ಯವಹಾರಗಳ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದರು.
ವಿವಿಗಳ ನೈಜತೆ ಬಗ್ಗೆ ತನಿಖೆ!: ಆರೋಪಿ ಬಳಿ ಸಿಕ್ಕಿರುವ ದೂರಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ ಎಂಬುದು ಮೊದಲು ಖಚಿತವಾಗಬೇಕಿದೆ. ಈ ನಿಟ್ಟಿನಲ್ಲಿ ಅವುಗಳ ಇರುವಿಕೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ಅಂಕಪಟ್ಟಿ ಸಿಕ್ಕರೆ ಸಾಕು: ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡು ತ್ತಿದ್ದವರು, ವಿದೇಶಗಳಲ್ಲಿ ಉದ್ಯೋಗ ಮಾಡಲು ಅಂಕಪಟ್ಟಿ ಅಗತ್ಯವಿದ್ದಂತಹವರನ್ನೇ ಶ್ರೀನಿವಾಸ ರೆಡ್ಡಿ ಗುರುತು ಹಾಕಿಕೊಳ್ಳುತ್ತಿದ್ದ ಬಳಿಕ ದೂರ ಶಿಕ್ಷಣದ ಮೂಲಕ ಕಡಿಮೆ ಅವಧಿಯಲ್ಲಿ ಅಂಕಪಟ್ಟಿಗಳನ್ನು ಕೊಡಿಸುವುದಾಗಿ ನಂಬಿಸುತ್ತಿದ್ದ. ಮುಂಬಡ್ತಿ ಹಾಗೂ ವಿದೇಶದಲ್ಲಿ ಕೆಲಸ ಪಡೆಯಲು ತಹತಹಿಸುತ್ತಿದ್ದವರು ಹಣ ಕೊಡಲು ಸಿದ್ಧರಾಗುತ್ತಿದ್ದರು. ಅಂಕಪಟ್ಟಿ ಪಡೆದವರು ನೈಜತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಉದ್ಯೋಗ ನೀಡಿದವರೂ ಅಂಕಪಟ್ಟಿಗಳ ಸಾಚಾತನದ ತಿಳಿಯುವ ಗೋಜಿಗೆ ಹೋಗುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ದಂಧೆ ಮುಂದುವರಿ ಸಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.