ಹಳೆಯಂಗಡಿ: ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ನ, ಪಣಂಬೂರು, ತಣ್ಣೀರುಬಾವಿ, ಸುರತ್ಕಲ್ ಬೀಚ್‌ಗಳಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದನ್ನು ನಿರ್ಬಂಧಿಸಿರುವಂತೆಯೇ ಸಸಿಹಿತ್ಲು ಬೀಚ್‌ನಲ್ಲಿಯೂ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ.
Advertisement
ಸಸಿಹಿತ್ಲಿನ ಕಡಲ ಕಿನಾರೆಗಳಿಗೆ ಆಗಮಿಸುವವರನ್ನು ಅಪಾಯದ ಕುರಿತು ಎಚ್ಚರಿಸಲು ಸೂಚನಾ ಫಲಕಗಳನ್ನು ಹಾಕಲಾಗಿದೆ. ಜತೆಗೆ ಪ್ರವಾಸೋದ್ಯಮ ಇಲಾಖೆಯ ಇಬ್ಬರು ಪ್ರವಾಸಿ ಮಿತ್ರರನ್ನು ಹಾಗೂ ಮೂರು ಮಂದಿ ಗೃಹ ರಕ್ಷಕದಳದವರನ್ನು ಜು. 1ರಿಂದ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಇವರು ಪ್ರತಿದಿನ ಸುರತ್ಕಲ್ ಠಾಣೆಯಲ್ಲಿ ಹಾಜರಾತಿ ಹಾಕಿ ಸಸಿಹಿತ್ಲಿನ ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವ್ಯವಸ್ಥೆ ಆಗಸ್ಟ್‌ವರೆಗೆ ಮುಂದುವರಿಯಲಿದೆ. ಸಸಿಹಿತ್ಲಿನಲ್ಲಿ ಕಳೆದ ವಾರ ಮೂರು ಮಂದಿ ಹಾಗೂ ಉಳ್ಳಾಲದಲ್ಲಿ ಇಬ್ಬರು ಸಮುದ್ರ ಪಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ. ಸಸಿಹಿತ್ಲಿನಲ್ಲಿ ಖಾಯಂ ಜೀವ ರಕ್ಷಕರಾದ ಅನಿಲ್, ಮನೋಜ್, ದಿಲೀಪ್ ಜಗದೀಶ್ ಅವರೊಂದಿಗೆ ಪ್ರವಾಸಿ ಮಿತ್ರ ಮತ್ತು ಗೃಹರಕ್ಷಕದಳದವರು ಕಾರ್ಯ ಪ್ರವೃತ್ತರಾಗಿದ್ದಾರೆ.