ಹರಪನಹಳ್ಳಿ: ಪಟ್ಟಣದ ಶ್ರೀಕೋಟೆ ಆಂಜನೇಯ ದೇವಸ್ಥಾನದ ಸಮಿತಿಯಲ್ಲಿ ಹಗರಣ ಆಗಿದೆ ಎಂದು ಬಾಲಿಶ ಹೇಳಿಕೆ ನೀಡುವುದನ್ನು ಶಾಸಕ ಜಿ. ಕರುಣಾಕರ ರೆಡ್ಡಿ ಅವರು ನಿಲ್ಲಿಸಬೇಕು. ಇಲ್ಲವಾದಲ್ಲಿ ಶಾಸಕರ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀಕೋಟೆ ಆಂಜನೇಯ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ವ್ಯವಹಾರದಲ್ಲಿ 50 ಲಕ್ಷ ರೂ. ಹಗರಣ ನಡೆದಿದೆ ಎಂದು ಶಾಸಕರು ಉಪ ವಿಭಾಗಾಧಿಕಾರಿ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿರುವುದು ಹಾಸ್ಯಸ್ಪದವಾಗಿದೆ. ದೇವಸ್ಥಾನ ಸಮಿತಿಯವರು ನೂರು ರೂಪಾಯಿಗಳನ್ನು ಸಹ ಅವ್ಯವಹಾರ ಮಾಡಿರುವುದಿಲ್ಲ. ಪ್ರಾಮಾಣಿಕವಾಗಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಇಲ್ಲಿಯವರೆಗೂ ದೇವಸ್ಥಾನದ ಹುಂಡಿ ಹಾಗೂ ದೇಣಿಗೆಯಿಂದ ಸಂಗ್ರಹವಾದ ಹಣ 50 ಲಕ್ಷರೂಗಳ ಬೃಹತ್ ಸಂಗ್ರಹವಾಗಿರುವುದಿಲ್ಲ. ಶಾಸಕರು ಬೇರೆವರ ಚಾಡಿ ಮಾತು ಕೇಳಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದ್ದಾರೆ.
ದೇವಸ್ಥಾನ ಸಮಿತಿಯವರು ಯಾವುದೇ ತನಿಖೆ ನಡೆಸಿದರೂ ಸಿದ್ಧರಿದ್ದೇವೆ. ದೇವಸ್ಥಾನ ಬಳಿ ಇರುವ ತರಕಾರಿ ಮಾರುಕಟ್ಟೆಯಲ್ಲಿ ಪುರಸಭೆ ಟೆಂಡರ್‌ದಾರರು ಶಾಸಕರ ಹೆಸರು ಹೇಳಿಕೊಂಡು ಅಕ್ರಮವಾಗಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಅದನ್ನ ತಡೆಯಲು ಪುರಸಭೆ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿರುವ ಶಾಸಕರು ಚಿಕ್ಕಪುಟ್ಟ ಹಣಕ್ಕೆ ಕೈಹಾಕಿರುವುದು ಸಮಂಜಸವಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಟೆಂಡರ್‌ದಾರರಿಗೆ ಮತ್ತು ಪುರಸಭೆಗೆ ಸಂಬಂಧಪಟ್ಟ ವಿಷಯವಾಗಿದೆ. ಹಣ ಹೆಚ್ಚಿಗೆ ವಸೂಲಿ ಮಾಡುವುದು ದೇವಸ್ಥಾನ ಸಮಿತಿಗೆ ಸಂಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕರು ದೇವಸ್ಥಾನ ಅಭಿವೃದ್ಧಿಗೆ ಸಹಕರಿಸುವ ಬದಲು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಬೇಕು ಎಂದು ದೇವಸ್ಥಾನ ಸಮಿತಿಯ ದ್ಯಾಮಜ್ಜಿ ಹನುಮಂತಪ್ಪ, ದ್ಯಾಮಜ್ಜಿ ದಂಡೆಪ್ಪ, ಪಿ. ಮಂಜುನಾಥ್, ಶಿವಶಂಕರ್, ಸಿ.ವೆಂಕಟೇಶ್, ದುರ್ಗಪ್ಪ, ಎಚ್. ವೆಂಕಟೇಶ್, ಹನುಮಂತಪ್ಪ, ಟಿ.ಜಿ.ಕೊಟ್ರೇಶ್, ಎಸ್.ದಾಸಪ್ಪ ಇತರರು ಆಗ್ರಹಿಸಿದ್ದಾರೆ.