ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಕಳೆದ ಮೂವತ್ತು ವರ್ಷಗಳಿಂದ ಹೊರಾಟ ನಡೆದುಕೊಂಡು ಬಂದಿದೆ. ಆದರೂ ಸರ್ಕಾರ ಮನಸ್ಸು ಮಾಡುತ್ತಿಲ್ಲ, ಮುಂಬರುವ ದಿನಗಳಲ್ಲಿ ಜಿಲ್ಲೆ ಮಾಡಬೇಕೆಂದು ಪತ್ರ ಚಳವಳಿ ಆರಂಭಿಸಲಾಗುತ್ತದೆ. ಅದಕ್ಕೂ ಸರ್ಕಾರ ಸ್ಪಂದನೆ ಮಾಡದೇ ಹೋದರೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಲ್ಲಿನ ಐಎಂಎ ಸಭಾಭವನದಲ್ಲಿ ನಡೆದ ಚಿಕ್ಕೋಡಿ ಜಿಲ್ಲೆಗಾಗಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಚಿಕ್ಕೋಡಿ ಬಂದ್ ಹೀಗೆ ಹತ್ತು ಹಲವು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ 10 ಸಾವಿರ ಪತ್ರ ಬರೆದು ಪತ್ರ ಚಳವಳಿ ಆರಂಭಿಸಲಾಗುತ್ತದೆ ಎಂದರು.
ಗಡಿ ಸಮಸ್ಯೆ ನೆಪವೊಡ್ಡಿ ಜಿಲ್ಲೆ ವಿಭಜನೆ ಮಾಡದೇ ಇರುವುದು ವಿಪರ್ಯಾಸ. ಗಡಿ ಸಮಸ್ಯೆ ಇದ್ದರೆ ಗಡಿ ಭಾಗದ ತಾಲೂಕು ಏಕೆ ರಚನೆ ಮಾಡಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕೋಡಿ ಜಿಲ್ಲೆಯಾದರೆ ಗಡಿ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರತ್ಯೇಕ ಅನುದಾನ ಹರಿದು ಬರುವುದರಿಂದ ಗಡಿ ಭಾಗ ಅಭಿವೃದ್ಧಿ ಕಾಣುತ್ತದೆ. ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.
ನ್ಯಾಯವಾದಿ ಎಂ.ಬಿ. ಪಾಟೀಲ ಮಾತನಾಡಿ, ಚಿಕ್ಕೋಡಿ ಜಿಲ್ಲೆ ಬೇಡಿಕೆ ನಮ್ಮ ಹಕ್ಕು. ಇದನ್ನು ಕಿತ್ತುಕೊಳ್ಳುವ ದುಸ್ಸಾಹಕ್ಕೆ ಸರ್ಕಾರ ಕೈಹಾಕಬಾರದು. ಚಿಕ್ಕೋಡಿ ಜಿಲ್ಲೆಗಾಗಿ ಕಾನೂನು ಹೋರಾಟ ಆರಂಭಿಸುವುದು ಅನಿವಾರ್ಯ ಎಂದರು.
ಡಾ| ಎನ್.ಎ.ಮಗದುಮ್ಮ, ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಆರ್.ಎಚ್.ಗೊಂಡೆ, ಉದ್ಯಮಿ ರವಿ ಹಂಪನ್ನವರ, ಚಂದ್ರಕಾಂತ ಹುಕ್ಕೇರಿ, ರಾಜೇಂದ್ರ ಕೋಳಿ, ಸಂಜು ಬಡಿಗೇರ, ಕಾಶಿನಾಥ ಕುರಣಿ, ವಿರೂಪಾಕ್ಷಿ ಕವಟಗಿ ಮಾತನಾಡಿದರು.