ಬೆಂಗಳೂರು: ರಾಜ್ಯದಲ್ಲಿ ಎಪಿಎಂಸಿ, ಭೂ ಸುಧಾರಣೆ, ಜಾನುವಾರು ಹತ್ಯೆ ನಿಷೇಧ ಕಾಯಿದೆಗಳಿಗೆ ತಂದಿರುವ ತಿದ್ದುಪಡಿಯನ್ನು ತತ್‌ಕ್ಷಣದಲ್ಲಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರಾಜ್ಯದ ರೈತರು ಸುವರ್ಣ ವಿಧಾನ ಸೌಧವನ್ನು ಮುತ್ತಿಗೆ ಹಾಕಲಾಗುತ್ತದೆ ಎಂದು ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿರುವುದು ಸ್ವಾಗರ್ತಹ. ಸಂವಿಧಾನಾತ್ಮಕ ಪ್ರಕ್ರಿಯೆಯಲ್ಲಿ ಕಾಯಿದೆಗಳನ್ನು ಹಿಂಪಡೆಯುವ ತನಕ ರಾಜ್ಯದಲ್ಲಿ ಹೆದ್ದಾರಿ ತಡೆ ಚಳುವಳಿ ಮಾಡಲಾಗುತ್ತದೆ. ಚಳುವಳಿಯ ಇನ್ನಿತರ ಬಹು ಮುಖ್ಯ ಬೇಡಿಕೆಗಳಾದ ಬೆಂಬಲ ಬೆಲೆಯನ್ನು ಶಾಸನ ಬದ್ಧಗೊಳಿಸುವುದು ಸೇರಿದಂತೆ ವಿದ್ಯುತ್ಛಕ್ತಿ ಖಾಸಗಿಕರಣ ಮಾಡಬಾರದೆಂಬುದನ್ನೂ ಕೇಂದ್ರ ಸರ್ಕಾರ ಮಾನ್ಯಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಚಳುವಳಿಯಲ್ಲಿ ನಿರತರಾಗಿರುವ ಸುಮಾರು 700 ಕ್ಕೂ ಹೆಚ್ಚು ಸತ್ಯಾಗ್ರಹಿಗಳು ಹುತಾತ್ಮರಾಗಿದ್ದಾರೆ. ಈ ಕುಟುಂಬಳಿಗೆ ತೆಲಂಗಾಣ ಸರ್ಕಾರ ತಲಾ 3 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದೆ, ಅಂತೆಯೇ ರಾಜ್ಯ ಸರ್ಕಾರವು ತಲಾ 10 ಲ.ರೂ., ಕೇಂದ್ರ ಸರ್ಕಾರ ತಲಾ 1 ಕೋ.ರೂ. ಪರಿಹಾರ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ:ಜಲಜೀವನ್ ಮಿಷನ್ ಯೋಜನೆ ಸದ್ಬಳಕೆಯಾಗಲಿ: ಗ್ರಾಪಂ.ಅಧ್ಯಕ್ಷ ಹೆಚ್.ಸಿ.ದೇವೇಂದ್ರ
ಮಳೆಯಿಂದ ರಾಜ್ಯದ ಬಹುತೇಕ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಜನ ಜಾನುವಾರುಗಳು ಸಂಕಷ್ಟಕ್ಕೀಡಾಗಿವೆ. ಇದಕ್ಕೆ ಸಂಭಂದಿಸಿದಂತೆ ನಷ್ಟ ಅನುಭವಿಸಿರುವ ಎಲ್ಲಾ ರೈತರ ಹೊಲ ತೋಟ ಗದ್ದೆಗಳಲ್ಲಿ ಬೆಳೆಯಾನುಸಾರ ಆಗಿರುವ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಬೇಕು ಎಂದರು.ಮುಖಂಡರಾದ ವೀರಭದ್ರ ಸ್ವಾಮೀ, ಭೈರೇಗೌಡ, ಆನಂದ್ ಪಾಟೀಲ್, ರವಿಕುಮಾರ್, ಸುರೇಶ್ ಉಪಸ್ಥಿತರಿದ್ದರು.