Advertisement

ಅನಿರ್ದಿಷ್ಟಾವಧಿ ಮುಷ್ಕರ ವೈದ್ಯರಿಂದ ಎಚ್ಚರಿಕೆ

02:03 AM Aug 02, 2019 | mahesh |

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕದ ವಿರುದ್ಧ ಸಿಡಿದೆದ್ದು ಬುಧವಾರ ದೇಶವ್ಯಾಪಿ ಒಂದು ದಿನದ ಮುಷ್ಕರ ನಡೆಸಿದ್ದ ವೈದ್ಯರು ಗುರುವಾರವೂ ಕೆಲವೆಡೆ ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. ಅಷ್ಟೇ ಅಲ್ಲ, ಈ ವಿಧೇಯಕವು ರಾಜ್ಯಸಭೆಯಲ್ಲೇನಾದರೂ ಅಂಗೀಕಾರಗೊಂಡಲ್ಲಿ, ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

Advertisement

ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರೆಸಿಡೆಂಟ್ ಡಾಕ್ಟರ್‌ಗಳು ಗುರುವಾರ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಏಮ್ಸ್‌, ಸಫ‌್ದರ್‌ಜಂಗ್‌ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್‌ಗಳು ಹಾಗೂ ವಿದ್ಯಾರ್ಥಿಗಳು ಕರ್ತವ್ಯಕ್ಕೆ ಗೈರಾಗಿ, ನವದೆಹಲಿಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದ್ದಾರೆ. ಅವರಿಗೆ ಲೋಕ ನಾಯಕ ಜಯಪ್ರಕಾಶ್‌ ಆಸ್ಪತ್ರೆ, ಬಿ.ಆರ್‌.ಅಂಬೇಡ್ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಹಲವು ಸಂಸ್ಥೆಗಳ ವಿದ್ಯಾರ್ಥಿಗಳು, ವೈದ್ಯರು ಬೆಂಬಲ ವ್ಯಕ್ತಪಡಿಸಿದರು. ಈ ವಿಧೇಯಕವು ಬಡವರ ವಿರೋಧಿ, ವಿದ್ಯಾರ್ಥಿಗಳ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಘೋಷಣೆಗಳನ್ನೂ ಕೂಗಿದರು.

ವಿಧೇಯಕದ ಪ್ರತಿಗಳಿಗೆ ಬೆಂಕಿ: ಕೇರಳದಲ್ಲೂ ಗುರುವಾರ ವೈದ್ಯರು ಹಾಗೂ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದು, ರಾಜಭವನದ ಮುಂಭಾಗದಲ್ಲಿ ವಿಧೇಯಕದ ಪ್ರತಿಗಳನ್ನು ದಹನ ಮಾಡಿದ ಘಟನೆಯೂ ನಡೆಯಿತು. ಇದೇ ವೇಳೆ, ಕೆಲವು ವಿದ್ಯಾರ್ಥಿಗಳು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಅವರನ್ನು ತಡೆದರು. ಐವರು ವಿದ್ಯಾರ್ಥಿಗಳು ಬುಧವಾರದಿಂದಲೇ ರಾಜಭವನದ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ. ಸಿಪಿಎಂ ವಿದ್ಯಾರ್ಥಿ ಘಟಕವಾದ ಎಸ್‌ಎಫ್ಐ, ಶುಕ್ರವಾರ ವಿಧೇಯಕ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next